ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ಪರಿಹಾರ ಪಾವತಿಸದೆ ಆಸ್ತಿ ತೆರವು; ಪಿಡಿಒಗೆ 50 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್
- by LegalSamachar
- November 2, 2026
- 10 Views
ಬೆಂಗಳೂರು: ರಸ್ತೆ ವಿಸ್ತರಣೆಯಂತಹ ಸಾರ್ವಜನಿಕ ಕಾಮಗಾರಿಗಳಿಗಾಗಿ ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ಪರಿಹಾರವನ್ನೂ ನೀಡದೆ ನಾಗರಿಕರ ಆಸ್ತಿ ತೆರವುಗೊಳಿಸುವುದು ಸಂವಿಧಾನದ ಪರಿಚ್ಛೇದ 300ಎ ಅಡಿಯ ಆಸ್ತಿ ಹಕ್ಕಿನ ಉಲ್ಲಂಘನೆ ಎಂದಿರುವ ಹೈಕೋರ್ಟ್, ಅಂಗಡಿಯೊಂದರ ತೆರವು ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಂಗಳೂರು ಗ್ರಾಮ ಪಂಚಾಯಿತಿಯ ಪಿಡಿಒ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದೆ.
ಕೆಡವಲಾದ ಆಸ್ತಿಯ ಭಾಗಕ್ಕೆ ಸಂಬಂಧಿಸಿದಂತೆ ಸ್ವಾಧೀನ ಪ್ರಕ್ರಿಯೆ ಆರಂಭಿಸಿ, ಪರಿಹಾರ ನಿರ್ಧರಿಸಿ ಪಾವತಿಸಬೇಕೆಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ನ್ಯಾಯಪೀಠ, ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ಆಸ್ತಿ ಕೆಡವಿರುವ ಪ್ರಕರಣದಲ್ಲಿ ಪರಿಹಾರ ಪಾವತಿಗೆ ನಿರ್ದೇಶಿಸುವುದರಿಂದ ಮಾತ್ರ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಸಂದಂತೆ ಆಗುವುದಿಲ್ಲ. ಸ್ವಾಧೀನ ಪ್ರಕ್ರಿಯೆ ಆರಂಭಿಸದೆ ಅಥವಾ ಪರಿಹಾರ ನೀಡದೆ ವಸತಿ ಹಾಗೂ ವಾಣಿಜ್ಯ ಬಳಕೆಯ ಆಸ್ತಿಯನ್ನು ಕೆಡವಿರುವುದು ಸಂವಿಧಾನದ ಪರಿಚ್ಛೇದ 300ಎ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪಿಡಿಒ ಅವರ ನಡವಳಿಕೆ, ನಾಗರಿಕರ ಆಸ್ತಿಗೆ ಉಂಟಾದ ಹಾನಿ ಹಾಗೂ ನ್ಯಾಯಾಲಯ ನಿರ್ದೇಶಿಸಿದ್ದ ಜಂಟಿ ಸರ್ವೆಗೂ ಕಾಯದೆ ತೆರವುಗೊಳಿರುವುದನ್ನು ಪರಿಗಣಿಸಿ 50 ಸಾವಿರ ರೂ. ದಂಡ ವಿಧಿಸಿ ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್, ದಂಡದ ಮೊತ್ತವನ್ನು ಪಂಚಾಯ್ತಿ ನಿಧಿಯಿಂದಲ್ಲ, ಪಿಡಿಒ ತಮ್ಮ ಸ್ವಂತ ಜೇಬಿನಿಂದ ನಾಲ್ಕು ವಾರಗಳಲ್ಲಿ ಸಂತ್ರಸ್ತರಿಗೆ ಪರಿಹಾರವಾಗಿ ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಪ್ರಕರಣವೇನು?
ಮಂಗಳೂರು ಗ್ರಾಮದ ಧರ್ಮವೀರ ಅವರಿಗೆ ಸೇರಿದ ಆಸ್ತಿ ಸಂಖ್ಯೆ 449/1ರಲ್ಲಿ ರಸ್ತೆ ಅಗಲೀಕರಣಕ್ಕಾಗಿ 2 ಅಡಿ ಅತಿಕ್ರಮಣ ತೆರವುಗೊಳಿಸುವಂತೆ 2023ರ ಅಕ್ಟೋಬರ್ 22ರಂದು ನೋಟಿಸ್ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಸಂಬಂಧಪಟ್ಟ ಆಸ್ತಿ ಮಾಲೀಕರಿಗೆ ಮುಂಚಿತವಾಗಿ ನೋಟಿಸ್ ನೀಡಿ ಸರ್ವೆ ನಡೆಸಬೇಕು. ಅತಿಕ್ರಮಣವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವವರೆಗೆ ತೆರವು ನೋಟಿಸ್ ಜಾರಿಗೊಳಿಸಬಾರದು ಎಂದು ನ್ಯಾಯಾಲಯ ಸೂಚಿಸಿತ್ತು.
ಆದರೆ, ನ್ಯಾಯಾಲಯ ನಿರ್ದೇಶಿಸಿದ್ದ ಸರ್ವೆ ನಡೆಸುವ ಮುನ್ನವೇ ಪಂಚಾಯಿತಿಯು ಆಸ್ತಿಯ ಭಾಗವನ್ನು ಕೆಡವಿತ್ತು. ಆ ಕ್ರಮವನ್ನು ಪ್ರಶ್ನಿಸಿ ಧರ್ಮವೀರ ಮತ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆಗ ನ್ಯಾಯಾಲಯ ಅರ್ಜಿದಾರರ ಮನವಿ ಪರಿಗಣಿಸುವ ಜತೆಗೆ ಅವರ ಸಮ್ಮುಖದಲ್ಲಿ ಜಂಟಿ ಸರ್ವೆ ನಡೆಸಿ ಅತಿಕ್ರಮಣ ಹಾಗೂ ಕೆಡವಲಾದ ಭಾಗದ ವಿಸ್ತೀರ್ಣ ಗುರುತಿಸುವಂತೆ ನಿರ್ದೇಶಿಸಿತ್ತು.
ನ್ಯಾಯಾಲಯದ ನಿರ್ದೇಶನದಂತೆ ಬಳಿಕ ನಡೆದ ಜಂಟಿ ಸರ್ವೆಯಲ್ಲಿ, ಆಸ್ತಿಯ ಅಳತೆಗಳು ನೋಂದಾಯಿತ ಕ್ರಯಪತ್ರದಲ್ಲಿರುವ ಅಳತೆಗಳಿಗೆ ಹೊಂದಿಕೆಯಾಗಿರುವುದು ಕಂಡುಬಂದಿತ್ತು. ಒಟ್ಟು 1,584 ಚದರ ಅಡಿ ಆಸ್ತಿಯಲ್ಲಿ ಸುಮಾರು 105 ಚದರ ಅಡಿ ಭಾಗವನ್ನು ಕೆಡವಿರುವುದು ದೃಢಪಟ್ಟಿತ್ತು. ಆದರೂ, ಅಂಗಡಿಯ ಯಾವುದೇ ಭಾಗ ಕೆಡವಿಲ್ಲ ಹಾಗೂ ಅರ್ಜಿದಾರರೇ ಅತಿಕ್ರಮಣ ಮಾಡಿದ್ದಾರೆಂದು ತಿಳಿಸಿ ಅಧಿಕಾರಿಗಳು 2025ರ ಸೆಪ್ಟೆಂಬರ್ 2 ಹಾಗೂ ಅಕ್ಟೋಬರ್ 10ರಂದು ಹಿಂಬರಹಗಳನ್ನು ನೀಡಿದ್ದರು. ಅದನ್ನು ಪ್ರಶ್ನಿಸಿ ಧರ್ಮವೀರ ಮೂರನೇ ಬಾರಿಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
Related Articles
Thank you for your comment. It is awaiting moderation.


Comments (0)