ನಟ ದುನಿಯಾ ವಿಜಯ್ – ನಾಗರತ್ನ ದಂಪತಿ ವಿಚ್ಛೇದನ; 2 ಕೋಟಿ ರೂ. ಜೀವನಾಂಶ ಪಾವತಿಸಲು ಹೈಕೋರ್ಟ್ ಆದೇಶ
- by Jagan Ramesh
- September 3, 2026
- 9 Views
ಬೆಂಗಳೂರು: ಚಿತ್ರ ನಟ ದುನಿಯಾ ವಿಜಯ್ ಅಲಿಯಾಸ್ ಬಿ.ಆರ್. ವಿಜಯ್ ಕುಮಾರ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ನಡುವಿನ ವಿಚ್ಛೇದನಕ್ಕೆ ಹೈಕೋರ್ಟ್ ಅನುಮತಿಸಿದೆ.
ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಜಯ್ ಸಲ್ಲಿಸಿದ್ದ ಮೇಲ್ಮನವಿ (ಎಂಎಫ್‌ಎ) ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿ, ವಿಚ್ಛೇದನ ನೀಡಿದೆ. ಜತೆಗೆ, ವಿಜಯ್ ಅವರು ನಾಗರತ್ನ ಅವರಿಗೆ 3 ತಿಂಗಳ ಒಳಗೆ 2 ಕೋಟಿ ರೂ. ಜೀವನಾಂಶ ಪಾವತಿಸಬೇಕೆಂದು ಆದೇಶಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ವಿಜಯ್ 1999ರಲ್ಲಿ ನಾಗರತ್ನ ಜತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಸೇರಿ ಮೂವರು ಮಕ್ಕಳಿದ್ದಾರೆ. ಈ ಮಧ್ಯೆ ದಂಪತಿಯ ನಡುವೆ ಭಿನ್ನಮತ ಮೂಡಿದ್ದು, 2013ರಲ್ಲಿ ಅದು ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು. 2016ರಲ್ಲಿ ನಟಿ ಹಾಗೂ ರೂಪದರ್ಶಿ ಕೀರ್ತಿಗೌಡ ಅವರನ್ನು ದುನಿಯಾ ವಿಜಯ್ ಎರಡನೇ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ನಾಗರತ್ನ ಅವರಿಂದ ವಿಚ್ಚೇದನ ಕೋರಿ ವಿಜಯ್ 2018ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ 2024ರ ಜೂನ್ 13ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿಜಯ್ 2024ರ ಸೆಪ್ಟೆಂಬರ್ 10ರಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಮಾರು ಎರಡು ವರ್ಷಗಳ ವಿಚಾರಣೆಯ ಬಳಿಕ 2026ರ ಆಗಸ್ಟ್ 11ರಂದು ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇದೀಗ, ವಿಜಯ್ ಮೇಲ್ಮನವಿ ಮಾನ್ಯ ಮಾಡಿರುವ ಹೈಕೋರ್ಟ್, ವಿಚ್ಛೇದನ ಮಂಜೂರು ಮಾಡಿದೆ.
Related Articles
Thank you for your comment. It is awaiting moderation.


Comments (0)