ಪ್ರದೂಷ್ ರಾವ್ ಮಾಫಿ ಸಾಕ್ಷಿ; ಸೋಮವಾರ ದರ್ಶನ್ ಅರ್ಜಿ ತೀರ್ಪು ಪ್ರಕಟಿಸಲಿರುವ ಹೈಕೋರ್ಟ್
- by Jagan Ramesh
- September 2, 2026
- 13 Views
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ (ಎ14) ಪ್ರದೂಷ್ ಎಸ್. ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಸೋಮವಾರ (ಸೆಪ್ಟೆಂಬರ್ 7) ಪ್ರಕಟಿಸುವುದಾಗಿ ತಿಳಿಸಿರುವ ಹೈಕೋರ್ಟ್, ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರದೂಷ್ ಸಾಕ್ಷ್ಯ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡಿದೆ.
ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ನಗರದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದು ಕೋರಿ ಪ್ರಕರಣದ 2ನೇ ಆರೋಪಿ ದರ್ಶನ್ ಸಲ್ಲಿಸಿರುವ ಅರ್ಜಿ ಸಂಬಂಧ ಮಂಗಳವಾರವೇ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ತೀರ್ಪು ನೀಡುವುದಾಗಿ ತಿಳಿಸಿತ್ತು.
ಬುಧವಾರ ಪ್ರಕರಣ ವಿಚಾರಣೆಗೆ ಬಂದಾಗ, ಇಂದು ಸಾಕಷ್ಟು ಅರ್ಜಿಗಳು ವಿಚಾರಣೆಗೆ ನಿಗದಿಯಾಗಿವೆ. ಆದ್ದರಿಂದ, ದಿನದ ಕಲಾಪದ ಕೊನೆಯಲ್ಲಿ ಅರ್ಜಿ ಕುರಿತ ಆದೇಶದ ಉಕ್ತಲೇಖನ ನೀಡುವುದಾಗಿ ದರ್ಶನ್ ಪರ ವಕೀಲರಿಗೆ ತಿಳಿಸಿದ ನ್ಯಾಯಮೂರ್ತಿಗಳು ಪ್ರಕರಣವನ್ನು ಕೊಂಚ ಸಮಯ ಮುಂದೂಡಿದ್ದರು.
ಆದರೆ, ದಿನದ ಕಲಾಪ ಮುಗಿಯುವ ಹೊತ್ತಿಗೆ ರಾತ್ರಿ 8 ಗಂಟೆಯಾಗಿತ್ತು. ಆಗ ನ್ಯಾಯಮೂರ್ತಿಗಳು, ಈಗಾಗಲೇ 8 ಗಂಟೆಯಾಗಿದೆ. ಆದೇಶದ ಉಕ್ತಲೇಖನ ನೀಡಲು ಸಾಧ್ಯವೇ? ಎಂದು ದರ್ಶನ್ ಪರ ವಕೀಲರನ್ನು ಕೇಳಿದರು. ದರ್ಶನ್ ಪರ ವಕೀಲರು, ಬೇರೊಂದು ದಿನ ಆದೇಶ ನೀಡಬೇಕು ಎಂದು ಕೋರಿದರು.
ಅದಕ್ಕೆ ಸಮ್ಮತಿಸಿದ ನ್ಯಾಯಪೀಠ, ಸೆಪ್ಟೆಂಬರ್ 7ರಂದು ಅರ್ಜಿ ಕುರಿತ ಆದೇಶ ಪ್ರಕಟಿಸುವುದಾಗಿ ತಿಳಿಸಿದರಲ್ಲದೆ, ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯದ ಪ್ರದೂಷ್ ಸಾಕ್ಷ್ಯವನ್ನು ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಿ, ರಾತ್ರಿ 8 ಗಂಟೆ 7 ನಿಮಿಷಕ್ಕೆ ದಿನದ ಕಲಾಪವನ್ನು ಮುಕ್ತಾಯಗೊಳಿಸಿದರು.
Related Articles
Thank you for your comment. It is awaiting moderation.


Comments (0)