ಕಾನೂನು ಪರಿಭಾಷೆ ಎಂದರೆ ಕಬ್ಬಿಣದ ಕಡಲೆ. ಶ್ರೀಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದ ಕಾನೂನು/ನ್ಯಾಯಾಂಗ ಕ್ಷೇತ್ರದ ನೈಜ ಸುದ್ದಿ, ನ್ಯಾಯಾಲಯಗಳ ತೀರ್ಪು, ಅವುಗಳ ವ್ಯಾಪ್ತಿ, ಆಯಾಮ ಹಾಗೂ ವ್ಯಾಖ್ಯಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಉಣ ಬಡಿಸುವುದೇ “ಲೀಗಲ್ ಸಮಾಚಾರ” ಜಾಲತಾಣದ ಧ್ಯೇಯೋದ್ದೇಶ.
ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಹತ್ತಾರು ವರ್ಷಗಳ ಕಾಲ ಕೋರ್ಟ್ ವರದಿಗಾರಿಕೆಯ ಅನುಭವ ಹೊಂದಿರುವ ನುರಿತ ಪತ್ರಕರ್ತರ ಸಾರಥ್ಯದಲ್ಲಿ “ಲೀಗಲ್ ಸಮಾಚಾರ” ಜನರ ಮುಂದೆ ಬಂದಿದೆ. ಅಧೀನ ನ್ಯಾಯಾಲಯಗಳಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗಿನ ದಿನನಿತ್ಯದ ಕಾನೂನು ಪ್ರಕ್ರಿಯೆಗಳು, ಆದೇಶಗಳನ್ನು ಓದುಗರ ಅಂಗೈಗೇ ತಲುಪಿಸುವ ಜತೆಗೆ, ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಪ್ರಯತ್ನ ನಮ್ಮದು.
ದೇಶದಲ್ಲಿ ಜಾರಿಯಾಗಿರುವ “ಭಾರತೀಯ ನ್ಯಾಯ ಸಂಹಿತೆ”, “ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ” ಹಾಗೂ “ಭಾರತೀಯ ಸಾಕ್ಷ್ಯ ಅಧಿನಿಯಮ”ದಂತಹ ಹೊಚ್ಚ ಹೊಸ ಕಾನೂನುಗಳ ಕುರಿತ ವಿಚಾರಗಳನ್ನು “ಲೀಗಲ್ ಸಮಾಚಾರ” ತನ್ನದೇ ವಿಶಿಷ್ಠ ನಿರೂಪಣೆ-ವಿಶ್ಲೇಷಣೆ ಮೂಲಕ ಓದುಗರ ಮನ ತಲುಪಲಿದೆ. ನ್ಯಾಯಾಲಯಗಳ ಸುದ್ದಿ ಪ್ರಕಟಿಸುವ ಹಲವು ಜಾಲತಾಣಗಳಿದ್ದರೂ, ಸಂಪೂರ್ಣ ಕನ್ನಡದ ಜಾಲತಾಣ “ಲೀಗಲ್ ಸಮಾಚಾರ” ಹೆಚ್ಚಿನ ಸಂಖ್ಯೆಯ ಓದುಗರನ್ನು ಆಕರ್ಷಿಸಲಿದೆ ಎಂಬ ಬಲವಾದ ನಂಬಿಕೆ ಇದೆ.
ಸ್ವಾತಂತ್ರ್ಯೋತ್ಸವದ ಈ ಅಮೃತ ಘಳಿಗೆಯಲ್ಲಿ ಕಣ್ಣು ಬಿಡುತ್ತಿರುವ “ಲೀಗಲ್ ಸಮಾಚಾರ” ಜಾಲತಾಣದ ಕೈ ಹಿಡಿದು ನಡೆಸುವ ಜವಾಬ್ದಾರಿಯನ್ನು ಸಹೃದಯಿ ಓದುಗರು ಸ್ವೀಕರಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಮುಂದಡಿ ಇಡುತ್ತಿದ್ದೇವೆ. ಶ್ರೀಸಾಮಾನ್ಯರಿಗೆ “ಲೀಗಲ್ ಸಮಾಚಾರ” ದಾರಿ ದೀಪವಾಗಲಿ ಎಂಬುದು ನಮ್ಮ ಆಶಯ.
ಜೈ ಹಿಂದ್
ಸಿರಿಗನ್ನಡಂ ಗೆಲ್ಗೆ – ಸಿರಿಗನ್ನಡಂ ಬಾಳ್ಗೆ