ಕೆಪಿಎಸ್‌ಸಿ ಅಕ್ರಮ; ಎಸ್‌ಐಟಿ ಅಧಿಕಾರಿ ನೇಮಕಾತಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿನ ಅಕ್ರಮ ಆರೋಪಗಳ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಅಧಿಕಾರಿಗಳನ್ನು ನೇಮಿಸುವ ವಿಚಾರಕ್ಕೆ ಸಂಬಂಧಿಸಿದ ಆದೇಶವನ್ನು ಹೈಕೋರ್ಟ್‌ ನವೆಂಬರ್ 2ಕ್ಕೆ ಕಾಯ್ದಿರಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ಸೂಚಿಸಿರುವ ಅಧಿಕಾರಿಗಳ ಹೆಸರುಗಳಿಗೆ ಅರ್ಜಿದಾರರ ಪರ ವಕೀಲ ಗಿರೀಶ್‌ ಭಾರದ್ವಾಜ್‌ ಆಕ್ಷೇಪಣೆ ಸಲ್ಲಿಸಿದರು.

ರಾಜ್ಯ ಸರ್ಕಾರದ ಪರ ಹಾಜರಾದ ಅಡ್ವೊಕೇಚ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸರ್ಕಾರ ಎಸ್‌ಐಟಿಗೆ ಪರಿಗಣಿಸಲು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ದರ್ಜೆಯ ಅಧಿಕಾರಿಗಳಾದ ಆರ್‌. ಹಿತೇಂದ್ರ, ಬಿ.ಕೆ. ಸಿಂಗ್‌, ಎಸ್‌. ಮುರುಗನ್‌ ಮತ್ತು ಸೌಮೇಂದು ಮುಖರ್ಜಿ ಅವರ ಹೆಸರುಗಳನ್ನು ಸೂಚಿಸಿದೆ. ಅವರಲ್ಲಿ ಇಬ್ಬರನ್ನು ನೇಮಿಸುವಂತೆ ಮನವಿ ಮಾಡಿದರು.

ವಿಚಾರಣೆ ವೇಳೆ ನ್ಯಾಯಪೀಠ, ರಾಜ್ಯದಲ್ಲಿ ಎಡಿಜಿಪಿ ದರ್ಜೆಯ ಎಷ್ಟು ಅಧಿಕಾರಿಗಳಿದ್ದಾರೆ ಎಂದು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್, ರಾಜ್ಯದಲ್ಲಿ ಈ ದರ್ಜೆಯ 16 ಅಧಿಕಾರಿಗಳಿದ್ದು, ಸುಪ್ರೀಂಕೋರ್ಟ್‌ ಆದೇಶದ ಅನುಸಾರ ನಾಲ್ವರ ಹೆಸರುಗಳನ್ನು ಸೂಚಿಸಲಾಗಿದೆ ಎಂದು ತಿಳಿಸಿದರಲ್ಲದೆ, ಸರ್ಕಾರ ಸೂಚಿಸಿರುವ ಅಧಿಕಾರಿಗಳ ಪೈಕಿ ಇಬ್ಬರ ಬಗ್ಗೆ ಅರ್ಜಿದಾರರು ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಯಾವ ಇಬ್ಬರು ಅಧಿಕಾರಿಗಳ ಬಗ್ಗೆ ಸಹಮತ ವ್ಯಕ್ತವಾಗಿದೆ ಎಂಬ ವಿವರ ಬಹಿರಂಗಗೊಳಿಸಲಿಲ್ಲ. ಜತೆಗೆ, ಎಸ್‌ಐಟಿಗೆ ಪೊಲೀಸ್‌ ಠಾಣೆ ಸ್ಥಾನಮಾನ ನೀಡಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಎಸ್‌ಐಟಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿತು.

ಪ್ರಕರಣ ಸಂಬಂಧ ಅಕ್ಟೋಬರ್ 28ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಎಸ್‌ಐಟಿಯನ್ನು ಪೊಲೀಸ್‌ ಠಾಣೆಯಾಗಿ ಅಧಿಸೂಚನೆ‌ ಹೊರಡಿಸದಿದ್ದಕ್ಕೆ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ, ತನಿಖೆ ಸ್ಥಗಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಮುಂದಿನ ವಿಚಾರಣೆಯೊಳಗೆ ಅಗತ್ಯ ಆದೇಶ ಹೊರಡಿಸುವಂತೆ ತಾಕೀತು ಮಾಡಿತ್ತು.

ಪ್ರಕರಣವೇನು?
ಕೆಪಿಎಸ್‌ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಮನವಿಯನ್ನು ನಿರಾಕರಿಸಿತ್ತಾದರೂ, ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೇತೃತ್ವದ ಐವರು ಸದಸ್ಯರ ಎಸ್‌ಐಟಿ ರಚನೆಗೆ ಸೆಪ್ಟೆಂಬರ್ 21ರಂದು ಆದೇಶಿಸಿತ್ತು.

ಆ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಬಳಿಕ ಸುಪ್ರೀಂಕೋರ್ಟ್‌, ಪ್ರಕರಣವನ್ನು ಆರಂಭದಿಂದ ಹೊಸದಾಗಿ ತನಿಖೆ ನಡೆಸಬೇಕೆಂಬ ಹೈಕೋರ್ಟ್ ನಿರ್ದೇಶನ ರದ್ದುಪಡಿಸಿ, ಈಗಾಗಲೇ ನಡೆದಿರುವ ತನಿಖೆಯ ಹಂತದಿಂದಲೇ ಎಸ್‌ಐಟಿ ಮುಂದಿನ ತನಿಖೆ ನಡೆಸುವಂತೆ ಸೂಚಿಸಿತ್ತು. ಜತೆಗೆ, ಎಸ್‌ಐಟಿ ರಚನೆ ಉಳಿಸಿಕೊಂಡು, ಅದರ ಮುಖ್ಯಸ್ಥರು ಹಾಗೂ ಮತ್ತೊಬ್ಬ ಸದಸ್ಯರ ಬದಲಿಗೆ ಪರ್ಯಾಯ ಹೆಸರುಗಳನ್ನು ಸೂಚಿಸಲು ಸರ್ಕಾರಕ್ಕೆ ಅವಕಾಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಅಧಿಕಾರಿಗಳ ಆಯ್ಕೆ ವಿಚಾರ ಮತ್ತೆ ಹೈಕೋರ್ಟ್‌ ಮುಂದೆ ಬಂದಿತ್ತು.

 

Related Articles

Comments (0)

Leave a Comment