ಖಾಸಗಿ ಆಸ್ಪತ್ರೆಗಳಲ್ಲಿ ಔಷಧ, ಉಪಕರಣಗಳ ಮೂಲ ದರ ಪ್ರಕಟಣೆ ಕಡ್ಡಾಯ; ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
- by Prashanth Basavapatna
- October 29, 2026
- 12 Views
ಬೆಂಗಳೂರು: ಔಷಧ, ವೈದ್ಯಕೀಯ ಉಪಕರಣಗಳು ಮತ್ತು ಬಳಕೆಯ ವಸ್ತುಗಳ ಮೂಲ ದರವನ್ನು ಬಹಿರಂಗವಾಗಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಖಾಸಗಿ ಆಸ್ಪತ್ರೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರೈವೇಟ್ ಹಾಸ್ಪಿಟಲ್ಸ್ ಆ್ಯಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ನ ಡಾ. ಶೋಭಾ ಪ್ರಕಾಶ್, ಪ್ರಿಸ್ಟೈನ್ ಹಾಸ್ಪಿಟಲ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ಪ್ರೈವೇಟ್ ಲಿಮಿಟೆಡ್‌ನ ವೈದ್ಯ ಡಾ. ಹಾಲಗೆರೆ ಮಲ್ಲಿಕಾರ್ಜುನ ಪ್ರಸನ್ನ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು, ಸುತ್ತೋಲೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸುವ ಸಾಧ್ಯತೆಯಿದೆ. ಆದ್ದರಿಂದ, ಒಂದು ದಿನದ ಮಟ್ಟಿಗೆ ಅರ್ಜಿ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಸರ್ಕಾರದ ನಿಲುವು ತಿಳಿಸುವಂತೆ ಹೆಚ್ಚುವರಿ ಸರ್ಕಾರಿ ವಕೀಲರಿಗೆ ಸೂಚಿಸಿತಲ್ಲದೆ, ಸರ್ಕಾರದ ನಿಲುವು ತಿಳಿಸಿದ ಬಳಿಕ ಸುತ್ತೋಲೆಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿತು.
ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಅಕ್ಟೋಬರ್ 30) ಮುಂದೂಡಿತು.
ಪ್ರಕರಣವೇನು?
ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ನವೆಂಬರ್ 1ರಿಂದ ಜಾರಿಯಾಗುವಂತೆ ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಬಳಕೆಯ ವಸ್ತುಗಳ ‘ಲ್ಯಾಂಡಿಂಗ್ ಬೇಸ್ ಪ್ರೈಸ್’ (ಆಮದು/ಖರೀದಿ ಮೂಲ ಬೆಲೆ) ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಅಕ್ಟೋಬರ್ 1ರಂದು ಹೊರಡಿಸಿರುವ ಸುತ್ತೋಲೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
Related Articles
Thank you for your comment. It is awaiting moderation.


Comments (0)