ಪಾನ್ ಮಸಾಲಾ ತಯಾರಿಕಾ ಯಂತ್ರಗಳ ವಿವರ ಘೋಷಿಸದೆ ತೆರಿಗೆ ವಂಚನೆ ಆರೋಪ; ಮಾಲೀಕನಿಗೆ ಹೈಕೋರ್ಟ್ ಜಾಮೀನು

ಬೆಂಗಳೂರು: ಪಾನ್‌ ಮಸಾಲಾ ಉತ್ಪಾದನೆಗೆ ಬಳಸುತ್ತಿದ್ದ ಯಂತ್ರಗಳ ವಿವರ ಘೋಷಿಸದೆ ತೆರಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಎನ್‌ ಸ್ಕ್ವೇರ್‌ ಎಂಟರ್‌ಪ್ರೈಸಸ್‌ನ ಮಾಲೀಕ ಎಸ್‌. ನಿತ್ಯಾನಂದಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಬಂಧಕ್ಕೊಳಗಾಗಿದ್ದ ಬೆಂಗಳೂರಿನ ಶೇಷಾದ್ರಿಪುರ ನಿವಾಸಿ ನಿತ್ಯಾನಂದ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ತನಿಖೆ ಪೂರ್ಣಗೊಂಡಿದ್ದು, ಅಂತಿಮ ವರದಿ ಸಲ್ಲಿಕೆಯಾಗಿದೆ. ಅರ್ಜಿದಾರರ ವಿರುದ್ಧದ ಆರೋಪಗಳು ದಾಖಲೆ ಆಧಾರಿತ ಸಾಕ್ಷ್ಯಗಳನ್ನು ಅವಲಂಬಿಸಿವೆ ಎಂಬ ಅಂಶಗಳನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಇದೇ ವೇಳೆ, ಅರ್ಜಿದಾರರು 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ವಿಚಾರಣಾ ನ್ಯಾಯಾಲಯ ಹಾಜರಾತಿಯಿಂದ ವಿನಾಯಿತಿ ನೀಡದ ಹೊರತು ಎಲ್ಲ ವಿಚಾರಣಾ ದಿನಾಂಕಗಳಂದು ಹಾಜರಾಗಬೇಕು. ಸಾಕ್ಷಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕಬಾರದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಭವಿಷ್ಯದಲ್ಲಿ ಇದೇ ರೀತಿಯ ಅಪರಾಧಗಳಲ್ಲಿ ತೊಡಗಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?
ವಿಶ್ವಾಸಾರ್ಹ ಮಾಹಿತಿ ಆಧರಿಸಿ ನಿತ್ಯಾನಂದ ಅವರ ಕಾರ್ಖಾನೆ ಮತ್ತು ನಿವಾಸದಲ್ಲಿ ಶೋಧ ಹಾಗೂ ಜಪ್ತಿ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಖಾನೆಯಲ್ಲಿ ಆರು ಯಂತ್ರಗಳನ್ನು ಅಳವಡಿಸಿ, 2024ರ ಏಪ್ರಿಲ್‌ನಿಂದ ಪಾನ್‌ ಮಸಾಲಾ ತಯಾರಿಸಲಾಗುತ್ತಿತ್ತು ಎಂಬುದು ಆರೋಪ. ಆ ಅವಧಿಯಿಂದ ಜಿಎಸ್‌ಟಿ ಪಾವತಿ ತಪ್ಪಿಸಿದ್ದಲ್ಲದೆ, ಕಾರ್ಖಾನೆಯಲ್ಲಿ ಅಳವಡಿಸಿದ್ದ ಯಂತ್ರಗಳ ಕುರಿತು ನಿಗದಿತ ನಮೂನೆಯಲ್ಲಿ ಘೋಷಣೆಯನ್ನೂ ಸಲ್ಲಿಸಿರಲಿಲ್ಲ. ಈ ಮೂಲಕ ಸುಮಾರು 42 ಕೋಟಿ ರೂ. ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಕಾಯ್ದೆ-2025ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ನಿತ್ಯಾನಂದ ಅವರನ್ನು 2026ರ ಆಗಸ್ಟ್‌ 20ರಂದು ಬಂಧಿಸಲಾಗಿತ್ತು. ಬಂಧನದ ಬಳಿಕ ನಿತ್ಯಾನಂದ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 1ರಂದು ತಿರಸ್ಕರಿಸಿತ್ತು. ಆ ಬಳಿಕ ಸೆಷನ್ಸ್‌ ನ್ಯಾಯಾಲಯದಲ್ಲೂ ಅಕ್ಟೋಬರ್ 6ರಂದು ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ, ನಿತ್ಯಾನಂದ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment