ಮುಜರಾಯಿ ಇಲಾಖೆ ವಶಕ್ಕೆ ಗಾಳಿ ಆಂಜನೇಯಸ್ವಾಮಿ ದೇವಾಲಯ; ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್
- by Prashanth Basavapatna
- October 17, 2026
- 5 Views
ಬೆಂಗಳೂರು: ನಗರದ ಮೈಸೂರು ರಸ್ತೆಯ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದು 2025ರ ಜುಲೈ 8ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸುಪರ್ದಿಗೆ ಪಡೆದು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದು ಕೋರಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್ನ ಸಂಚಾಲಕರಾದ ಬಿ.ಪಿ. ನಾಗರಾಜು ಹಾಗೂ ಇತರ ಟ್ರಸ್ಟೀಗಳು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಪೀಠ, ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದುಳ್ಳಲಾಗಿದ್ದ ಆದೇಶವನ್ನು ರದ್ದುಪಡಿಸಿತು. ಆದರೆ, ಪ್ರಕರಣದಲ್ಲಿ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಿ ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರ ಕ್ರಮ ಕೈಗೊಳ್ಳಬಹುದು. ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದುಕೊಂಡಿರುವ ಆದೇಶದಲ್ಲಿ ಕಾನೂನು ಲೋಪಗಳು ಇರುವ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರು ಮತ್ತು ಪ್ರತಿವಾದಿಗಳ ಆಕ್ಷೇಪಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಸ್ಪಷ್ಟಪಡಿಸಿತು.
ಜತೆಗೆ, ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಒಪ್ಪಿಸಿ 2025ರ ಜುಲೈ 8ರಂದು ಹೊರಡಿಸಿದ್ದ ಆದೇಶವೇ ರದ್ದಾಗಿರುವುದರಿಂದ ಆ ಆದೇಶ ಆಧರಿಸಿ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಪ್ರಕ್ರಿಯೆ ಸಹ ರದ್ದಾಗಲಿದೆ. ಆದ್ದರಿಂದ, ನ್ಯಾಯಾಲಯದ ಆದೇಶ ವೆಬ್ಸೈಟ್ನಲ್ಲಿ ಪ್ರಕಟಗೊಂಡ ಒಂದು ವಾರದಲ್ಲಿ ಆಡಳಿತಾಧಿಕಾರಿಯು ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ಸಂಬಂಧಪಟ್ಟವರಿಗೆ ಬಿಟ್ಟುಕೊಡಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?
ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ. ದೇವಾಲಯಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ಪ್ರತಿ ವರ್ಷ ಉಳಿತಾಯವಿಲ್ಲದೆ ವೆಚ್ಚ ಮಾಡಲಾಗುತ್ತಿದೆ. ದೇವಸ್ಥಾನದ ಹಣ ದುರುಪಯೋಗವಾಗುತ್ತಿದೆ. ಆದಾಯ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ನಿರ್ವಹಣೆ ಮಾಡಿಲ್ಲ. ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ನೋಟಿಸ್ ನೀಡಿದ ಬಳಿಕ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ. ಇದರಿಂದ, ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಒಪ್ಪಿಸಲಾಗುತ್ತಿದೆ ಎಂದು 2025ರ ಜುಲೈ 8ರಂದು ಹೊರಡಿಸಿದ ಆದೇಶದಲ್ಲಿ ಸರ್ಕಾರ ತಿಳಿಸಿತ್ತು. ಇದನ್ನು ಪ್ರಶ್ನಿಸಿ ದೇವಾಲಯದ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು.
Related Articles
Thank you for your comment. It is awaiting moderation.


Comments (0)