ರೇಣುಕಾಸ್ವಾಮಿ ಕೊಲೆ ಪ್ರಕರಣ; ಸಾಕ್ಷಿ ವಿಚಾರಣೆ ವೇಳೆ ಖುದ್ದು ಹಾಜರಾತಿಗೆ ಅನುಮತಿ ಕೋರಿ ಹೈಕೋರ್ಟ್ ಮೊರೆ ಹೋದ ದರ್ಶನ್
- by Jagan Ramesh
- September 8, 2026
- 7 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ವೇಳೆ ತಮ್ಮನ್ನು ವಿಡಿಯೊ ಕಾನ್ಫರೆನ್ಸ್ (ವಿಸಿ) ಬದಲಿಗೆ ಭೌತಿಕವಾಗಿ ಹಾಜರುಪಡಿಸಲು ಪೊಲೀಸರು ಹಾಗೂ ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಪ್ರಕರಣದ 2ನೇ ಆರೋಪಿಯಾಗಿರುವ ನಟ ದರ್ಶನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ರೇಣುಕಾಸ್ವಾಮಿ ಮೃತದೇಹವನ್ನು ಮೊದಲು ನೋಡಿದ್ದ ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್‌ನ ಭದ್ರತಾ ಸಿಬ್ಬಂದಿ ಕೇವಲ್ ರಾಮ್ ದೋರ್ಜಿ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಸಾಕ್ಷ್ಯ ದಾಖಲಿಸುವಾಗ ಭೌತಿಕ ಹಾಜರಾತಿಗೆ ಅನುಮತಿ ಕೋರಿ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 273ರ ಅಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆಗಸ್ಟ್ 17ರಂದು ಹೊರಡಿಸಿದ್ದ ಆದೇಶ ರದ್ದು ಕೋರಿರುವ ದರ್ಶನ್, ಸಾಕ್ಷಿಗಳ ವಿಚಾರಣೆ ವೇಳೆ ತಮ್ಮನ್ನು ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಾಗೂ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ದರ್ಶನ್ ಅರ್ಜಿಯಲ್ಲೇನಿದೆ?
ಸಾಕ್ಷಿಗಳ ವಿಚಾರಣೆ ವೇಳೆ ವಿಸಿ ಮೂಲಕ ಹಾಜರುಪಡಿಸಲಾಗುತ್ತಿದ್ದು, ಆಗಾಗ ತಾಂತ್ರಿಕ ಅಡಚಣೆಗಳಾಗುತ್ತಿದೆ. ಇದರಿಂದ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಪ್ರಮುಖ ಸಾಕ್ಷಿಗಳ ಪಾಟಿಸವಾಲು ನಡೆಯುವಾಗ ಆರೋಪಿಯು ತನ್ನ ವಕೀಲರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಭೌತಿಕ ಹಾಜರಾತಿ ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ ನ್ಯಾಯಸಮ್ಮತ ವಿಚಾರಣೆಯ ಹಕ್ಕಿನಿಂದ ವಂಚಿತರಾದಂತಾಗುತ್ತದೆ. ಭೌತಿಕವಾಗಿ ಕೋರ್ಟ್‌ಗೆ ಹಾಜರಾಗುವುದಕ್ಕೂ, ವಿಸಿ ಮೂಲಕ ಹಾಜರಾಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಗಂಭೀರ ಅಪರಾಧ ಕೃತ್ಯದ ವಿಚಾರಣೆ ಎದುರಿಸುವಾಗ ಆರೋಪಿಯು ಖುದ್ದು ಕೋರ್ಟ್‌ಗೆ ಹಾಜರಾಗಿ ಪ್ರಾಸಿಕ್ಯೂಷನ್ ಸಾಕ್ಷಿಯ ಸಾಕ್ಷ್ಯ ನಿರೂಪಣೆಯನ್ನು ವೀಕ್ಷಿಸುವ ಅರ್ಹತೆ ಹೊಂದಿರುತ್ತಾನೆ ಎಂದು ದರ್ಶನ್ ಅರ್ಜಿಯಲ್ಲಿ ವಿವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲು ವಿಡಿಯೊ ಕಾನ್ಫರೆನ್ಸ್ ಒಂದು ವಿಧಾನವಾಗಿದೆಯಾದರೂ, ಅದೊಂದೇ ಏಕೈಕ ವಿಧಾನವಾಗಲಾರದು. ವಿಚಾರಣೆಯ ಪ್ರಮುಖ ಹಾಗೂ ನಿರ್ಣಾಯಕ ಹಂತಗಳಲ್ಲಿ ಆರೋಪಿಯ ಸಮ್ಮುಖದಲ್ಲೇ ಸಾಕ್ಷ್ಯ ದಾಖಲಿಸಿಕೊಳ್ಳಬೇಕು ಎನ್ನುವುದು ದರ್ಶನ್ ವಾದವಾಗಿದೆ. ಜತೆಗೆ, ಈ ಪ್ರಕರಣಕ್ಕೆ ಕಾರಣವಾದ ಘಟನೆಯು 2024ರ ಜುಲೈ 1ಕ್ಕೂ ಮುನ್ನ ನಡೆದಿರುವುದರಿಂದ, ಹಿಂದಿನ ಸಿಆರ್‌ಪಿಸಿ ನಿಯಮಗಳೇ ಅನ್ವಯವಾಗಲಿದೆ. ಸೆಕ್ಷನ್ 273ರ ಪ್ರಕಾರ ಸಾಕ್ಷ್ಯಗಳನ್ನು ಆರೋಪಿಯ ಸಮಕ್ಷಮದಲ್ಲಿಯೇ ದಾಖಲಿಸುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಕರಣವೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 2024ರ ಜೂನ್ 11ರಂದು ದರ್ಶನ್ ಬಂಧನಕ್ಕೊಳಗಾಗಿದ್ದಾರೆ. ಇದೇ ಪ್ರಕರಣದಲ್ಲಿ ಇನ್ನೂ 16 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ 2024ರ ಡಿಸೆಂಬರ್ 13ರಂದು ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತಾದರೂ, ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ 2025ರ ಆಗಸ್ಟ್ 15ರಂದು ಅವರು ಮತ್ತೆ ನ್ಯಾಯಾಂಗ ಬಂಧನಕ್ಕೆ ಶರಣಾಗಿದ್ದರು. ಅದೇ ವರ್ಷ ಡಿಸೆಂಬರ್ 17ರಿಂದ ವಿಚಾರಣೆ ಆರಂಭವಾಗಿದೆ. ಸಾಕ್ಷಿಗಳ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಚಾರಣೆಯ ಎಲ್ಲ ಹಂತಗಳಲ್ಲೂ ತಮ್ಮನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಿಆರ್‌ಪಿಸಿ ಸೆಕ್ಷನ್ 273ರ ಅಡಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.


Comments (0)