ಅವಳಿ ಸುರಂಗ ಯೋಜನೆ; ಲಾಲ್‌ಬಾಗ್ ಬಂಡೆಗೆ ಸಂಬಂಧಿಸಿದ ಜಿಎಸ್‌ಐ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- September 4, 2026
- 10 Views
ಬೆಂಗಳೂರು: ನಗರದ ಲಾಲ್‌ಬಾಗ್‌ನಲ್ಲಿರುವ ಅತ್ಯಂತ ಪುರಾತನ ಶಿಲಾ ರಚನೆ ಪೆನಿನ್ಸುಲರ್ ಗ್ನೀಸ್ ಸ್ಮಾರಕ ಅಥವಾ ಲಾಲ್‌ಬಾಗ್ ಬಂಡೆಗೆ ಸಂಬಂಧಿಸಿದಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಜಿಎಸ್‌ಐ) ಸಿದ್ಧಪಡಿಸಿರುವ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಮಹತ್ವಕಾಂಕ್ಷಿ ಯೋಜನೆಯಾದ 16.7 ಕಿ.ಮೀ. ಅವಳಿ ಸುರಂಗ ಮಾರ್ಗ ಯೋಜನೆಗೆ ಆಕ್ಷೇಪಿಸಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ (ಸೆಪ್ಟೆಂಬರ್ 3) ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ಸಂಸದರೂ ಆದ ವಕೀಲ ತೇಜಸ್ವಿ ಸೂರ್ಯ ಹಾಜರಾಗಿ, ಜಿಎಸ್‌ಐ ವರದಿ ಸಲ್ಲಿಸಲು ಸಂಬಂಧಿತ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಕೋರಿಕೆಯನ್ನು ಪುರಸ್ಕರಿಸಿದ ನ್ಯಾಯಪೀಠ ವರದಿ ಸಲ್ಲಿಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿತು.
ಲಾಲ್‌ಬಾಗ್‌ನ ಪೆನಿನ್ಸುಲರ್ ಗ್ನೀಸ್ ಸ್ಮಾರಕ ಸ್ಥಳಾಂತರವು ಮಹತ್ವಕಾಂಕ್ಷಿ ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆಗೆ ಸವಾಲಿನದು ಎಂದು ಪರಿಗಣಿಸಲಾಗಿದೆ.
ಹೆಬ್ಬಾಳ ಕೆರೆ ಮಾರ್ಗ ಸಂಬಂಧ ಪ್ರೆಸೆಂಟೇಷನ್ ಏರ್ಪಡಿಸಲು ನಿರ್ದೇಶನ:
ಇನ್ನು ಇದೇ ಸುರಂಗ ಮಾರ್ಗ ಯೋಜನೆ ಪ್ರಶ್ನಿಸಿರುವ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ನ್ಯಾಯಪೀಠ, ಹೆಬ್ಬಾಳ ಕೆರೆಯಲ್ಲಿ ಸುರಂಗ ಮಾರ್ಗ ಹಾದುಹೋಗುವ ಹಿನ್ನೆಲೆಯಲ್ಲಿ ಎದುರಾಗಿರುವ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇಂಜಿನಿಯರ್ ಅವರಿಂದ ತಾಂತ್ರಿಕ ಉಪನ್ಯಾಸ (ಪ್ರೆಸೆಂಟೇಷನ್) ಏರ್ಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಸುರಂಗ ಮಾರ್ಗದಿಂದ ಹೆಬ್ಬಾಳ ಕೆರೆಗೆ ಒಳ ಹರಿವು ಅಥವಾ ಹೊರ ಹರಿವು ಹಾಗೂ ಅಂತರ್ಜಲದ ಹರಿವಿಗೆ ಅಡ್ಡಿಪಡಿಸಲಿದೆಯೇ ಎಂಬುದನ್ನು ಉಪನ್ಯಾಸದಲ್ಲಿ ಸ್ಪಷ್ಟಪಡಿಸಬೇಕು. ಕೆರೆಯ ತಳದಲ್ಲಿ ಸುರಂಗ ಮಾರ್ಗ ಹಾದು ಹೋಗುವುದರಿಂದ ಇದು ಹೆಬ್ಬಾಳ ಕೆರೆಗೆ ಸೇರುವ ರಾಜಕಾಲುವೆ ಜಾಲಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಅರ್ಜಿದಾರರು ತಿಳಿಸಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಪರ ವಕೀಲೆ ಸ್ನೇಹಾ ನಾಗರಾಜ್ ಅವರು, ಪ್ರಸ್ತಾವಿತ ಯೋಜನೆಯು ಕೆರೆಯ ಬಫರ್ ವಲಯದಲ್ಲಿ ಮಾತ್ರ ಹಾದು ಹೋಗುವುದಿಲ್ಲ, ಅದು ಕೆರೆ ಜಾಗದಲ್ಲಿ ಹೋಗುತ್ತದೆ. ಹೆಬ್ಬಾಳ ಕೆರೆಯು 136 ಎಕರೆ ಇದ್ದು, 3.5 ಎಕರೆ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯೋಜನೆಗೆ ಸ್ವಾಧೀನಪಡಿಸಿಕೊಂಡಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಅಡಿ ಪ್ರಸ್ತಾವಿತ ಯೋಜನೆಗೆ ಕೆರೆಯ ಜಾಗವನ್ನು ವರ್ಗಾಯಿಸಲು ಶಾಸನಬದ್ಧ ಅಧಿಕಾರವಿಲ್ಲ ಎಂದರು.
ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಪ್ರಸ್ತಾವಿತ ಯೋಜನೆಯು ಹೆಬ್ಬಾಳ ಕೆರೆಯ ಒಳಹರಿವು ಮತ್ತು ಹೊರ ಹರಿವಿಗೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದರು.
ಆಗ ನ್ಯಾಯಪೀಠ, ಅರ್ಜಿದಾರರ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇಂಜಿನಿಯರ್ ತಾಂತ್ರಿಕ ಉಪನ್ಯಾಸ ನೀಡುವುದು ಒಳಿತು ಎಂದು ಹೇಳಿತು. ಇದಕ್ಕೆ ಎಜಿ ಒಪ್ಪಿಗೆ ಸೂಚಿಸಿದರು. ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿಲಾಗಿದೆ.
Related Articles
Thank you for your comment. It is awaiting moderation.


Comments (0)