ಸಂರಕ್ಷಿತ ಸ್ಮಾರಕಗಳ ನಿಷೇಧಿತ-ನಿಯಂತ್ರಿತ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆ ನಿರ್ಬಂಧ ಎತ್ತಿಹಿಡಿದ ಹೈಕೋರ್ಟ್
- by Prashanth Basavapatna
- October 17, 2026
- 2 Views
ಬೆಂಗಳೂರು: ಕೇಂದ್ರ ಸರ್ಕಾರದಿಂದ ಸಂರಕ್ಷಿತವೆಂದು ಘೋಷಿಸಲಾದ ಪುರಾತನ ಸ್ಮಾರಕಗಳ ಸುತ್ತಲಿನ ನಿಷೇಧಿತ ಪ್ರದೇಶ ಹಾಗೂ ನಿಯಂತ್ರಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆ ನಿರ್ಬಂಧಿಸುವ ಕಾನೂನು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಸಂರಕ್ಷಿತ ಸ್ಮಾರಕಗಳ ಸಮೀಪದ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ಮರು ನಿರ್ಮಾಣ, ದುರಸ್ತಿ ಮತ್ತು ನವೀಕರಣ ಚಟುವಟಿಕೆ ನಿಯಂತ್ರಿಸುವ ‘ಪುರಾತನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಹಾಗೂ ಅವಶೇಷಗಳ ಕಾಯ್ದೆ 1958’ರ ಸೆಕ್ಷನ್ಗಳಾದ 20ಎ, 20ಬಿ ಮತ್ತು 20ಸಿ ಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ತುಮಕೂರು ಜಿಲ್ಲೆ ಮಧುಗಿರಿಯ ಕೋಟೆ ಸಮೀಪ ಮನೆ ನಿರ್ಮಿಸಿದ್ದ ಬಿ.ಆರ್. ರಾಮಕೃಷ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸ್ಮಾರಕಗಳ ಸಂರಕ್ಷಣೆಯು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ಉದ್ದೇಶವಾಗಿದ್ದು, ಸೆಕ್ಷನ್ 20ಎ, 20ಬಿ ಹಾಗೂ 20ಸಿ ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಾಯ್ದೆಯ ಸೆಕ್ಷನ್ 20ಎ ಪ್ರಕಾರ, ಕೇಂದ್ರ ಸರ್ಕಾರದಿಂದ ಸಂರಕ್ಷಿತವೆಂದು ಘೋಷಿಸಲಾದ ಸ್ಮಾರಕದ ಗಡಿಯಿಂದ ಎಲ್ಲ ದಿಕ್ಕುಗಳಲ್ಲೂ ಮೊದಲ 100 ಮೀಟರ್ ಪ್ರದೇಶವನ್ನು ‘ನಿಷೇಧಿತ ಪ್ರದೇಶ’ ಎಂದು ಪರಿಗಣಿಸಲಾಗುತ್ತದೆ. ಈ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಹೊಸ ಕಟ್ಟಡ ನಿರ್ಮಾಣ ಅಥವಾ ಮರುನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಪುರಾತತ್ವ ಸಂರಕ್ಷಣೆಗೆ ಅಗತ್ಯವಾದ ಕಾಮಗಾರಿಗಳು ಹಾಗೂ ಕಾನೂನಿನಲ್ಲಿ ನಿರ್ದಿಷ್ಟವಾಗಿ ಅನುಮತಿಸಲಾದ ಸಾರ್ವಜನಿಕ ಕಾಮಗಾರಿಗಳಿಗೆ ಮಾತ್ರ ಸೀಮಿತ ಅವಕಾಶವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮುಂದುವರಿದು, ಸೆಕ್ಷನ್ 20ಬಿ ಪ್ರಕಾರ, ನಿಷೇಧಿತ ಪ್ರದೇಶದ ಗಡಿಯ ನಂತರದ 200 ಮೀಟರ್ ವ್ಯಾಪ್ತಿಯನ್ನು ‘ನಿಯಂತ್ರಿತ ಪ್ರದೇಶ’ ಎಂದು ಗುರುತಿಸಲಾಗುತ್ತದೆ. ಈ ನಿಯಂತ್ರಿತ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲವಾದರೂ ಹೊಸ ಕಟ್ಟಡ ನಿರ್ಮಾಣ, ಮರುನಿರ್ಮಾಣ, ದುರಸ್ತಿ ಅಥವಾ ನವೀಕರಣಕ್ಕೆ ಸಂಬಂಧಪಟ್ಟ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಅನುಮತಿ ಕೋರಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಸೆಕ್ಷನ್ 20ಸಿ ಅಡಿಯಲ್ಲಿ, ನಿಷೇಧಿತ ಪ್ರದೇಶದಲ್ಲಿರುವ ಕಟ್ಟಡದ ದುರಸ್ತಿ ಅಥವಾ ನವೀಕರಣ ಕೈಗೊಳ್ಳಲು ಹಾಗೂ ನಿಯಂತ್ರಿತ ಪ್ರದೇಶದಲ್ಲಿ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳನ್ನು ನಡೆಸಲು ಆಸ್ತಿಯ ಮಾಲೀಕರು ಅಥವಾ ಸಂಬಂಧಪಟ್ಟವರು ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಸ್ಮಾರಕದ ಐತಿಹಾಸಿಕ ಸ್ವರೂಪ, ದೃಶ್ಯಮಾನತೆ, ಪುರಾತತ್ವ ಮಹತ್ವ, ಸುತ್ತಮುತ್ತಲಿನ ಪರಿಸರ ಹಾಗೂ ನಿರ್ಮಾಣದಿಂದ ಉಂಟಾಗಬಹುದಾದ ಪರಿಣಾಮಗಳನ್ನು ಪರಿಶೀಲಿಸಿದ ನಂತರವೇ ಅನುಮತಿ ನೀಡಬೇಕಾಗುತ್ತದೆ. ಸ್ಥಳೀಯ ನಗರಸಭೆ, ಮಹಾನಗರ ಪಾಲಿಕೆ ಅಥವಾ ಇತರ ಯೋಜನಾ ಪ್ರಾಧಿಕಾರದಿಂದ ಕಟ್ಟಡ ಪರವಾನಗಿ ಪಡೆದಿರುವುದೊಂದೇ ಇಂಥ ಕಾಮಗಾರಿಗಳನ್ನು ಆರಂಭಿಸಲು ಸಾಕಾಗುವುದಿಲ್ಲ. ಪುರಾತತ್ವ ಸಂರಕ್ಷಣೆಗೆ ಸಂಬಂಧಿಸಿದ ಕಾನೂನಿನ ಅಡಿಯಲ್ಲಿ ಅಗತ್ಯ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನಿರ್ಮಾಣ ನಿರ್ಬಂಧಗಳಿಂದ ಆಸ್ತಿಯನ್ನು ಬಳಸಿಕೊಳ್ಳುವ ಹಕ್ಕಿಗೆ ಧಕ್ಕೆಯಾಗುತ್ತದೆ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ಆಸ್ತಿಯ ಮಾಲೀಕತ್ವ ಮತ್ತು ಆಸ್ತಿಯ ಮೇಲೆ ಯಾವುದೇ ಮಿತಿಯಿಲ್ಲದೆ ಕಟ್ಟಡ ನಿರ್ಮಿಸುವ ಹಕ್ಕು ಎರಡೂ ಒಂದೇ ಅಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಕಾನೂನಿನ ಮೂಲಕ ಆಸ್ತಿಯ ಬಳಕೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸ್ಮಾರಕಗಳ ಸಂರಕ್ಷಣೆಗಾಗಿ ವಿಧಿಸಲಾಗಿರುವ ನಿರ್ಬಂಧಗಳು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ; ಬದಲಿಗೆ ಅದರ ಬಳಕೆ ಮತ್ತು ಅಭಿವೃದ್ಧಿಯನ್ನು ಮಾತ್ರ ಕಾನೂನುಬದ್ಧವಾಗಿ ನಿಯಂತ್ರಿಸುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸ್ಮಾರಕ ಸಂರಕ್ಷಣೆಯ ಹೆಸರಿನಲ್ಲಿ ತೆಗೆದುಕೊಳ್ಳುವ ಆಡಳಿತಾತ್ಮಕ ನಿರ್ಧಾರ ಏಕಪಕ್ಷೀಯವಾಗಿದ್ದರೆ ಅಥವಾ ಅನುಮತಿ ಅರ್ಜಿಯನ್ನು ಸೂಕ್ತ ಕಾರಣವಿಲ್ಲದೆ ತಿರಸ್ಕರಿಸಿದರೆ, ಸಂಬಂಧಪಟ್ಟವರು ಸೂಕ್ತ ಕಾನೂನು ಪರಿಹಾರ ಪಡೆಯಬಹುದು. ಆದರೆ ಕಾನೂನಿನಲ್ಲಿ ವಿಧಿಸಿರುವ ಮೂಲ ನಿರ್ಬಂಧಗಳನ್ನೇ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Related Articles
Thank you for your comment. It is awaiting moderation.


Comments (0)