ಬಿಜೆಪಿ ಮುಖಂಡನ ಪುತ್ರನ ವಿರುದ್ಧದ ಅತ್ಯಾಚಾರ ಪ್ರಕರಣ; ಸಂತ್ರಸ್ತೆಗೆ 75 ಸಾವಿರ ರೂ. ಜೀವನಾಂಶ ‌ನೀಡುವ ಷರತ್ತಿಗೆ ಒಳಪಟ್ಟು ತಡೆ ನೀಡಿದ ಹೈಕೋರ್ಟ್

ಬೆಂಗಳೂರು: “ಭವಿಷ್ಯವನ್ನು ನೋಡಬೇಕಾದ 20 ವರ್ಷದ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಆ ಹುಡುಗಿಯ ಭವಿಷ್ಯವನ್ನು ನೀವು ಸಂಪೂರ್ಣವಾಗಿ ಕೊಂದಿದ್ದೀರಿ. ಆಕೆ ಈಗ ಮಗುವನ್ನು ನೋಡಿಕೊಳ್ಳಬೇಕೇ ಅಥವಾ ತನ್ನ ಭವಿಷ್ಯವನ್ನು ನೋಡಿಕೊಳ್ಳಬೇಕೇ” ಎಂದು ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರನ್ನು ಹೈಕೋರ್ಟ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಇದೇ ವೇಳೆ, ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಆರೋಪಿಯು ಪ್ರತಿ ತಿಂಗಳು 75 ಸಾವಿರ ರೂ.ಗಳನ್ನು ಪಾವತಿಸಬೇಕು ಎಂಬ ಷರತ್ತಿಗೆ ಒಳಪಟ್ಟಂತೆ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿ ಮಾಡಿದ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಒಂದು ವೇಳೆ ಈ ಪ್ರಕರಣವು ಕೇವಲ ಇಬ್ಬರ ನಡುವಿನ ಒಮ್ಮತದ ಸಂಬಂಧವಾಗಿದ್ದು, ಮಗು ಜನಿಸುವ ಹಂತಕ್ಕೆ ತಲುಪದೆ ಇದ್ದಿದ್ದರೆ ಹಾಗೂ ತಾಯಿ-ಮಗು ಸಂಕಷ್ಟಕ್ಕೆ ಸಿಲುಕದೆ ಇದ್ದಿದ್ದರೆ, ಈ ನ್ಯಾಯಾಲಯ ಪ್ರಕರಣದ ಪ್ರಕ್ರಿಯೆಗಳಿಗೆ ಸಂಪೂರ್ಣ ತಡೆಯಾಜ್ಞೆ ನೀಡುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದ್ದು, ಸಂತ್ರಸ್ತೆಯ ಪೋಷಕರು ಮಗುವನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅರ್ಜಿದಾರರ ಕೃತ್ಯಗಳಿಂದಾಗಿ ಸಂತ್ರಸ್ತೆ ಮತ್ತು ಮಗು ಇಂದು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ, ಪ್ರಕರಣ‌ ಇತ್ಯರ್ಥವಾಗುವವರೆಗೆ ಅರ್ಜಿದಾರ ಆರೋಪಿಯು ಸ್ವತಃ ಅಥವಾ ತನ್ನ ಪೋಷಕರ ಮೂಲಕ ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂ. ಪಾವತಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿ, ಅರ್ಜಿ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿತು.

ಮುಂದಿನ ಒಂದು ವಾರದ ಒಳಗೆ 75 ಸಾವಿರ ರೂ. ಗಳ ಮೊದಲ ಕಂತನ್ನು ಸಂತ್ರಸ್ತೆಗೆ ಪಾವತಿಸಬೇಕು. ಆನಂತರ ಪ್ರತಿ ತಿಂಗಳು ಅದೇ ದಿನಾಂಕದಂದು ತಾಯಿ ಹಾಗೂ ಮಗುವಿನ ಆರೈಕೆಗಾಗಿ ಹಣ ಜಮಾ ಮಾಡಬೇಕು ಎಂದು ಇದೇ ವೇಳೆ ನ್ಯಾಯಾಲಯ ಅರ್ಜಿದಾರರಿಗೆ ನಿರ್ದೇಶಿಸಿದೆ.

ಅರ್ಜಿದಾರರೇ‌ ಮಗುವಿನ ತಂದೆ ಎನ್ನುವುದು ಒಪ್ಪಿತ ಸತ್ಯ:
ಮದುವೆಯ ಸುಳ್ಳು ಭರವಸೆಯ ನೀಡಿ ಸಂತ್ರಸ್ತೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಹಾಗೂ ಪದೇಪದೆ ಅತ್ಯಾಚಾರವೆಸಗಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಅರ್ಜಿದಾರ ಹಾಗೂ ಸಂತ್ರಸ್ತೆ ಇಬ್ಬರೂ ಒಂದೇ ವಯಸ್ಸಿನವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಇಬ್ಬರ ನಡುವಿನ ಸ್ನೇಹ ಪ್ರೇಮವಾಗಿ ಬೆಳೆದು, ನಂತರ ಅದು ಲೈಂಗಿಕ ಸಂಬಂಧಕ್ಕೆ ತಿರುಗಿದೆ. ದೂರುದಾರ ಸಂತ್ರಸ್ತೆ ಹಾಗೂ ಅರ್ಜಿದಾರರ ನಡುವಿನ ಈ ಸಂಬಂಧದಿಂದ ಒಂದು ಮಗು ಜನಿಸಿದ್ದು, ಅರ್ಜಿದಾರರೇ ಮಗುವಿನ ಜೈವಿಕ ತಂದೆ ಎಂಬುದು ಒಪ್ಪಿಕೊಂಡ ಸತ್ಯವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಆರೋಪಿ ಹಾಗೂ ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಅವರ ನಡುವೆ ನಡೆದಿರುವ ಕೃತ್ಯವು ಒಪ್ಪಿತ ಸಂಬಂಧವಾಗಿದೆ. ಆದ್ದರಿಂದ, ಇದು ಬಿ‌ಎನ್‌ಎಸ್ ಸೆಕ್ಷನ್ 64(2)(ಎಂ) (ನಿರಂತರ ಅತ್ಯಾಚಾರ) ಅಥವಾ 69ರ (ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ) ಅಡಿಯಲ್ಲಿ ಅಪರಾಧವಾಗುದಿಲ್ಲ‌ ಎಂದು ಅರ್ಜಿದಾರರ ಪರ ಹಿರಿಯ ವಕೀಲರಾದ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದಾರೆ. ಜೀವನದಲ್ಲಿ ಸಾಕಷ್ಟು ಅವಕಾಶಗಳನ್ನು ಕಾಣಬೇಕಾಗಿದ್ದ ಹುಡುಗಿ ಈಗ ಮಾತೃತ್ವದ ಜೀವನ ಅನುಭವಿಸುತ್ತಿದ್ದಾಳೆ. ಸಂತ್ರಸ್ತೆಯ ತಾಯಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದಾರೆ ಹಾಗೂ ತಂದೆ ದಿನಗೂಲಿ ನೌಕರರಾಗಿದ್ದಾರೆ. ಇದೀಗ ಪೋಷಕರು ಮಗುವನ್ನು ನೋಡಿಕೊಳ್ಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂತ್ರಸ್ತೆಯ ಪರ ವಕೀಲ ಫ್ರಾನ್ಸಿಸ್ ಕ್ಸೇವಿಯರ್ ತಿಳಿಸಿದ್ದಾರೆ ಎಂದೂ ನ್ಯಾಯಪೀಠ ಆದೇಶದಲ್ಲಿ ದಾಖಲಿಸಿದೆ.

ಯುವತಿಯ ಭವಿಷ್ಯವೇ ನಾಶವಾಗಿದೆ:
ಆದೇಶದ ಬಳಿಕ ಅರ್ಜಿದಾರರ ಪರ ವಕೀಲರು ಜೀವನಾಂಶದ ಮೊತ್ತದ ಕುರಿತು ಮನವಿ ಮಾಡಲು ಮುಂದಾದಾಗ ಮಧ್ಯಪ್ರವೇಶಿಸಿದ ನ್ಯಾಯಪೀಠ, ಅರ್ಜಿದಾರರೇ ಮಗುವಿನ ತಂದೆ ಎನ್ನುವುದು ಡಿಎನ್‌ಎ ಪರೀಕ್ಷೆಯಿಂದ ತಿಳಿದುಬಂದಿದೆ. ಆರೋಪಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತೆಯ ಕುಟುಂಬಕ್ಕೆ ಇದೊಂದೇ ದಾರಿ. ಅರ್ಜಿ ಇತ್ಯರ್ಥವಾಗುವವರೆಗೆ ಈ ಆದೇಶ ಹೊರಡಿಸಲಾಗಿದೆ. 20ನೇ ವಯಸಿನಲ್ಲಿ ಭವಿಷ್ಯ ನೋಡಬೇಕಿದ್ದಾಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಎದುರಿಸುವ ಕಷ್ಟಗಳು ನಿಮಗೆ ತಿಳಿದಿಲ್ಲ. ಹುಡುಗಿಯ ಭವಿಷ್ಯವನ್ನು ಆರೋಪಿ ಸಂಪೂರ್ಣವಾಗಿ‌ ಕೊಂದಿದ್ದಾರೆ. ಈಗ ಆಕೆ ಏನು ಮಾಡುತ್ತಾಳೆ? ಮಗುವನ್ನು ನೋಡಿಕೊಳ್ಳಬೇಕೇ? ತನ್ನ ಭವಿಷ್ಯ ನೋಡಿಕೊಳ್ಳಬೇಕೇ? ಬಡ ಕುಟುಂಬದಿಂದ ಬಂದವಳೆಂಬ ಕಾರಣಕ್ಕೆ ಹೀಗೆಲ್ಲ ಮಾಡಲು ಸಾಧ್ಯವಿಲ್ಲ. ಮಗು ಹೊಂದಿರುವ ಸಂತ್ರಸ್ತೆಯ ಸ್ಥಾನದಲ್ಲಿ ನಿಂತು, ಈ ಆದೇಶ ಸರಿ ಇದೆಯೇ ಎಂದು ನೀವೇ ಹೇಳಿ ಎಂದು ಮಾರ್ಮಿಕವಾಗಿ ನುಡಿಯಿತು.

ಮಾಧ್ಯಮಗಳ ಮುಂದೆ ಹೋಗದಂತೆ ನಿರ್ಬಂಧ:
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ಸಂಬಂಧ ಸಂತ್ರಸ್ತೆಯ ಕುಟುಂವದವರು ಪತ್ರಿಕಾಗೋಷ್ಠಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ನಿರಂತರವಾಗಿ ಪತ್ರಿಕಾಗೋಷ್ಠಿಗಳನ್ನು ಕರೆಯಲಾಗುತ್ತಿದೆ. ಸಂತ್ರಸ್ತೆ ಎಲ್ಲರ ಜತೆ, ರಾಜಕೀಯ ಪಕ್ಷಗಳ ಜತೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಥಳೀಯವಾಗಿ ಮಧ್ಯಮಗಳ ವಿಚಾರಣೆ ನಡೆಯುತ್ತಿದೆ. ಇದು ನಿಲ್ಲಬೇಕಾಗಿದೆ. ಅರ್ಜಿದಾರರ ಕುಟುಂಬದವರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಮಾಧ್ಯಮದ ಸುದ್ದಿಗಳಿಂದ ಅವರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ದೂರುದಾರೆಯ ಪರ ವಕೀಲರು, ಸಂತ್ರಸ್ತೆಯು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಅಥವಾ ಮಾಧ್ಯಮಗಳನ್ನು ಕರೆಯುವ ಮೂಲಕ ವಿಷಯವನ್ನು ದೊಡ್ಡದು ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಪ್ರಕರಣವನ್ನು ಈ ನ್ಯಾಯಾಲಯ ಇತ್ಯರ್ಥಪಡಿಸುವವರೆಗೆ ಸಂತ್ರಸ್ತೆ, ಆಕೆಯ ಪೋಷಕರು ಅಥವಾ ಸಂಬಂಧಿಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ನಿರ್ಬಂಧ ವಿಧಿಸಿತು.

Related Articles

Comments (0)

Leave a Comment