ಸಹಪಾಠಿ ವಿದ್ಯಾರ್ಥಿನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಪ್ರೆಟಿ’ ಎಂದು ಸಂದೇಶ; ಯುವಕನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
- by LegalSamachar
- July 22, 2026
- 13 Views
ಬೆಂಗಳೂರು: ಕಾಲೇಜು ಸಹಪಾಠಿಯೊಬ್ಬಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ (ಡಿಎಂ) ಕಳುಹಿಸಿ ‘ಪ್ರೆಟಿ’ (ಅಂದವಾಗಿದ್ದೀಯ) ಎಂದು ಹೊಗಳಿದ್ದ ವಿದ್ಯಾರ್ಥಿಯೊಬ್ಬನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ವಿದ್ಯಾರ್ಥಿ ಜಿ. ಥಾಮಸ್ ಜಡನ್ ಪಾಲ್ಡಾನೊ (21) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಇಂದಿನ ಯುವಜನರು ‘ಜೆನ್ ಜಿ’ ಶೈಲಿಯಲ್ಲಿ ಮಾತನಾಡುವುದನ್ನು ‘ಮಾನಸಿಕ ಕಿರುಕುಳ’ ಅಥವಾ ‘ಮಹಿಳಾ ದೌರ್ಜನ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯುವಜನರ ನಡುವಿನ ಇಂಥ ಖಾಸಗಿ ಸಂಭಾಷಣೆಗಳನ್ನು ಅಪರಾಧೀಕರಿಸಲಾಗದು ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ನ್ಯಾಯಿಕ ಪ್ರಕ್ರಿಯೆಗಳನ್ನು ರದ್ದುಪಡಿಸಿದೆ.
ಕಾನೂನು ಪ್ರಕ್ರಿಯೆಯ ದುರ್ಬಳಕೆ:
ಪ್ರಕರಣದ ಆರೋಪಿ ಹಾಗೂ ದೂರುದಾರೆಯ ಸಂಭಾಷಣೆಯು ಸಾರ್ವಜನಿಕ ವೇದಿಕೆಯಲ್ಲಿ ನಡೆದಿದ್ದಲ್ಲ. ಬದಲಿಗೆ ಅದೊಂದು ಖಾಸಗಿ ಸಂದೇಶ. ಇದು ಇಂದಿನ ವಿದ್ಯಾರ್ಥಿಗಳು ಬಳಸುವ ಸಾಮಾನ್ಯ ಆಡುಭಾಷೆ ಮತ್ತು ಶೈಲಿಯಾಗಿದ್ದು, ಇದು ಅಪರಾಧವಾಗಲು ಹೇಗೆ ಸಾಧ್ಯ? ಇಂತಹ ಖಾಸಗಿ ಸಂಭಾಷಣೆಗಳ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಮುಂದುವರಿಸಿದರೆ, ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಹಾಗೂ ವಿದ್ಯಾರ್ಥಿಯ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಜತೆಗೆ, ವಿದ್ಯಾರ್ಥಿಯಿಂದ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ತಕ್ಷಣವೇ ಹಿಂದಿರುಗಿಸುವಂತೆ ನಿರ್ದೇಶಿಸಿದೆ.
ಅರ್ಜಿದಾರನ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಇಡೀ ಪ್ರಕರಣ ಇಬ್ಬರು ಸಹಪಾಠಿಗಳ ನಡುವಿನ ಇನ್‌ಸ್ಟಾಗ್ರಾಮ್ ಸಂಭಾಷಣೆಯಿಂದ ಹುಟ್ಟಿಕೊಂಡಿದೆ. ದೂರುದಾರೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಅರ್ಜಿದಾರರು ‘ಅಂದವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಆಕೆ ‘ಧನ್ಯವಾದಗಳು’ ಎಂದು ಪ್ರತಿಕ್ರಿಯಿಸಿದ ನಂತರ ಮತ್ತೊಂದು ಸಂದೇಶವನ್ನು ಕಳುಹಿಸಿದ್ದಾರೆ. ಈ ಸಂಬಂಧ ಯುವತಿಯ ತಂದೆ ಆಕೆಯ ಮೂಲಕ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ನ್ಯಾಯಾಲಯದ ಗಮನಸೆಳೆದರು.
ಅರ್ಜಿದಾರರ ವಿರುದ್ಧ ಗೌಪ್ಯತೆಯ ಉಲ್ಲಂಘನೆ, ಮಹಿಳೆಯನ್ನು ಹಿಂಬಾಲಿಸುವುದು, ಮಹಿಳೆಯ ಘನತೆಗೆ ಧಕ್ಕೆ ತರುವ ಅಪರಾಧಗಳನ್ನು ಉಲ್ಲೇಖಿಸಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇಲ್ಲಿ ಅದ್ಯಾವುದೂ ನಡೆದೇ ಇಲ್ಲ, ಅದಕ್ಕೆ ಸಾಕ್ಷ್ಯವೂ ಇಲ್ಲ. ಜತೆಗೆ, ಯುವಕನ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳನ್ನು ಸುಮಾರು ಎರಡು ವರ್ಷಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣವೇನು?
ಅರ್ಜಿದಾರ ವಿದ್ಯಾರ್ಥಿ ತನ್ನ ಸಹಪಾಠಿ ಹಾಗೂ ಗೆಳತಿ (20 ವರ್ಷ) ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಫೋಟೋಗೆ ಪ್ರತಿಕ್ರಿಯಿಸಿ ‘ಪ್ರೆಟಿ’ (Pretty) ಮತ್ತು ‘ಬ್ಯೂಟಿಫುಲ್’ (Beautiful) ಎಂದು ಮೆಸೇಜ್ ಮಾಡಿದ್ದನು. ಆರಂಭದಲ್ಲಿ ಆ ಯುವತಿ ‘ಥ್ಯಾಂಕ್ಸ್’ (Thanks) ಎಂದು ಪ್ರತ್ಯುತ್ತರ ನೀಡಿದ್ದಳು. ಆದರೆ, ನಂತರ ಈ ಚಾಟ್ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಯುವತಿಯ ತಂದೆಯ ಗಮನಕ್ಕೆ ತರಲಾಗಿದ್ದು, ವಿದ್ಯಾರ್ಥಿನಿಯ ಮೂಲಕ ಅರ್ಜಿದಾರನ ವಿರುದ್ಧ ಪೊಲೀಸರಿಗೆ ದೂರು ನೀಡಿಲಾಗಿತ್ತು.
ಪೊಲೀಸರು ಅರ್ಜಿದಾರರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ (ಗೌಪ್ಯತೆಯ ಉಲ್ಲಂಘನೆ) ಹಾಗೂ ಬಿಎನ್‌ಎಸ್ ಸೆಕ್ಷನ್ 77 (ಮಹಿಳೆಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಫೋಟೋ ಅಥವಾ ವಿಡಿಯೊ ಮಾಡುವುದು), ಸೆಕ್ಷನ್ 78 (ಮಹಿಳೆಯನ್ನು ಹಿಂಬಾಲಿಸುವುದು) ಮತ್ತು ಸೆಕ್ಷನ್ 79ರ (ಮಹಿಳೆಯ ಘನತೆಗೆ ಧಕ್ಕೆ ತರುವುದು) ಅಡಿ ಎಫ್‌ಐಆರ್ ದಾಖಲಿಸಲಿಸಿದ್ದರು. ತನಿಖೆಯ ವೇಳೆ ಆತನ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಅನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)