ಧರ್ಮಸ್ಥಳದಲ್ಲಿ ಅಸಹಜವಾಗಿ ಮೃತಪಟ್ಟವರ ಅಂತ್ಯಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ; ಕುಸುಮವತಿ ವಕೀಲರ ವಾದ

ಬೆಂಗಳೂರು: ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅಸಹಜ ರೀತಿಯಲ್ಲಿ ನಾಪತ್ತೆಯಾಗಿರುವುದು ಹಾಗೂ ಮೃತಪಟ್ಟಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ಮೃತರ ಅಂತ್ಯಕ್ರಿಯೆಯಲ್ಲಿ ಕಾನೂನು ಪಾಲನೆಯಾಗಿಲ್ಲ ಎಂದು ಸೌಜನ್ಯಾ ತಾಯಿ ಕುಸುಮವತಿ ಪರ ಹಿರಿಯ ವಕೀಲೆ ವೃಂದಾ ಗ್ರೋವರ್‌ ಹೈಕೋರ್ಟ್‌ಗೆ ತಿಳಿಸಿದರು.

ಧರ್ಮಸ್ಥಳದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕುಸುಮವತಿ ಪರ ವಾದ ಮಂಡಿಸಿದ ಹಿರಿಯ ವಕೀಲೆ ವೃಂದಾ ಗ್ರೋವರ್‌, ಧರ್ಮಸ್ಥಳದಲ್ಲಿ ಹಲವಾರು ನಾಪತ್ತೆ ಹಾಗೂ ಅಸಹಜ ಸಾವು ಪ್ರಕರಣಗಳು ಸಂಭವಿಸಿವೆ. ಇವುಗಳಲ್ಲಿ ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 174 ಮತ್ತು ಕರ್ನಾಟಕ (ಅಸ್ವಾಭಾವಿಕ ಮರಣಗಳ ತನಿಖೆ ಮತ್ತು ವಿಚಾರಣೆಗಳ ನಡವಳಿಕೆ) ನಿಯಮ 2004ರಡಿ ಕಡ್ಡಾಯವಾಗಿ ಕಾನೂನು ಪ್ರಕ್ರಿಯೆ ಪಾಲಿಸದೇ ಶವ ಸಂಸ್ಕಾರ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

ಧರ್ಮಸ್ಥಳ ವ್ಯಾಪ್ತಿಯಲ್ಲಿ ಸಂಭವಿಸಿರುವ 74 ಅಸಹಜ ಸಾವುಗಳ ಪಟ್ಟಿಯನ್ನು ಅರ್ಜಿದಾರೆ ಸಲ್ಲಿಸಿದ್ದಾರೆ. ಅಸಹಜ ರೀತಿಯಲ್ಲಿ ಮೃತಪಟ್ಟವರನ್ನು ಅದೇ ದಿನ ಅಥವಾ ಮರುದಿನವೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಂತ್ಯ ಸಂಸ್ಕಾರ ಮಾಡಲ್ಪಟ್ಟ ಸ್ಥಳಗಳನ್ನು ದಾಖಲಿಸಲಾಗಿಲ್ಲ. ಸಂತ್ರಸ್ತರನ್ನು ಒಂದೇ ರೀತಿಯಲ್ಲಿ, ಅವರ ಹೆಸರು, ವಯಸ್ಸನ್ನು ಉಲ್ಲೇಖಿಸದೇ ಅನಾಮಿಕರು ಎಂದು ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.

ಮುಂದುವರಿದು, ಒಂದೊಮ್ಮೆ ಸಂತ್ರಸ್ತ ವ್ಯಕ್ತಿಯು ಪ್ರವಾಸಿ ಸ್ಥಳಗಳಲ್ಲಿ ಉಳಿದುಕೊಂಡಿದ್ದರೆ ಅವರ ವಿಳಾಸ, ವಯಸ್ಸು, ನೋಂದಣಿ ದಾಖಲೆಗಳು ಇರುತ್ತವೆ. ಆದರೆ, ಗೆಸ್ಟ್‌ ಹೌಸ್‌ ಮತ್ತು ಲಾಡ್ಜ್‌ಗಳಲ್ಲಿ ಸಿಕ್ಕಿರುವ ಮೃತದೇಹಗಳನ್ನೂ ಅನಾಮಿಕರು ಎಂದು ಅಂತ್ಯ ಸಂಸ್ಕಾರ ಮಾಡಲಾಗಿದ್ದು, ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ. ಅವರು ಯಾವ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ನೇಣು ಬಿಗಿದು ಕೊಂಡಿದ್ದಾರೆಯೇ, ವಿಷ ಕುಡಿದಿದಿದ್ದಾರೆಯೇ ಅಥವಾ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆಯೇ ಯಾವುದನ್ನೂ ಉಲ್ಲೇಖಿಸಲಾಗಿಲ್ಲ. ಮೂರು ಪ್ರಕರಣಗಳಲ್ಲಿ ಪೊಲೀಸರು ಯುಡಿಆರ್‌ ಸಂಖ್ಯೆಯನ್ನೂ ನೀಡಿಲ್ಲ ಎಂದು ಆರೋಪಿಸಿದರು.

ಈ ಪ್ರಕರಣಗಳ ಪರಿಶೀಲನೆಗಾಗಿ ರಾಜ್ಯ ಸರ್ಕಾರ 2025ರ ಜುಲೈ 19ರಂದು ಎಸ್‌ಐಟಿ ರಚಿಸಿದೆ. ಎಸ್‌ಐಟಿಯನ್ನೇ ಪೊಲೀಸ್‌ ಠಾಣೆ ಎಂದು ಗುರುತಿಸಲಾಗಿದ್ದು, ಹಿರಿಯ ಶ್ರೇಣಿಯ ಅಧಿಕಾರಿಯನ್ನು ಠಾಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಬಿಎನ್‌ಎಸ್‌ ಅಡಿ ಪ್ರಕ್ರಿಯೆ ನಡೆಸಿ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿ ರಚಿಸಲಾಗಿದೆ. ಮೇಲಿಂದ ಮೇಲೆ ಎಸ್‌ಐಟಿಯು ಪ್ರಕರಣದ ಸಮಗ್ರ ವರದಿ ನೀಡಬೇಕು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ ಎಂದರು.

ಲಾಡ್ಜ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ 2010ರ ಏಪ್ರಿಲ್‌ನಲ್ಲಿ ಸಂಭವಿಸಿದೆ. ಪೊಲೀಸರು ಪಂಚಾಯಿತಿಗೆ ತಿಳಿಸಿ ಕೊಲೆ ಎಂದು ಬರೆಸಿದ್ದಾರೆ. ಆನಂತರ, ಅನಾಮಧೇಯ ಮಹಿಳೆ ಎಂದು ಮೃತ ದೇಹದ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ರಸ್ತೆಯ ಬದಿಯಲ್ಲಿ ಮೃತದೇಹ ಸಿಕ್ಕರೂ ಪೊಲೀಸರು ಕಾನೂನಿನ ಅನ್ವಯವೇ ಪ್ರಕ್ರಿಯೆ ನಡೆಸಬೇಕಾಗುತ್ತದೆ. 2008ರಲ್ಲಿ ಅರಣ್ಯದಲ್ಲಿ 25ರಿಂದ 30 ವರ್ಷದೊಳಗಿನ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದನ್ನು ಆತ್ಮಹತ್ಯೆ ಎಂದು ತೋರಿಸಿ ಅದೇ ದಿನ ಶವ ಸಂಸ್ಕಾರ ಮಾಡಲಾಗಿದೆ. ಅದು ನಿಜವಾಗಿಯೂ ಆತ್ಮಹತ್ಯೆಯೇ, ಕೊಲೆ ಮಾಡಿ ಶವವನ್ನು ನೇಣು ಹಾಕಲಾಗಿದೆಯೇ ಅಥವಾ ಅದೊಂದು ವ್ಯವಸ್ಥಿತ ಕೊಲೆಯೇ ಎಂಬ ಬಗ್ಗೆ ಯಾವ ತನಿಖೆಯೂ ನಡೆದಿಲ್ಲ ಎಂದು ವಿವರಿಸಿದರು.

ಮತ್ತೊಂದು ಪ್ರಕರಣದಲ್ಲಿ ಧರ್ಮಸ್ಥಳದ ಟ್ರಸ್ಟ್‌ ನಡೆಸುವ ಅತಿಥಿ ಗೃಹದಲ್ಲಿ 30ರಿಂದ 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲೂ ಸಹ ಆತನನ್ನು ಅನಾಮಿಕ ವ್ಯಕ್ತಿ ಎಂದು ತಿಳಿಸಿ ಅದೇ ದಿನ ಶವಸಂಸ್ಕಾರ ನಡೆಸಲಾಗಿದೆ. ವಸತಿಗೃಹದ ಅತಿಥಿಗಳ ರಿಜಿಸ್ಟರ್ ಪರಿಶೀಲನೆ ನಡೆಸಿಲ್ಲ. ಮೃತ ವ್ಯಕ್ತಿಯನ್ನು ಪತ್ತೆ ಹಚ್ಚುವ ಯಾವುದೇ ಪ್ರಯತ್ನವನ್ನೂ ನಡೆಸಲಾಗಿಲ್ಲ ಎಂದರು.

ಈ ಹಂತದಲ್ಲಿ ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು, ಅಡ್ವೊಕೇಟ್‌ ಜನರಲ್‌ ಇಲ್ಲದಿರುವುದರಿಂದ 74 ಅಸಹಜ ಸಾವುಗಳಿಗೆ ಸಂಬಂಧಿಸಿದ ದಾಖಲೆಯ ಕುರಿತು ಉತ್ತರಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಉತ್ತರಿಸಲು 2 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಿತು.

Related Articles

Comments (0)

Leave a Comment