ಸೌಜನ್ಯಾ ಪ್ರಕರಣಕ್ಕೂ ಹಿಂದಿನಿಂದಲೂ ತಿಮರೋಡಿ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ; ಹೈಕೋರ್ಟ್ನಲ್ಲಿ ಸರ್ಕಾರದ ಪ್ರತಿಪಾದನೆ
- by Jagan Ramesh
- April 24, 2026
- 13 Views
ಬೆಂಗಳೂರು: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದ್ದರಿಂದಲೇ ತಮ್ಮ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದೀಗ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂಬ ಮಹೇಶ್ ಶೆಟ್ಟಿ ತಿಮರೋಡಿ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಸೌಜನ್ಯಾ ಪ್ರಕರಣ ನಡೆದಿರುವುದು 2012ರಲ್ಲಿ. ಆದರೆ, 1997ರಿಂದಲೂ ತಿಮರೋಡಿ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹೈಕೋರ್ಟ್ಗೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ (ಮೂರನೇ ಬಾರಿ) ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ತಿಮರೋಡಿ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಪೊಲೀಸರು ಅವಲಂಬಿಸಿರುವ 26 ಪ್ರಕರಣಗಳಲ್ಲಿ 13 ಪ್ರಕರಣಗಳಲ್ಲಿ ಅರ್ಜಿದಾರರು ಖುಲಾಸೆಗೊಂಡಿದ್ದಾರೆ. ಎರಡು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಉಳಿದ 10 ಪ್ರಕರಣಗಳು ಕೇವಲ ತನಿಖೆ ಮತ್ತು ವಿಚಾರಣಾ ಹಂತದಲ್ಲಿದ್ದು, ಅವೆಲ್ಲವೂ ಜಾಮೀನು ನೀಡಬಹುದಾದ ಸ್ವರೂಪದ್ದಾಗಿವೆ. ಅರ್ಜಿದಾರರ ವಿರುದ್ಧ ದಾಖಲಾದ ಎಲ್ಲ ಹೊಸ ಕ್ರಿಮಿನಲ್ ಪ್ರಕರಣಗಳು ಗಡಿಪಾರು ಪ್ರಸ್ತಾವನೆಗೆ ಸಂಬಂಧಿಸಿದಂತೆ ಪೊಲೀಸರು ವರದಿ ಸಲ್ಲಿಸಿದ ನಂತರ ದಾಖಲಾಗಿವೆ. ಉಪ ವಿಭಾಗಾಧಿಕಾರಿಗಳ (ಎಸಿ) ಮುಂದೆ ಮೊದಲ ಗಡಿಪಾರು ಪ್ರಕ್ರಿಯೆ ನಡೆಯುತ್ತಿದ್ದಾಗ 5 ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ದಾಖಲಿಸಲಾಗಿದೆ ಎಂದು ದೂರಿದರು.
ಸೌಜನ್ಯಾ ಪ್ರಕರಣವೇ ಕಾರಣ:
ವಿಚಾರಣೆಯ ಹಂತದಲ್ಲಿ ನ್ಯಾಯಪೀಠ, ನಿಮ್ಮ ಮೇಲೇಯೇ ಏಕೆ ಕೇಸ್ ಹಾಕುತ್ತಿದ್ದಾರೆ ಅವರು? ಬೇರೆ ಯಾರೂ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ತಿಮರೋಡಿ ಪರ ವಕೀಲರು, ಅರ್ಜಿದಾರರು ಒಬ್ಬ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರಾಗಿದ್ದು, ಸೌಜನ್ಯಾ ಕೊಲೆ ಪ್ರಕರಣದ ಹೋರಾಟದ ನೇತೃತ್ವ ವಹಿಸಿದ್ದಾರೆ. ಅದೇ ಕಾರಣಕ್ಕೆ ಹಲವಾರು ಪ್ರಕರಣಗಳನ್ನು ದಾಖಲಿಸಿ, ಈಗ ಗಡಿಪಾರು ಆದೇಶ ಹೊರಡಿಸಿದ್ದಾರೆ. ಈ ಆದೇಶ ಹೊರಡಿಸುವಾಗ ಎಸಿ ಅವರು ಈ ಐದು ಹೊಸ ಪ್ರಕರಣಗಳನ್ನು ಪರಿಗಣಿಸಬಾರದಿತ್ತು. ಇದಲ್ಲದೆ, ಅರ್ಜಿದಾರರು ಖುಲಾಸೆಗೊಂಡ 13 ಪ್ರಕರಣಗಳು, ಬಿ ರಿಪೋರ್ಟ್ ಸಲ್ಲಿಕೆಯಾಗಿರುವ 2 ಪ್ರಕರಣಗಳು ಹಾಗೂ 50 ರೂ. ದಂಡ ವಿಧಿಸಲಾಗಿರುವ ಒಂದು ಪ್ರಕರಣವಿದೆ. ಇಂಥ ಅಸಂಬದ್ಧ ದಾಖಲೆಗಳ ಆಧಾರದ ಮೇಲೆ ಎಸಿ ಅವರು ಗಡಿಪಾರು ಆದೇಶ ಹೊರಡಿಸಿದ್ದಾರೆ ಎಂದರು.
ಮುಂದುವರಿದು, ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 55ಎ ಅನ್ವಯಿಸಲು ಅಲ್ಲಿ ಸ್ಪಷ್ಟವಾದ ಮತ್ತು ಪ್ರಸ್ತುತ ಅಪಾಯವಿರಬೇಕು. ಗಡಿಪಾರು ಆದೇಶ ಒಂದು ಅಸಾಮಾನ್ಯ ಕ್ರಮವಾಗಿದ್ದು, ಇದನ್ನು ಅತ್ಯಂತ ವಿರಳಾತಿ ವಿರಳ ಪ್ರಕರಣಗಳಲ್ಲಿ ಮಿತವಾಗಿ ಬಳಸಬೇಕಾಗುತ್ತದೆ. ಏಕೆಂದರೆ, ಇದು ಸಂವಿಧಾನದ ಪರಿಚ್ಛೇದ 19 ಹಾಗೂ 21ರ ಖಾತ್ರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಪ್ರಕರಣದಲ್ಲಿ, ಇಡೀ ರಾಜ್ಯದ ಆಡಳಿತ ಯಂತ್ರವೇ ಅರ್ಜಿದಾರ ವಿರುದ್ಧವಿದೆ. ಆದ್ದರಿಂದ, ಅವರ ವಿರುದ್ಧ ದುರುದ್ದೇಶದಿಂದ ಹಲವಾರು ಸಣ್ಣಪುಟ್ಟ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸುಳ್ಳು ವರದಿಯ ಆಧಾರದ ಮೇಲೆ ಆಕ್ಷೇಪಾರ್ಹ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂದು ಆಕ್ಷೇಪಿಸಿದರು.
ಅರ್ಜಿದಾರರಿಂದ ದಿನನಿತ್ಯ ಸಮಸ್ಯೆ ಸೃಷ್ಟಿ:
ಈ ವಾದವನ್ನು ಆಕ್ಷೇಪಿಸಿದ ರಾಜ್ಯ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಗಡಿಪಾರು ಆದೇಶವನ್ನು ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ಹೊರಡಿಸಬೇಕು ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಇವರು 2012ರಲ್ಲಿ ಸೌಜನ್ಯಾ ಪ್ರಕರಣ ನಡೆಯುವುದಕ್ಕೂ ಬಹಳ ಹಿಂದಿನಿಂದ, ಅಂದರೆ 1997ರಿಂದಲೂ ಬಾಕಿ ಇರುವ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ನಾನು ಸೌಜನ್ಯಾ ಪ್ರಕರಣದ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಾ, ಅರ್ಜಿದಾರರು ದಿನನಿತ್ಯ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಗಡಿಪಾರು ಪ್ರಕ್ರಿಯೆ ಪ್ರಾರಂಭಿಸಿದಾಗಲೂ ಸಹ ಅವರು ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದರು. ಇತ್ತೀಚೆಗೆ ಮತ್ತೆ ಎರಡು ಕೃತ್ಯಗಳನ್ನೆಸಗಿದ್ದು, ಏಪ್ರಿಲ್ 13 ಹಾಗೂ 15ರಂದು ಪ್ರಕರಣಗಳು ದಾಖಲಾಗಿವೆ. ಪ್ರತಿ ಬಾರಿ ಅಪರಾಧ ಎಸಗುವ ಅವರು ಬಂದು ತಮ್ಮ ಅಪರಾಧ ಪರಿಗಣಿಸಬಾರದು, ಪ್ರಕರಣ ದಾಖಲಿಸಬಾರದು ಎಂದು ಹೇಳುತ್ತಾರೆ. ಅವರು ಸಾಮಾಜಿಕ ಕಾರ್ಯಕರ್ತರಾಗಿರಲಿ ಅಥವಾ ಯಾರೇ ಆಗಿರಲಿ, ಅಪರಾಧ ನಡೆದರೆ ಅದನ್ನು ದಾಖಲಿಸಲೇಬೇಕು. ಬೆಳ್ತಂಗಡಿಯ ಪೊಲೀಸ್ ಅಧಿಕಾರಿಗಳು ಇತರ ಕೆಲಸಗಳಿಗಿಂತ ಹೆಚ್ಚಾಗಿ ಈ ವ್ಯಕ್ತಿಯಿಂದಾಗುವ ಸಮಸ್ಯೆಗಳನ್ನು ನಿಭಾಯಿಸುವುದರಲ್ಲೇ ತೊಡಗಿದ್ದಾರೆ. ಅಷ್ಟರಮಟ್ಟಿಗೆ ಆ ಪ್ರದೇಶದಲ್ಲಿ ಇವರು ಸಂಪೂರ್ಣ ಉಪಟಳವಾಗಿ ಪರಿಣಮಿಸಿದ್ದಾರೆ ಎಂದು ತಿಳಿಸಿದರು.
ಎರಡನೇ ಬಾರಿ ಗಡಿಪಾರು ಮಾಡಲಾದ ಸಂಬಂಧ ನ್ಯಾಯಾಲಯ ಮಾಡಿದ್ದ ಆದೇಶದಂತೆ ಎಲ್ಲ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಈ ಆದೇಶ ಹೊರಡಿಸಲಾಗಿದೆ. ನನ್ನನ್ನು ಗುರಿ ಮಾಡಲಾಗಿದೆ, ನಾನು ಬಲಿಪಶುವಾಗಿದ್ದೇನೆ ಎಂದು ಹೇಳುವುದನ್ನು ಬಿಟ್ಟರೆ ಆದೇಶದಲ್ಲಿನ ದೋಷಗಳನ್ನು ಎತ್ತಿ ತೋರಿಸಲು ಅರ್ಜಿದಾರರಿಂದ ಸಾಧ್ಯವಾಗುತ್ತಿಲ್ಲ. ನಾನು ಅಪರಾಧ ಮಾಡಿಲ್ಲ ಎಂಬುದು ಅವರ ವಾದವಾಗಿಲ್ಲ. ಬದಲಿಗೆ ನಾನು ಬಲಿಪಶುವಾಗಿದ್ದೇನೆ ಎಂದಷ್ಟೇ ವಾದ ಮಾಡುತ್ತಿದ್ದಾರೆ ಎಂದರಲ್ಲದೆ, ಎರಡನೇ ಬಾರಿ ಗಡಿಪಾರು ಆದೇಶ ಮಾಡಿದ್ದಾಗ ಪ್ರಕರಣವನ್ನು ಮತ್ತೆ ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ನ್ಯಾಯಪೀಠ ವಜಾಗೊಳಿಸಿರುವ ವಿಚಾರವನ್ನೂ ನ್ಯಾಯಪೀಠದ ಗಮನಕ್ಕೆ ತಂದರು.
ಆದೇಶ ಕಾಯ್ದಿರಿಸಿದ ಹೈಕೋರ್ಟ್:
ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ಏಪ್ರಿಲ್ 29ಕ್ಕೆ ಆದೇಶ ಕಾಯ್ದಿರಿಸಿತಲ್ಲದೆ, ಅಲ್ಲಿಯವರೆಗೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಗಡಿಪಾರು ಆದೇಶ ಜಾರಿಗೊಳಿಸದಂತೆ ಈ ಹಿಂದೆ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನೂ ವಿಸ್ತರಿಸಿತು.
Related Articles
Thank you for your comment. It is awaiting moderation.



Comments (0)