ಉದ್ಯಮಿಯಿಂದ ಹಣ ಸುಲಿಗೆಗೆ ಯತ್ನ; ಆರೋಪಿಯ ಮೊಬೈಲ್ ಲೊಕೇಷನ್ ಶೇರ್ ಮಾಡಬೇಕೆಂಬ ಜಾಮೀನು ಷರತ್ತು ರದ್ದುಪಡಿಸಿದ ಹೈಕೋರ್ಟ್
- by Jagan Ramesh
- April 24, 2026
- 7 Views
ಬೆಂಗಳೂರು: ಭೂಗತ ಪಾತಕಿ ಬನ್ನಂಜೆ ರಾಜನ ಸಹಚರರೆಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯಿಂದ 25 ಲಕ್ಷ ರೂ. ವಸೂಲಿಗೆ ಯತ್ನಿಸಿದ ಹಾಗೂ ಜೀವ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ “ಮೊಬೈಲ್‌ನಲ್ಲಿ ಸದಾ ಲೊಕೇಷನ್ ಆನ್ ಮಾಡಿರಬೇಕು ಹಾಗೂ ತನಿಖಾಧಿಕಾರಿಗೆ ಲೈವ್ ಲೊಕೇಷನ್ ಶೇರ್ ಮಾಡಬೇಕು” ಎಂದು ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಹೈಕೋರ್ಟ್ ರದ್ದುಪಡಿಸಿದೆ.
ಉಡುಪಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ವಿಧಿಸಿರುವ ನಿರೀಕ್ಷಣಾ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಪ್ರಕರಣದ 4ನೇ ಆರೋಪಿಯಾದ ಮಂಗಳೂರಿನ ಕೊಲ್ನಾಡು ಮುಲ್ಕಿಯ ಕೆ.ಎಸ್. ರಾವ್ ನಗರ ನಿವಾಸಿ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿರಲಿಲ್ಲ. ಆಗ ನ್ಯಾಯಪೀಠ, ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ವಿಧಿಸಿದ ಯಾವ ಷರತ್ತನ್ನು ಸಡಲಿಸಬೇಕು ಎಂಬುದನ್ನು ಅರ್ಜಿದಾರರ ಮನವಿ ಸ್ಪಷ್ಟವಾಗಿ ತಿಳಿಸುವುದಿಲ್ಲ. ಅರ್ಜಿ ಪರಿಶೀಲಿಸಿದ ನಂತರ ಎಲ್ಲ ಷರತ್ತುಗಳನ್ನು ಸಡಿಲಗೊಳಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ ಎಂದು ತಿಳಿಯಬಹುದಾಗಿದೆ. ಆದರೆ, ಎಲ್ಲ ಷರತ್ತುಗಳನ್ನು ಸಡಲಿಸಲು ಆಗುವುದಿಲ್ಲ. ಆರೋಪಿಯು ತನ್ನ ಮೊಬೈಲ್‌ನಲ್ಲಿ ಸದಾ ಲೊಕೇಷನ್ ಆನ್ ಮಾಡಿರಬೇಕು ಹಾಗೂ ಲೈವ್ ಲೊಕೇಷನ್ ಅನ್ನು ತನಿಖಾಧಿಕಾರಿಗೆ ಶೇರ್ ಮಾಡಬೇಕು ಎಂದು ವಿಧಿಸಲಾಗಿರುವ ಏಳನೇ ಷರತ್ತನ್ನು ರದ್ದುಪಡಿಸಬಹುದಾಗಿದೆ. ಜಾಮೀನು ಮಂಜೂರು ಮಾಡಲು ಇಂತಹ ಷರತ್ತು ವಿಧಿಸಲಾಗದು ಎಂದು ತಿಳಿಸಿ, ಆ ಷರತ್ತನ್ನು ರದ್ದುಪಡಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ:
ಉಡುಪಿಯ ಅಂಬಾಗಿಲು ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ 2018ರ ಆಗಸ್ಟ್ 6ರಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಬನ್ನಂಜೆ ರಾಜನ ಸಹಚರನಾಗಿದ್ದೇನೆ. ನನಗೆ 25 ಲಕ್ಷ ರೂ. ನೀಡಬೇಕು. ಇಲ್ಲವಾದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಉದ್ಯಮಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಮಲ್ಪೆ ಠಾಣೆ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಅರ್ಜಿದಾರನಿಗೆ ಉಡುಪಿಯ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ 2025ರ ಫೆಬ್ರವರಿ 12ರಂದು ಏಳು ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
Related Articles
Thank you for your comment. It is awaiting moderation.



Comments (0)