ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ; ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಹಿಳಾ ಸಚಿವೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿಯ ಮಾಜಿ ಶಾಸಕ ಸಂಜಯ್‌ ಪಾಟೀಲ್‌ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು ಹಾಗೂ ಎಫ್‌ಐಆರ್ ರದ್ದು ಕೋರಿ ಸಂಜಯ್‌ ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಆರೋಪಿತ ಹೇಳಿಕೆಯನ್ನು ದೂರುದಾರರನ್ನು ಉದ್ದೇಶಿಸಿ ನೀಡಲಾಗಿಲ್ಲ. ತಮ್ಮ ಪಕ್ಷದ ನಾಯಕಿಯ ವಿರುದ್ಧ ಅರ್ಜಿದಾರರು ಹೇಳಿಕೆ ನೀಡಿರುವುದನ್ನು ದೂರುದಾರರು ಕೇಳಿಸಿಕೊಂಡಿದ್ದಾರೆಂಬುದು ದೂರಿನ ಸಾರಾಂಶವಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 509 ಅನ್ವಯವಾಗಬೇಕಾದರೆ ನಿರ್ದಿಷ್ಟ ಮಹಿಳೆಯ ಘನತೆಯನ್ನು ಅವಮಾನಿಸುವ ಉದ್ದೇಶದಿಂದ ಆಕೆಯ ವಿರುದ್ಧ ಮಾತು, ಸನ್ನೆ ಅಥವಾ ಕೃತ್ಯ ನಡೆದಿರಬೇಕು. ಆದರೆ, ಈ ಪ್ರಕರಣದಲ್ಲಿ ದೂರುದಾರರ ವಿರುದ್ಧ ಯಾವುದೇ ಮಾತು ಅಥವಾ ನಿಂದನೆ ಮಾಡಲಾಗಿಲ್ಲ. ಆರೋಪಿಯ ಹೇಳಿಕೆಯು ಐಪಿಸಿ ಸೆಕ್ಷನ್‌ 509ರ ಅಗತ್ಯ ಅಂಶಗಳನ್ನು ಒಳಗೊಂಡಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ವಿರುದ್ಧ ದೂರು ಸಲ್ಲಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತೆ, ಆರೋಪಿತ ಹೇಳಿಕೆಯನ್ನು ಕೇವಲ ಕೇಳಿಸಿಕೊಂಡವರಾಗಿದ್ದಾರೆ. ಆ ಹೇಳಿಕೆಯನ್ನು ದೂರುದಾರರನ್ನೇ ಉದ್ದೇಶಿಸಿ ನೀಡಿರಲಿಲ್ಲ. ಆದ್ದರಿಂದ, ದೂರುದಾರರನ್ನು ಕಾನೂನಿನ ಅರ್ಥದಲ್ಲಿ ಬಾಧಿತ ಅಥವಾ ಸಂತ್ರಸ್ತ ವ್ಯಕ್ತಿ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಪರಾಧದ ಮೂಲ ಅಂಶಗಳೇ ಇಲ್ಲದ ಸಂದರ್ಭದಲ್ಲಿ ತನಿಖೆ ಮತ್ತು ಕ್ರಿಮಿನಲ್‌ ಪ್ರಕ್ರಿಯೆಯನ್ನು ಮುಂದುವರಿಸುವುದು ಅರ್ಜಿದಾರರಿಗೆ ಅನಗತ್ಯ ಕಿರುಕುಳ ನೀಡಿದಂತಾಗುವುದಲ್ಲದೆ, ನ್ಯಾಯದ ವಿಫಲತೆಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಸಂಜಯ್‌ ಪಾಟೀಲ್‌ ವಿರುದ್ಧದ ಎಫ್‌ಐಆರ್‌ ಮತ್ತು ಕ್ರಿಮಿನಲ್‌ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?
2024ರ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ಸಂಜಯ್‌ ಪಾಟೀಲ್‌, ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. 2024ರ ಏಪ್ರಿಲ್ 16ರಂದು ಕಾಂಗ್ರೆಸ್‌ ಕಾರ್ಯಕರ್ತೆಯೊಬ್ಬರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಸಂಜಯ್ ಪಾಟೀಲ್ ಹೇಳಿಕೆ ಮಹಿಳಾ ಸಚಿವರನ್ನು ಅವಮಾನಿಸುವಂತಿದ್ದು, ಮಹಿಳೆಯ ಘನತೆಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಸಂಬಂಧ ಪ್ರಕರಣ ರದ್ದು ಕೋರಿ ಸಂಜಯ್‌ ಪಾಟೀಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment