ಬೇರೆ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುವ ನಂಬಿಕೆಯೊಂದೇ ಮಗುವಿನ ಶಾಲೆ ಬದಲಾವಣೆಗೆ ಆಧಾರವಾಗದು – ಹೈಕೋರ್ಟ್

ಬೆಂಗಳೂರು: ಬೇರೊಂದು ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಪೋಷಕರ ನಂಬಿಕೆಯೊಂದೇ ಮಗುವಿನ ಶಾಲೆ ಬದಲಿಸಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟ, ಬೋಧನಾ ಸೌಲಭ್ಯ ಅಥವಾ ವಾತಾವರಣದಲ್ಲಿ ಕೊರತೆಯಿದೆ ಎಂಬುದನ್ನು ಸಾಬೀತುಪಡಿಸದೆ, ಶಾಲೆ ಬದಲಾವಣೆಗೆ ನ್ಯಾಯಾಲಯದ ಮಧ್ಯಪ್ರವೇಶ ಕೋರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ‘ಡೀನ್ಸ್ ಅಕಾಡೆಮಿ’ಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ 9 ವರ್ಷದ ಪುತ್ರನನ್ನು, ಸರ್ಜಾಪುರ ರಸ್ತೆಯ ‘ಗ್ರೀನ್‌ವುಡ್ ಹೈ ಇಂಟರ್‌ನ್ಯಾಷನಲ್’ ಶಾಲೆಗೆ ವರ್ಗಾಯಿಸಲು ಅನುಮತಿ ಕೋರಿ ತಂದೆ ನೂರ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದು, ಮಗುವಿನ ಶಾಲೆ ಬದಲಾವಣೆಗೆ ಅನುಮತಿ ನಿರಾಕರಿಸಿ 2026ರ ಸೆಪ್ಟೆಂಬರ್ 15ರಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಹೈಕೋರ್ಟ್ ಹೇಳಿದ್ದೇನು?
ಹಾಲಿ ಪ್ರಕರಣದಲ್ಲಿ ಮಗುವಿನ ಪ್ರಸ್ತುತ ಶಾಲೆಯ ಶೈಕ್ಷಣಿಕ ಗುಣಮಟ್ಟ, ಬೋಧನಾ ಸೌಲಭ್ಯ ಅಥವಾ ವಾತಾವರಣದಲ್ಲಿ ಕೊರತೆಯಿದೆ ಎಂಬುದಕ್ಕೆ ದಾಖಲೆಗಳಿಲ್ಲ. ಮಗು ಓದಿನಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಅಥವಾ ಅದೇ ಶಾಲೆಯಲ್ಲಿ ಮುಂದುವರಿದರೆ ಭವಿಷ್ಯಕ್ಕೆ ಹಾನಿಯಾಗುತ್ತದೆ ಎಂಬುದಕ್ಕೂ ಪೂರಕ ಅಂಶಗಳಿಲ್ಲ ಎಂದಿರುವ ಹೈಕೋರ್ಟ್, ಮಗುವಿಗೆ ಮತ್ತೊಂದು ಶಾಲೆ ಉತ್ತಮ ಅವಕಾಶ ನೀಡಲಿದೆ ಎಂಬ ಪ್ರಾಮಾಣಿಕ ನಂಬಿಕೆ ತಂದೆಗೆ ಇರಬಹುದು. ಆದರೆ, ಆ ನಂಬಿಕೆಯೊಂದೇ ಶಾಲೆ ಬದಲಾವಣೆಗೆ ಅಥವಾ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಆಧಾರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಗುವಿನ ಶಾಲೆ ಬದಲಿಸುವುದೆಂದರೆ ಮತ್ತೊಂದು ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದಷ್ಟೇ ಅಲ್ಲ. ಮಗು ಹೊಸ ಶಿಕ್ಷಕರು, ಸಹಪಾಠಿಗಳು, ಶೈಕ್ಷಣಿಕ ನಿರೀಕ್ಷೆಗಳು ಮತ್ತು ವಿಭಿನ್ನ ದಿನಚರಿಗೆ ಹೊಂದಿಕೊಳ್ಳುವುದೂ ಸೇರಿದೆ. ಅಗತ್ಯ ಪರಿಸ್ಥಿತಿಯಲ್ಲಿ ಬದಲಾವಣೆ ಸಮರ್ಥನೀಯವಾಗಬಹುದು. ಆದರೆ, ಈ ಪ್ರಕರಣದಲ್ಲಿ ಅದಕ್ಕೆ ಸಾಕಷ್ಟು ಆಧಾರವಿಲ್ಲ ಎಂದು ನ್ಯಾಯಪೀಠ ನಿರ್ಣಯಿಸಿದೆ.

ತಂದೆಯ ವಾದವೇನು?
ಅರ್ಜಿ ವಿಚಾರಣೆ ವೇಳೆ ಸ್ವತಃ ವಾದ ಮಂಡಿಸಿದ್ದ ತಂದೆ, ಒಂದು ವರ್ಷದ ಅವಧಿಯಲ್ಲಿ ಮಗುವಿನ ಪ್ರಬುದ್ಧತೆ, ಆತ್ಮವಿಶ್ವಾಸ, ಭಾವನಾತ್ಮಕ ಬೆಳವಣಿಗೆ ಮತ್ತು ಸ್ವತಂತ್ರ ಆಲೋಚನೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬದಲಾದ ಈ ಪರಿಸ್ಥಿತಿಯಲ್ಲಿ ಗ್ರೀನ್‌ವುಡ್‌ ಹೈ ಶಾಲೆ ಮಗುವಿನ ಸಮಗ್ರ ಬೆಳವಣಿಗೆಗೆ ಸೂಕ್ತವಾಗಲಿದೆ ಎಂದು ಪ್ರತಿಪಾದಿಸಿದ್ದರಲ್ಲದೆ, ಉದ್ದೇಶಿತ ಶಾಲೆಯಲ್ಲಿ ಐಸಿಎಸ್‌ಇ ಮತ್ತು ಐಬಿ ಪಠ್ಯಕ್ರಮಗಳು, 15 ಸಾವಿರಕ್ಕೂ ಅಧಿಕ ಪುಸ್ತಕಗಳ ಗ್ರಂಥಾಲಯ ಹಾಗೂ ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರಕ್ಕೆ ಪ್ರತ್ಯೇಕ ಪ್ರಯೋಗಾಲಯಗಳಿವೆ. ಕ್ರೀಡೆ, ಫುಟ್‌ಬಾಲ್‌ ತರಬೇತಿ ಹಾಗೂ ಇತರ ಚಟುವಟಿಕೆಗೂ ಉತ್ತಮ ಮೂಲಸೌಕರ್ಯವಿದೆ ಎಂದು ವಾದಿಸಿದ್ದರು.

ಅರ್ಜಿಗೆ ಆಕ್ಷೇಪಿಸಿದ ಮಗುವಿನ ತಾಯಿ ಸಮಾ ಆದಿಲ್‌, ಮಗು ಈಗಿನ ಶಾಲೆಯಲ್ಲಿ ನೆಮ್ಮದಿಯಿಂದಿದ್ದು, ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಡೀನ್ಸ್‌ ಅಕಾಡೆಮಿ ಮನೆಯಿಂದ ಕೇವಲ 900 ಮೀಟರ್‌ ದೂರದಲ್ಲಿದೆ. ಕಡಿಮೆ ಪ್ರಯಾಣದ ಅವಧಿ ಮಗುವಿನ ಓದು, ಫುಟ್‌ಬಾಲ್‌ ತರಬೇತಿ ಹಾಗೂ ಇತರ ಚಟುವಟಿಕೆಗೆ ಅನುಕೂಲವಾಗಿದೆ. ಪ್ರಸ್ತಾವಿತ ಶಾಲೆ ಸುಮಾರು 15 ಕಿ.ಮೀ. ದೂರದಲ್ಲಿದ್ದು, ಪ್ರತಿದಿನ ಒಟ್ಟು 30 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ಈ ಅಂಶವನ್ನು ಪರಿಗಣಿಸಿದ ಹೈಕೋರ್ಟ್‌, ಹೆಚ್ಚುವರಿ ಪ್ರಯಾಣದ ಸಮಯ, ಸಾರಿಗೆ ವ್ಯವಸ್ಥೆ ಮತ್ತು ಮಗುವಿನ ದಿನಚರಿಯ ಮೇಲೆ ಅವು ಬೀರಬಹುದಾದ ಪರಿಣಾಮವನ್ನು ನಿರ್ಲಕ್ಷಿಸಲಾಗದು. ಅತ್ಯುತ್ತಮ ಸೌಲಭ್ಯಗಳಿರುವ ಶಾಲೆಯಾದರೂ, ಮಗು ಅಲ್ಲಿಗೆ ತೆರಳಬೇಕಾದ ವಾಸ್ತವ ಪರಿಸ್ಥಿತಿಯೊಂದಿಗೆ ಆ ಸೌಲಭ್ಯಗಳನ್ನು ತೂಗಿ ನೋಡಬೇಕು ಎಂದು ಅಭಿಪ್ರಾಯಪಟ್ಟಿದೆ.

Related Articles

Comments (0)

Leave a Comment