ಬಸವಣ್ಣ ಅವಹೇಳನ ಆರೋಪ; ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್
- by Prashanth Basavapatna
- November 23, 2026
- 10 Views
ಬೆಂಗಳೂರು: ವಚನವೊಂದನ್ನು ಉಲ್ಲೇಖಿಸಿ ಬಸವಣ್ಣ ಅವರನ್ನು ಕಳ್ಳ ಮತ್ತು ಕೊಲೆಗಾರ ಎಂಬಂತೆ ಬಿಂಬಿಸಿ ಅವಹೇಳನ ಮಾಡಿರುವುದು ಹಾಗೂ ಲಿಂಗಾಯತ ಪದವನ್ನು ಲಿಂಗಾಹತ ಎಂದು ತಿರುಚಿ ಸಮಾಜದ ಶಾಂತಿ ಕದಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ರವಿ ಹಂಜ್ ಅಲಿಯಾಸ್ ರವಿ ಹಂಜಗಿಮಠ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಸೋಮವಾರ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಹಾಗೂ ದೂರುದಾರ ಅರವಿಂದ ಜತ್ತಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಅರ್ಜಿ ಇನ್ನಷ್ಟೇ ಹೈಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಬಸವ ಮಂಟಪ ಎಂಬ ಹೆಸರಿನ ಕನ್ನಡ ಪುಸ್ತಕದ ಲೇಖಕನಾಗಿರುವ ನಾನು ಅನಿವಾಸಿ ಭಾರತೀಯನಾಗಿದ್ದೇನೆ. ಅಮೆರಿಕದ ಷಿಕಾಗೊ ಮೆಟ್ರೊಪಾಲಿಟನ್ ಪ್ರದೇಶ ವ್ಯಾಪ್ತಿಯ ಡ್ಯುಪೇಜ್ ಕೌಂಟಿ ಲಾಯಿಲ್ ಬಡಾವಣೆಯ ಏಂಜೆಲೊ ಲೈನ್ ವಿಳಾಸದಲ್ಲಿ ವಾಸಿಸುತ್ತಿದ್ದೇನೆ ಎಂದು ರವಿ ಹಂಜ್ ಅರ್ಜಿಯಲ್ಲಿ ಕಾಣಿಸಿದ್ದಾರೆ.
ಅರ್ಜಿಯಲ್ಲೇನಿದೆ?
ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದ್ದು, ದುರುದ್ದೇಶಪೂರಿತ ಹಾಗೂ ಕ್ಷುಲ್ಲಕತೆಗೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಆಕ್ಷೇಪಾರ್ಹ ಎಫ್‌ಐಆರ್, ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಮತ್ತು ಭಾರತದ ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಖಾತ್ರಿಪಡಿಸಲಾದ ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶೈಕ್ಷಣಿಕ, ಐತಿಹಾಸಿಕ ವಿಮರ್ಶೆಯ ಮೂಲಭೂತ ಹಕ್ಕಿನ ಮೇಲೆ ನೇರ ಉಲ್ಲಂಘನೆ ಮಾಡಲಾಗಿದೆ ಎಂದು ರವಿ ಹಂಜ್ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2026ರ ನವೆಂಬರ್ 21ರಂದು ಬೆಳಗ್ಗೆ 7:30 ಗಂಟೆಗೆ, ‘ಲುಕ್ ಔಟ್ ಸರ್ಕ್ಯುಲರ್’ ಆಧಾರದ ಮೇಲೆ ವಲಸೆ ಅಧಿಕಾರಿಗಳು ನನ್ನನ್ನು ತಡೆಹಿಡಿದರು. ಕೆಲಹೊತ್ತಿನ ನಂತರ ಅಂದರೆ, 9:30ಕ್ಕೆ ವಿಮಾನ ನಿಲ್ದಾಣದ ಪೊಲೀಸರು ನನ್ನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸ್ ವಶದಲ್ಲಿದ್ದಾಗ, ಅದೇ ದಿನ ಸಂಜೆ ಸುಮಾರು 5 ಗಂಟೆಗೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್‌ಎಸ್) ಸೆಕ್ಷನ್ 35(3)ರ ಅಡಿ ನನಗೆ ನೋಟಿಸ್ ಜಾರಿ ಮಾಡಲಾಗಿದೆ. ನಾನು 22ರಂದು ಬೆಳಗಿನ ಜಾವ 2:30ರ ವರೆಗೂ ಪೊಲೀಸ್ ವಶದಲ್ಲಿದ್ದೆ ಎಂದು ರವಿ ಹಂಜ್ ಅರ್ಜಿಯಲ್ಲಿ ವಿವರಿಸಿದ್ದಾರೆ.
Related Articles
Thank you for your comment. It is awaiting moderation.


Comments (0)