ವಕೀಲರ ಪ್ರತಿಭಟನೆ ವೇಳೆ ಕೋರ್ಟ್ ಸಭಾಂಗಣದಲ್ಲಿ ಗದ್ದಲ; ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್
- by Prashanth Basavapatna
- November 23, 2026
- 13 Views
ಬೆಂಗಳೂರು: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಕಲಾಪದ ವೇಳೆ ಗದ್ದಲ ಸೃಷ್ಟಿಸಿದ್ದ ಹಲವು ವಕೀಲರ ವಿರುದ್ಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಸೋಮವಾರ ಮುಕ್ತಾಯಗೊಳಿಸಿದೆ.
ಆರೋಪಿತ ವಕೀಲರು ಸಲ್ಲಿಸಿದ ಬೇಷರತ್ ಕ್ಷಮಾಪಣೆಯನ್ನು ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಆರೋಪಿತ ವಕೀಲರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿದೆ.
ಆರಂಭದಲ್ಲೇ ಆರೋಪಿತರು ಬೇಷರತ್ ಕ್ಷಮಾಪಣೆ ಕೋರಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಪ್ರಕರಣದ ಆರಂಭಿಕ ಹಂತದಲ್ಲೇ ಕ್ಷಮಾಪಣೆ ಕೋರಿರುವುದರಿಂದ ಅದರ ಪ್ರಾಮಾಣಿಕತೆಯನ್ನು ಅನುಮಾನಿಸಲು ನಮಗೆ ಯಾವುದೇ ಕಾರಣವಿಲ್ಲ. ಕ್ಷಮಾಪಣೆಯ ಪ್ರಮಾಣಪತ್ರ ಅಂಗೀಕರಿಸಿ, ಆರೋಪಿತರನ್ನು ಬಿಡುಗಡೆಗೊಳಿಸಲಾಗಿದ್ದು, ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ರಾಜ್ಯದಲ್ಲಿ ವಕೀಲರ ಮೇಲಿನ ಹಿಂಸಾಚಾರ ಪ್ರಕರಣಗಳನ್ನು ಖಂಡಿಸಿ ಹಾಗೂ ವಕೀಲರ ಮೇಲಿನ ಹಿಂಸಾಚಾರ ತಡೆ ಕಾಯ್ದೆ-2023ರ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಮತ್ತು ಇತರ ವಕೀಲರ ಸಂಘಗಳು ಈ ತಿಂಗಳ ಆರಂಭದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದವು.
ಈ ಸಂದರ್ಭದಲ್ಲಿ ಹಲವು ವಕೀಲರು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣ ಪ್ರವೇಶಿಸಿ ಕಲಾಪಕ್ಕೆ ಅಡ್ಡಿಪಡಿಸಿ ಗದ್ದಲ ಸೃಷ್ಟಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಸಂಬಂಧಪಟ್ಟ ವಕೀಲರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತಲ್ಲದೆ, ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಲು ಯತ್ನಿಸಿದವರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿತ್ತು. ಇಂತಹ ವರ್ತನೆ ವಕೀಲ ವೃತ್ತಿಯ ಸದಸ್ಯರಿಗೆ ತಕ್ಕುದಲ್ಲ ಮತ್ತು ಒಪ್ಪಲಾಗದು ಎಂದು ನ್ಯಾಯಾಲಯ ಈ ಹಿಂದೆ ಕಟುವಾಗಿ ನುಡಿದಿತ್ತು.
ಸೋಮವಾರ ಪ್ರಕರಣದ ವಿಚಾರಣೆಗೆ ಬಂದಾಗ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಪ್ರತಿಭಟನೆಯ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘ ಪ್ರಸ್ತಾಪಿಸಿದ್ದ ಬೇಡಿಕೆಗಳಿಗೆ ಇತರ ಪೀಠಗಳೂ ಬೆಂಬಲ ವ್ಯಕ್ತಪಡಿಸಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಪ್ರತಿಭಟನೆಯ ವೇಳೆ ವಕೀಲರು ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸುವಂತಹ ವರ್ತನೆ ತೋರಲು ಸಾಧ್ಯವಿಲ್ಲ. ವಕೀಲರ ಸಂಘಟನೆಯೇ ಇಂತಹ ವರ್ತನೆ ತೋರಲು ಸಾಧ್ಯವಿಲ್ಲ. ನಾನು ಇದನ್ನು ಈಗಾಗಲೇ ಹೇಳಿದ್ದೇನೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಆದಾಗ್ಯೂ, ವಕೀಲರು ಬೇಷರತ್ ಕ್ಷಮಾಪಣೆ ಸಲ್ಲಿಸಿರುವುದನ್ನು ಪರಿಗಣಿಸಿದ ನ್ಯಾಯಪೀಠ, ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಕ್ತಾಯಗೊಳಿಸಿತು.
Related Articles
Thank you for your comment. It is awaiting moderation.


Comments (0)