ಕೆಪಿಎಸ್‌ಸಿ ಹಗರಣ; ಆಯೋಗದ ಮತ್ತಷ್ಟು ಅಕ್ರಮ ನೇಮಕಾತಿಗಳ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಬೃಹತ್ ಅಕ್ರಮದ ತನಿಖೆಯನ್ನು ಆಯೋಗದ ಇತರ ನೇಮಕಾತಿಗಳಿಗೂ ವಿಸ್ತರಿಸಲು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ಹಂಚಿಕೊಂಡಿರುವ ಮಾಹಿತಿಯ ಆಧಾರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ಪಶು ವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಆರೋಪದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೆಪಿಎಸ್‌ಸಿಯ ಕಾರ್ಯವೈಖರಿ ಹಾಗೂ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿತು.

ಕೆಪಿಎಸ್‌ಸಿ ನಡೆಸಿದ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು ಮತ್ತು ಅವ್ಯವಹಾರಗಳ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ವಸ್ತುಸ್ಥಿತಿ ವರದಿ ಪರಿಶೀಲಿಸಿದ ನ್ಯಾಯಾಲಯ, ಇ.ಡಿ ನಡೆಸಿರುವ ತನಿಖೆಯಲ್ಲಿ ಬಹಿರಂಗವಾಗಿರುವ ಸಂಗತಿಗಳು ನಿಜವಾಗಿದ್ದರೆ, ಕರ್ನಾಟಕ ಲೋಕಸೇವಾ ಆಯೋಗದ ಹಿಂದಿನ ಮತ್ತು ಪ್ರಸ್ತುತ ನೇಮಕಾತಿಗಳ ಮೇಲೆ ಅದು ತೀವ್ರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿತು.

ಇ.ಡಿ ಹಂಚಿಕೊಂಡಿರುವ ಮಾಹಿತಿಯಲ್ಲಿರುವ ಅಪರಾಧಗಳನ್ನು ಎಸ್‌ಐಟಿ ದಾಖಲಿಸುವುದು ಅನಿವಾರ್ಯ. ಏಕೆಂದರೆ, ಇಲ್ಲಿ ಉಲ್ಲೇಖಿಸಿರುವ ಅಪರಾಧಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನಷ್ಟೇ ಅಲ್ಲದೆ, ಕೆಪಿಎಸ್‌ಸಿ ನಡೆಸುವ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಸಾಮಾನ್ಯ ವ್ಯಕ್ತಿಯ ಆತ್ಮಸಾಕ್ಷಿಯನ್ನೂ ಬೆಚ್ಚಿಬೀಳಿಸುವಂತಿವೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು.

ನೇಮಕಾತಿಯಲ್ಲಿ ಅರ್ಹತೆಯನ್ನು ಕಡೆಗಣಿಸಿದರೆ ಹಗಲಿರುಳು ಕಷ್ಟಪಟ್ಟು ಓದುವ ಬಡ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯವೇನು? ಜನಸಾಮಾನ್ಯರು ಸಾಂವಿಧಾನಿಕ ವ್ಯವಸ್ಥೆಯನ್ನು ನಂಬುವುದಾದರೂ ಹೇಗೆ? ಕೆಪಿಎಸ್‌ಸಿಯ ಪ್ರತಿಯೊಂದು ನೇಮಕಾತಿಯಲ್ಲೂ ಹಗರಣಗಳೇ ಸದ್ದು ಮಾಡುತ್ತಿವೆಯಲ್ಲ? ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮಾದರಿಯಲ್ಲಿ ಪಾರದರ್ಶಕವಾಗಿ ಏಕೆ ಕಾರ್ಯನಿರ್ವಹಿಸುತ್ತಿಲ್ಲ? ಎಂದು ನ್ಯಾಯಪೀಠ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತು.

ಕೆಪಿಎಸ್‌ಸಿ ನಡೆಸಿರುವ ಹಲವು ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮ ನಡೆದಿರುವ ಬಗ್ಗೆ ಇ.ಡಿ ಅಧಿಕಾರಿಗಳು ಎಸ್‌ಐಟಿಯೊಂದಿಗೆ ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಅಂಶಗಳನ್ನು ಗಮನಿಸಿದರೆ ಮತ್ತಷ್ಟು ಎಫ್‌ಐಆರ್‌ಗಳನ್ನು ದಾಖಲಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಸರ್ಕಾರದ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಇ.ಡಿ ನೀಡಿರುವ ಮಾಹಿತಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಇ.ಡಿ ಹಂಚಿಕೊಂಡಿರುವ ಮಾಹಿತಿ ಬಗ್ಗೆಯೂ ಎಫ್‌ಐಆರ್‌ ದಾಖಲಿಸಬೇಕು. ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಎಸ್‌ಐಟಿಗೆ ವರ್ಗಾಯಿಸಬೇಕು ಎಂದು ಆದೇಶಿಸಿ ಅರ್ಜಿ ವಿಚಾರಣೆಯನ್ನು 2027ರ ಜನವರಿ 8ಕ್ಕೆ ಮುಂದೂಡಿತಲ್ಲದೆ, ಅಷ್ಟರೊಳಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಿತು.

ಇ.ಡಿ ತನಿಖೆಯಲ್ಲಿ ಬಯಲಾದ ಸ್ಫೋಟಕ ಅಂಶಗಳು:
• ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಆಧಾರದಲ್ಲಿ ತನಿಖೆ ಆರಂಭಿಸಿದ್ದ ಇ.ಡಿ, ಆಗಸ್ಟ್ 18ರಿಂದ ನವೆಂಬರ್ 5ರವರೆಗೆ ಕೆಪಿಎಸ್‌ಸಿ ಕಚೇರಿ ಸೇರಿದಂತೆ 37 ಕಡೆಗಳಲ್ಲಿ ಶೋಧ ನಡೆಸಿತ್ತು. ನವೆಂಬರ್ 13ರಂದು ಬೆಂಗಳೂರಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, 1.22 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

• ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ, ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಭಗವತಿ ಎಂಟರ್‌ಪ್ರೈಸಸ್ ಮಾಲೀಕ ಬಸವರಾಜ್ ಅಲಿಯಾಸ್ ಕನ್ನಾಳೆ ಎಂಬವರನ್ನು ಬಂಧಿಸಲಾಗಿದೆ. ಈ ಪೈಕಿ ಗೀತಾ ಹೊರತುಪಡಿಸಿ ಉಳಿದ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

• ಹುದ್ದೆ ಕೊಡಿಸುವ ಭರವಸೆ ನೀಡಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಲು ಪ್ರಶ್ನೆಪತ್ರಿಕೆ ಸೋರಿಕೆ, ಪ್ರತ್ಯೇಕ ಉತ್ತರಪಟ್ಟಿ ಸಿದ್ಧಪಡಿಸುವುದು ಹಾಗೂ ಅಂಕಗಳ ಮಾಹಿತಿ ದುರ್ಬಳಕೆಯಂತಹ ಮಾರ್ಗಗಳನ್ನು ಅನುಸರಿಸಲಾಗಿದೆ. 2026ರ ಜನವರಿ 7ರಂದು ಅಂತಿಮ ಕರಡು ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಗಂಗ್ವಾರ್ ಪೆನ್‌ಡ್ರೈವ್‌ಗೆ ನಕಲಿಸಿ ಬಸವರಾಜ್ ಕನ್ನಾಳೆಗೆ ನೀಡಿದ್ದರು. ಕನ್ನಾಳೆ ಅವರು ವಿಲ್ಲಾಗಳಲ್ಲಿ ಅಭ್ಯರ್ಥಿಗಳನ್ನು ಇರಿಸಿ, ಮೊಬೈಲ್ ಕಸಿದುಕೊಂಡು ಉತ್ತರಗಳನ್ನು ಕಂಠಪಾಠ ಮಾಡಿಸಿದ್ದರು ಎನ್ನಲಾಗಿದೆ.

• ಒಟ್ಟು 10 ಅಭ್ಯರ್ಥಿಗಳಿಂದ 3.20 ಕೋಟಿ ರೂ.ಗೆ ಬೇಡಿಕೆ ಇಟ್ಟು, 1.52 ಕೋಟಿ ರೂ. ಸಂಗ್ರಹಿಸಲಾಗಿತ್ತು (92 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಗೂ 60 ಲಕ್ಷ ರೂ. ನಗದು ರೂಪದಲ್ಲಿ). ಅಭ್ಯರ್ಥಿಗಳನ್ನು ಒದಗಿಸುವಲ್ಲಿ ಪವನ್‌ ರೆಡ್ಡಿ ಎಂಬಾತನ ಪಾತ್ರವಿದ್ದು, ಬಹುತೇಕ ಅಭ್ಯರ್ಥಿಗಳಿಗೆ ತಲಾ 30 ಲಕ್ಷ ರೂ.ಗಳಂತೆ ವ್ಯವಹಾರ.

• ಸಾಹುಕಾರ್ ಸೂಚನೆಯಂತೆ ಗೀತಾ ನೀಡಿದ್ದ ಆರು ಅಭ್ಯರ್ಥಿಗಳಿಗೆ ಗಂಗ್ವಾರ್ ಪ್ರತ್ಯೇಕ ಉತ್ತರಪಟ್ಟಿ ಸಿದ್ಧಪಡಿಸಿದ್ದರು. ಅರ್ಹತಾ ಪಟ್ಟಿಯಲ್ಲಿ ಅಂಕಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಪರೀಕ್ಷಾ ನಿಯಂತ್ರಕರ ಕಚೇರಿ ಮೂಲಕ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಶೀಲಿಸಿ, ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದ ಅಭ್ಯರ್ಥಿಗಳಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಅಕ್ರಮ ಹಣದ ವಹಿವಾಟಿಗೆ ಭಾಲ್ಕಿಯ ‘ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿಯಮಿತ’ದ ನಕಲಿ ಖಾತೆಗಳನ್ನು ಬಳಸಲಾಗಿದೆ ಎಂದು ಇ.ಡಿ ಉಲ್ಲೇಖಿಸಿದೆ.

ಇತರ ನೇಮಕಾತಿಗಳಿಗೂ ವಿಸ್ತರಿಸಿದ ಅಕ್ರಮದ ಕರಿನೆರಳು:
ಸಾಹುಕಾರ್ ಮತ್ತು ಗಂಗ್ವಾರ್ ಅವರ ಅಧಿಕಾರಾವಧಿಯಲ್ಲಿ ನಡೆದ ಇತರ ಪ್ರಮುಖ ನೇಮಕಾತಿಗಳಲ್ಲೂ ಅಕ್ರಮ ನಡೆದಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ), ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ-2023, ಮೋಟಾರು ವಾಹನ ನಿರೀಕ್ಷಕರ ನೇಮಕಾತಿ-2016 (ಎಂವಿಐ) ಮತ್ತು ಸಹಾಯಕ ಇಂಜಿನಿಯರ್ ನೇಮಕಾತಿ-2024ರಲ್ಲೂ ಅಕ್ರಮ ನಡೆದಿರುವ ಸಾಧ್ಯತೆಗಳಿವೆ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇ.ಡಿ ತಿಳಿಸಿದೆ.

Related Articles

Comments (0)

Leave a Comment