ಎಥನಾಲ್ ಉತ್ಪಾದನೆಗೆ ಕಬ್ಬು ಬಳಕೆಗೆ ನಿರ್ಬಂಧ; ಕೇಂದ್ರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ದೇಶದಲ್ಲಿ 2026-2027ರ ಎಥನಾಲ್ ಪೂರೈಕೆ ವರ್ಷದಲ್ಲಿ ಎಥನಾಲ್ ಉತ್ಪಾದನೆಗಾಗಿ ಕಬ್ಬು ಬಳಕೆಯನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಬೆಳಗಾವಿ ಮೂಲದ ಎಥೆನಾಲ್ ಉತ್ಪಾದನಾ ಕಂಪನಿ ಅಸ್ಕಿನ್ಸ್ ಬಯೋಫ್ಯುಯಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜೆ. ಅಸ್ಕಿ ಹಾಗೂ ಶ್ರೀ ಬ್ರಹ್ಮಾನಂದಸಾಗರ್ ಜಾಗರಿ ಇಂಡಸ್ಟ್ರೀಸ್‌ನ ಪಾಲುದಾರ ಮಹಾವೀರ್ ಜೆ. ಅಸ್ಕಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ದೇಶದಲ್ಲಿ ಪ್ರಸ್ತುತ ಇರುವ ಸಕ್ಕರೆ ಕೊರತೆ ಮತ್ತು 2026–27ನೇ ಸಾಲಿನ ಅಂದಾಜು ಕಬ್ಬು ಉತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಬಂಧಗಳನ್ನು ವಿಧಿಸಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರದ ಆದೇಶಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಯಾವುದೇ ಕಾರಣಗಳು ಕಂಡು ಬರುತ್ತಿಲ್ಲ ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳಿಗಿಂತ ಅರ್ಜಿದಾರರ ವಾಣಿಜ್ಯ ಹಿತಾಸಕ್ತಿಗಳು ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಕಬ್ಬಿನ ರಸ ಬಳಸಿ ಎಥನಾಲ್ ಉತ್ಪಾದಿಸುವುದನ್ನು ನಿರ್ಬಂಧಿಸಿ 2026ರ ಅಕ್ಟೋಬರ್ 22ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳಿಗೆ ತಡೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ತಿರಸ್ಕರಿಸಿತು.

ಇದೇ ವೇಳೆ, ಕಾನೂನಿನ ಪ್ರಕಾರ ಅನುಮತಿ ಪಡೆಯಲು ಅಥವಾ ನಿರ್ಬಂಧ ಸಡಿಲಿಕೆಗೆ ಕೋರಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಕೇಂದ್ರ ಸರ್ಕಾರದ ವಾದವೇನು?
ಅರ್ಜಿಗೆ ಆಕ್ಷೇಪಿಸಿದ್ದ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, ಸಕ್ಕರೆ ಕೊರತೆಯನ್ನು ನೀಗಿಸಲು ಅಗತ್ಯ ವಸ್ತುಗಳ ಕಾಯ್ದೆ-1955ರ ಸೆಕ್ಷನ್ 3ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಈ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಎಥನಾಲ್ ಉತ್ಪಾದನೆಗೆ ಕಬ್ಬನ್ನು ಬಳಸುವುದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಕ್ಕರೆಯ ಪ್ರಮಾಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. 2026–27ನೇ ಸಾಲಿನ ಅಂದಾಜು ಸಕ್ಕರೆ ಅಗತ್ಯತೆ ಮತ್ತು ಉತ್ಪಾದನೆಯನ್ನು ಮೌಲ್ಯಮಾಪನ ಮಾಡಿದ ನಂತರ ತೆಗೆದುಕೊಳ್ಳಲಾದ ಹಲವಾರು ಕ್ರಮಗಳಲ್ಲಿ ಈ ನಿರ್ಬಂಧಗಳೂ ಸೇರಿವೆ ಎಂದು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಪ್ರಕರಣವೇನು?
ದೇಶದಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು 2026-27ರ ಎಥನಾಲ್ ಪೂರೈಕೆ ವರ್ಷ (2026ರ ನವೆಂಬರ್ 1ರಿಂದ 2027ರ ಅಕ್ಟೋಬರ್ 31ರವರೆಗೆ) ಕಬ್ಬಿನ ರಸ ಮತ್ತು ಬಿ-ಹೆವಿ ಮೊಲಾಸಸ್ ಬಳಸಿ ಎಥನಾಲ್ ಉತ್ಪಾದಿಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಸಕ್ಕರೆ ಆಯುಕ್ತಾಲಯ 2026ರ ಅಕ್ಟೋಬರ್ 22ರಂದು ಎಲ್ಲ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳ (ಮದ್ಯ ತಯಾರಿಕಾ ಘಟಕಗಳು), ಅಬಕಾರಿ ಇಲಾಖೆಗೆ ಪ್ರಕಟಣೆ ಹೊರಡಿಸಿತ್ತು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಅರ್ಜಿದಾರರು, ಕೇಂದ್ರದ ನಿರ್ಬಂಧಗಳು ಜಾರಿಯಲ್ಲಿರಲು ಅವಕಾಶ ನೀಡಿದರೆ ತಮ್ಮ ಉತ್ಪಾದನಾ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ, ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಸರಿಪಡಿಸಲಾಗದ ಆರ್ಥಿಕ ನಷ್ಟ ಉಂಟಾಗುತ್ತದೆ. ಆದ್ದರಿಂದ, ಕಬ್ಬಿನ ರಸ ಮತ್ತು ಬಿ-ಹೆವಿ ಮೊಲಾಸಸ್ ಬಳಸಿ ಎಥನಾಲ್ ತಯಾರಿಕೆ ಮುಂದುವರಿಸಲು ಅನುಮತಿ ನೀಡುವಂತೆ ಕೋರಿದ್ದಾರೆ.

Related Articles

Comments (0)

Leave a Comment