ಪ್ರತ್ಯೇಕ ವಾಸ ಆರಂಭಿಸಿದ 9 ವರ್ಷಗಳ ಬಳಿಕ ವರದಕ್ಷಿಣೆ ಕಿರುಕುಳ ದೂರು; ಪತಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Prashanth Basavapatna
- November 19, 2026
- 10 Views
ಬೆಂಗಳೂರು: ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ ಒಂಬತ್ತು ವರ್ಷಗಳ ಬಳಿಕ ಪತ್ನಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆಂಬ ಕಾರಣಕ್ಕೆ ಪತಿ ಹಾಗೂ ಅವರ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ದೂರಿನಲ್ಲಿರುವ ಆರೋಪಗಳ ಸತ್ಯಾಸತ್ಯತೆ ಪತ್ತೆಗೆ ಪೊಲೀಸ್ ತನಿಖೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್ಐಆರ್ ರದ್ದು ಕೋರಿ ಪತಿ ಮತ್ತು ಅವರ ತಂದೆ-ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ.
ಪತಿ-ಪತ್ನಿಯ ನಡುವಿನ ಕೌಟುಂಬಿಕ ವಿವಾದಗಳಿಗೆ ಕ್ರಿಮಿನಲ್ ಪ್ರಕರಣದ ಸ್ವರೂಪ ನೀಡಿ, ಪತಿಯ ಕುಟುಂಬ ಸದಸ್ಯರನ್ನು ಆರೋಪಿಗಳನ್ನಾಗಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ನಿಜ. ಆದರೆ, ಅದನ್ನೇ ಆಧಾರವಾಗಿಟ್ಟುಕೊಂಡು ಪತ್ನಿ ದಾಖಲಿಸುವ ಪ್ರತಿಯೊಂದು ದೂರನ್ನೂ ಒಂದೇ ಸೂತ್ರದಡಿ ರದ್ದುಪಡಿಸಲು ಸಾಧ್ಯವಿಲ್ಲ. ಪ್ರತಿ ಪ್ರಕರಣವನ್ನೂ ಅದರ ದೂರಿನಲ್ಲಿರುವ ಅಂಶಗಳ ಆಧಾರದಲ್ಲಿ ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ, ಪತಿಯ ಪೋಷಕರ ವಿರುದ್ಧ ಆರೋಪ ಹೊರಿಸಲು ಸಮರ್ಥನೀಯ ಆಧಾರವಿದೆಯೇ ಎಂಬುದನ್ನೂ ತನಿಖೆಯ ವೇಳೆ ಪರಿಶೀಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಆರೋಪಗಳು ಇದೇ ಮೊದಲ ಬಾರಿಯಲ್ಲ:
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಪತ್ನಿಯು ಈಗ 2026ರಲ್ಲಿ ಮೊದಲ ಬಾರಿಗೆ ಆರೋಪಗಳನ್ನು ಮಾಡಿಲ್ಲ. ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಗೆ ಪತ್ನಿ 2020ರಲ್ಲಿ ಸಲ್ಲಿಸಿದ್ದ ಆಕ್ಷೇಪಣಾ ಹೇಳಿಕೆಯಲ್ಲೇ ವರದಕ್ಷಿಣೆ ಬೇಡಿಕೆ, ದೈಹಿಕ ಹಾಗೂ ಮಾನಸಿಕ ಕಿರುಕುಳ, ಅವಾಚ್ಯ ನಿಂದನೆ ಮತ್ತು ಹಲ್ಲೆಯ ಆರೋಪಗಳನ್ನು ಉಲ್ಲೇಖಿಸಿದ್ದರು. ಆದ್ದರಿಂದ, ಪೊಲೀಸ್ ದೂರು ದಾಖಲಿಸಲು ಒಂಬತ್ತು ವರ್ಷ ವಿಳಂಬವಾಗಿದೆ ಎಂಬ ಅಂಶದೊಂದಿಗೆ, ಅದಕ್ಕೂ ಮೊದಲೇ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಈ ಆರೋಪಗಳನ್ನು ಪ್ರಸ್ತಾಪಿಸಲಾಗಿತ್ತು ಎಂಬ ಸಂಗತಿಯನ್ನೂ ಪರಿಗಣಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಈ ಹಂತದಲ್ಲಿ ಎಫ್ಐಆರ್ ರದ್ದತಿ ಅರ್ಜಿಯ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ದೂರಿನಲ್ಲಿರುವ ಅಂಶಗಳು ಮೇಲ್ನೋಟಕ್ಕೆ ಅಪರಾಧವನ್ನು ರೂಪಿಸುತ್ತವೆಯೇ ಎಂಬುದನ್ನಷ್ಟೇ ಇಲ್ಲಿ ಪರಿಶೀಲಿಸಲಾಗುತ್ತದೆ. ಆರೋಪಗಳು ನಿಜವೋ, ಸುಳ್ಳೋ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ:
2016ರ ಏಪ್ರಿಲ್ 24ರಂದು ದಂಪತಿಯ ವಿವಾಹ ನಡೆದಿತ್ತು. ಆದರೆ, ಅದೇ ವರ್ಷದ ಡಿಸೆಂಬರ್ನಲ್ಲಿ ಪತ್ನಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. 2016ರಲ್ಲೇ ಪತಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿಯಿತ್ತು. ಈ ನಡುವೆ 2026ರಲ್ಲಿ ಪತ್ನಿ, ಪತಿ ಹಾಗೂ ಅವರ ತಂದೆ-ತಾಯಿ ವಿರುದ್ಧ ವರದಕ್ಷಿಣೆ ಬೇಡಿಕೆ, ದೈಹಿಕ-ಮಾನಸಿಕ ಕಿರುಕುಳ, ಹಲ್ಲೆ ಮತ್ತು ಜೀವ ಬೆದರಿಕೆ ಆರೋಪದಡಿ ದಕ್ಷಿಣ ಕನ್ನಡ ಮಹಿಳಾ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 498ಎ, 354, 504, 506 ಜತೆಗೆ 34 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ಪ್ರಕರಣ ದಾಖಲಿಸಿದ್ದರು. ಸದ್ಯ ಪುತ್ತೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪತಿ ಮತ್ತು ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, 2016ರಲ್ಲೇ ಪತಿಯಿಂದ ದೂರವಾಗಿದ್ದರೂ 9 ವರ್ಷಗಳ ಬಳಿಕ ದೂರು ನೀಡಲಾಗಿದೆ. ಈ ವಿಳಂಬಕ್ಕೆ ಸೂಕ್ತ ವಿವರಣೆಯನ್ನೂ ನೀಡಿಲ್ಲ. ಜತೆಗೆ, ಪತಿಯ ತಂದೆ-ತಾಯಿ ವಿರುದ್ಧ ಮಾಡಿರುವ ಆರೋಪಗಳು ಅಸ್ಪಷ್ಟವಾಗಿವೆ. ಆದ್ದರಿಂದ, ಎಫ್ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಪತ್ನಿ ಪರ ವಕೀಲರು, ಪೊಲೀಸರಿಗೆ ದೂರು ನೀಡದಂತೆ ಬೆದರಿಸಲಾಗಿತ್ತು. ದೂರು ನೀಡಿದರೆ ಜೀವಕ್ಕೆ ಅಪಾಯ ಉಂಟಾಗಲಿದೆ ಎಂಬ ಬೆದರಿಕೆಯೂ ಇತ್ತು. ಅದೇ ಕಾರಣಕ್ಕೆ ದೂರು ದಾಖಲಿಸಲು ವಿಳಂಬವಾಯಿತು ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
Related Articles
Thank you for your comment. It is awaiting moderation.


Comments (0)