ಕಾನೂನು ಮಾನವೀಯತೆ ಕಳೆದುಕೊಳ್ಳಬಾರದು; ಕಾಲು ಕಳೆದುಕೊಂಡ ವ್ಯಕ್ತಿಗೆ ಪರ್ಯಾಯ ಹುದ್ದೆ ಕಲ್ಪಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- November 18, 2026
- 9 Views
ಬೆಂಗಳೂರು: ಕಾನೂನು ತರ್ಕಬದ್ಧವಾಗಿರಬೇಕು ಎನ್ನುವುದು ನಿಜವೇ ಆದರೂ, ಎಂದಿಗೂ ಸಂವೇದನಾರಹಿತವಾಗಿ ಮತ್ತು ಮಾನವೀಯತೆ ಕಳೆದುಕೊಂಡು ನಡೆಯಬಾರದು ಎಂದು ವ್ಯಾಖ್ಯಾನಿಸಿರುವ ಹೈಕೋರ್ಟ್, ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿ ನೇಮಕಾತಿ ಆದೇಶ ಪಡೆಯುವ ಮುನ್ನವೇ ರಸ್ತೆ ಅಪಘಾತದಲ್ಲಿ ಕಾಲುಕಳೆದುಕೊಂಡಿದ್ದ ಯುವಕನಿಗೆ ತಕ್ಕ ಪರ್ಯಾಯ ಉದ್ಯೋಗ ಕಲ್ಪಿಸುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಆದೇಶಿಸಿದೆ.
ಅಪಘಾತದಿಂದ ಅಂಗವಿಕಲರಾಗಿದ್ದ ಇಳಕಲ್ ತಾಲೂಕು ಹೆರೂರಿನ ಶಿವಕುಮಾರ್ ಹಿರೇಮಠ (28) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದೆ.
ಯಶಸ್ಸಿನ ಫಲವನ್ನು ಅನುಭವಿಸಬೇಕಿದ್ದ ಅರ್ಜಿದಾರರಿಗೆ ಸರ್ಕಾರದ ಆಡಳಿತಾತ್ಮಕ ನಿಷ್ಕ್ರಿಯತೆ ಅಡಚಣೆ ಉಂಟುಮಾಡಿದೆ. ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವ ಅವಕಾಶ ಪಡೆಯುವ ಮುನ್ನವೇ ಅರ್ಜಿದಾರರು ದುರದೃಷ್ಟವಶಾತ್ ಕಾಲು ಕಳೆದುಕೊಂಡಿದ್ದಾರೆ ಎಂದು ವ್ಯಥೆ ವ್ಯಕ್ತಪಡಿಸಿರುವ ನ್ಯಾಯಪೀಠ, ಶಿವಕುಮಾರ್ ಹಿರೇಮಠ ಅವರನ್ನು ಪೊಲೀಸ್ ಇಲಾಖೆಯ ಜ್ಯೂನಿಯರ್ ಡಾಟಾ ಎಂಟ್ರಿ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ, ಸಹಾಯಕ ಬರಹಗಾರ, ಇವುಗಳಿಗೆ ಸಮಾನವಾದ ಹುದ್ದೆಗಳು ಅಥವಾ ಯಾವುದೇ ಇತರ ಸೂಕ್ತ ಹುದ್ದೆಗೆ 8 ವಾರಗಳಲ್ಲಿ ಪರಿಗಣಿಸಬೇಕು ಎಂದು ಇಲಾಖೆಗೆ ನಿರ್ದೇಶಿಸಿದೆ.
ನ್ಯಾಯಾಲಯ ಅಪಘಾತಗಳನ್ನು ತಡೆಯಲಾಗದು. ಕಳೆದುಕೊಂಡ ಕಾಲನ್ನು ಕಾನೂನು ಮರುಸ್ಥಾಪಿಸಲಾಗದು. ಆದರೆ, ಕಾನೂನಿಗೆ ಅನುಗುಣವಾಗಿ ಬದುಕಿಗೊಂದು ಅವಕಾಶ ಕಲ್ಪಿಸಲು ಸಂವಿಧಾನದಲ್ಲಿ ಖಂಡಿತಾ ಬೆಳಕಿನ ಕಿಂಡಿಗಳಿವೆ ಎಂದಿರುವ ನ್ಯಾಯಪೀಠ, ಪ್ರಸ್ತುತ ಪ್ರಕರಣ ಅಸಾಧಾರಣ ಸಂಗತಿಗಳನ್ನು ಕಂಡ ದುರದೃಷ್ಟಕರ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಇಂತಹ ಸಂದರ್ಭಗಳಲ್ಲಿ ನ್ಯಾಯವನ್ನು ಸದಾಕಾಲ ನಿಯಮಗಳ ಧೃತರಾಷ್ಟ್ರಾಲಿಂಗನದಲ್ಲೇ ಇರಿಸಿ ನೋಡಲು ಸಾಧ್ಯವಿಲ್ಲ. ಕೆಲವೊಮ್ಮೆ, ಅನ್ವಯಿಸಬಹುದಾದ ಅಂತಹ ಬಿಗಿಯುಪ್ಪುಗೆಯನ್ನು ನ್ಯಾಯಯುತವಾಗಿಯೇ ಸಡಿಲಗೊಳಿಸಬೇಕಾಗುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?
ಅರ್ಜಿದಾರರು ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪ್ರಕ್ರಿಯೆಯ 2019ರ ತಂಡದಲ್ಲಿ ಅರ್ಹತೆ ಪಡೆದಿದ್ದರು. ಆದರೆ, ಅವರ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಪಿಯು ವಿದ್ಯಾರ್ಹತೆಗೆ ಸಮಾನವೇ ಎಂಬ ಗೊಂದಲದ ಹಿನ್ನೆಲೆಯಲ್ಲಿ ಸರ್ಕಾರ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಬೆಳಗಾವಿಯ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು.
ಶಿವಕುಮಾರ್ ಅವರನ್ನು ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೆಎಟಿ ನಿರ್ದೇಶಿಸಿತ್ತು. ಆದರೂ, ಸರ್ಕಾರ ಒಂದು ವರ್ಷಕ್ಕೂ ಅಧಿಕ ಕಾಲ ಆದೇಶದ ಅನುಪಾಲನೆ ಮಾಡಿರಲಿಲ್ಲ. ಕೊನೆಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ 2025ರ ಜನವರಿ 1ರಂದು ನೇಮಕಾತಿ ಆದೇಶ ನೀಡಲಾಗಿತ್ತು.
ದುರದೃಷ್ಟವಶಾತ್ ಅವರು 2024ರ ನವೆಂಬರ್ 30ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಲಗಾಲಿನ ಅರ್ಧ ಭಾಗವನ್ನು ಕಳೆದುಕೊಂಡಿದ್ದರು. ಆದ್ದರಿಂದ, ಇಲಾಖೆಯು ನೇಮಕಾತಿ ಆದೇಶ ಜಾರಿಗೊಳಿಸಲು ನಿಯಮಾನುಸಾರ ಅವಕಾಶವಿಲ್ಲ ಎಂದು ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ್ ಮತ್ತೆ ಕೆಎಟಿ ಮೊರೆ ಹೋಗಿದ್ದರಾದರೂ, ಕೆಎಟಿ ಮನವಿ ತಿರಸ್ಕರಿಸಿತ್ತು. ಇದರಿಂದ, ಶಿವಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.


Comments (0)