ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ವ್ಯಕ್ತಿಯ ಪೌರತ್ವದ ಪ್ರಶ್ನೆ ಇತ್ಯರ್ಥವಾಗದ ಹೊರತು ಗಡಿಪಾರು ಮಾಡಲಾಗದು – ಹೈಕೋರ್ಟ್

ಬೆಂಗಳೂರು: ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ವ್ಯಕ್ತಿಯೊಬ್ಬನ ಪೌರತ್ವದ ಕುರಿತು ನ್ಯಾಯಸಮ್ಮತ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಆತನನ್ನು ದೇಶದಿಂದ ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಅಕ್ರಮ ಬಾಂಗ್ಲಾದೇಶಿ ವಲಸಿಗನೆಂಬ ಶಂಕೆಯ ಮೇಲೆ ಬಂಧನಕ್ಕೊಳಗಾಗಿ ಬೆಂಗಳೂರಿನ ಕೊತ್ತನೂರಿನ ‘ಯುಟಿಲ್ ಫೌಂಡೇಷನ್’ ಪುನರ್ವಸತಿ/ನಿರ್ಬಂಧಿತ ಕೇಂದ್ರದಲ್ಲಿರುವ ಅಬ್ದುಲ್ ರಹೀಂ ಹಾಗೂ ಆತನ ಸಂಬಂಧಿ ಜಾಹಿದುಲ್ ಇಸ್ಲಾಂ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಸಂಬಂಧಪಟ್ಟ ಪ್ರಾಧಿಕಾರಗಳು ಅರ್ಜಿದಾರರಿಗೆ ಸೂಕ್ತ ಅವಕಾಶ ನೀಡಿ ಅವರ ದಾಖಲೆಗಳು ಮತ್ತು ಪೌರತ್ವದ ಕುರಿತು ತ್ವರಿತವಾಗಿ ಮುಂದಿನ ಕ್ರಮ ಕೈಗೊಳ್ಳಬೇಕು. ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ನಿರ್ಧಾರವಾಗುವವರೆಗೆ ಅರ್ಜಿದಾರರನ್ನು ದೇಶದಿಂದ ಗಡಿಪಾರು ಮಾಡಬಾರದು ಎಂದು ನಿರ್ದೇಶಿಸಿರುವ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿದೆ.

ಹೈಕೋರ್ಟ್ ಹೇಳಿದ್ದೇನು?
ಭಾರತದ ಸಂವಿಧಾನದ ಪರಿಚ್ಛೇದ 21ರ ಅಡಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ವಿದೇಶಿಯರಿಗೂ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ಭಾರತೀಯ ಪೌರತ್ವದ ದಾಖಲೆಗಳನ್ನು ಹಾಜರುಪಡಿಸಿದಾಗ, ಅವುಗಳನ್ನು ಪರಿಶೀಲಿಸಿ ಆತನಿಗೆ ತನ್ನ ವಾದ ಮಂಡಿಸಲು ಸೂಕ್ತ ಅವಕಾಶ ನೀಡದೆ ಏಕಾಏಕಿ ವಿದೇಶಿ ಪ್ರಜೆ ಎಂದು ತೀರ್ಮಾನಿಸುವುದು ಸರಿಯಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

2025ರ ವಿದೇಶಿಯರ ಆದೇಶದ ಪ್ಯಾರಾ 16ರ ಪ್ರಕಾರ, ವ್ಯಕ್ತಿಯೊಬ್ಬ ವಿದೇಶಿಯನೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ‘ವಿದೇಶಿಯರ ನ್ಯಾಯಮಂಡಳಿಗೆ’ ಇದೆಯೇ ಹೊರತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್‌ಆರ್‌ಒ) ಅಧಿಕಾರಿಗಳಿಗಲ್ಲ. ಅರ್ಜಿದಾರರು ಸಲ್ಲಿಸಿರುವ ದಾಖಲೆಗಳ ಸತ್ಯಾಸತ್ಯತೆಯ ಕುರಿತು ಎಫ್ಆರ್‌ಆರ್‌ಒ ಅಧಿಕಾರಿಗಳು ಅರ್ಜಿ ಸಲ್ಲಿಕೆಯಾದ ನಂತರ ತನಿಖೆ ನಡೆಸಿದ್ದಾರೆ. ಆದರೆ, ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಪೌರತ್ವದ ಪ್ರಶ್ನೆ ಇತ್ಯರ್ಥವಾಗದೆ ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?
ಬೆಂಗಳೂರಿನ ಕೂಡ್ಲು ಗ್ರಾಮದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಗುಜರಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ ರಹೀಂ ಅವರನ್ನು ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಡಿಸಿಪಿ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯ ಅಧಿಕಾರಿಗಳು 2026ರ ಮಾರ್ಚ್ 5ರಂದು ಬಂಧಿಸಲಾಗಿತ್ತು. ಬಳಿಕ ಎಫ್‌ಆರ್‌ಆರ್‌ಒಗೆ ಹಸ್ತಾಂತರಿಸಲಾಗಿತ್ತು.

ಅರ್ಜಿದಾರರು ತಾವು ಭಾರತದ ದೇಶದ ಪ್ರಜೆ ಎನ್ನುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ, ತಾವೂ ಭಾರತೀಯ ಪ್ರಜೆ ಎಂದು ಸಾಬೀತು ಪಡಿಸಿದ್ದರು. ಆದರೆ, ಎಫ್‌ಆರ್‌ಆರ್‌ಒ ಅಧಿಕಾರಿಗಳು ಅಂದೇ ‘ಚಲನವಲನ ನಿರ್ಬಂಧ ಆದೇಶ’ ಹೊರಡಿಸಿ, ಗಡಿಪಾರು ಮಾಡುವವರೆಗೆ ಕೊತ್ತನೂರಿನ ಯುಟಿಲ್ ಫೌಂಡೇಷನ್‌ನಿಂದ ಹೊರಹೋಗದಂತೆ ನಿರ್ಬಂಧ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಾದ-ಪ್ರತಿವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಅರ್ಜಿದಾರರು 1979ರಲ್ಲಿ ದೆಹಲಿಯಲ್ಲಿ ಜನಿಸಿದ್ದು, ಹುಟ್ಟಿನಿಂದಲೇ ಭಾರತೀಯ ಪ್ರಜೆಯಾಗಿದ್ದಾರೆ. ಅವರ ಬಳಿ ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ್, ಪಾನ್ ಕಾರ್ಡ್, ಚಾಲನಾ ಪರವಾನಗಿ ಹಾಗೂ ಉದ್ಯಮ್ ನೋಂದಣಿ ಸೇರಿ ಎಲ್ಲ ಅಧಿಕೃತ ದಾಖಲೆಗಳಿವೆ. ಆ ದಾಖಲೆಗಳನ್ನು ಪರಿಶೀಲಿಸದೆಯೇ ಏಕಪಕ್ಷೀಯವಾಗಿ ವಿದೇಶಿ ಪ್ರಜೆ ಎಂದು ನಿರ್ಧರಿಸಿ ಅವರನ್ನು ಬಂಧಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

ಈ ವಾದವನ್ನು ಅಲ್ಲಗಳೆದಿದ್ದ ಸರ್ಕಾರದ ಪರ ವಕೀಲರು, ಅರ್ಜಿದಾರ ಬಾಂಗ್ಲಾದೇಶದ ಬಾಗೇರ್‌ಹಟ್ ಮೂಲದವನಾಗಿದ್ದು, ಈ ಹಿಂದೆ 2012ರಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ನ್ಯಾಯಾಲಯದಿಂದ ವಿದೇಶಿಯರ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದಾನೆ. ಈ ಪ್ರಕರಣ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ವಿವರಿಸಿದ್ದರು.

ಮುಂದುವರಿದು, ಅರ್ಜಿದಾರ ಸಲ್ಲಿಸಿರುವ 1979ರ ಜನನ ಪ್ರಮಾಣಪತ್ರ ನಕಲಿಯಾಗಿದ್ದು, ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ದೆಹಲಿಯ ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆ ಸ್ಥಾಪನೆಯಾಗಿದ್ದೇ 1995ರಲ್ಲಿ. ನಕಲಿ ದಾಖಲೆಗಳ ಆಧಾರದಲ್ಲಿ ಉಳಿದ ಗುರುತಿನ ಚೀಟಿಗಳನ್ನು ಪಡೆಯಲಾಗಿದೆ. ಆದ್ದರಿಂದ, ಅವರನ್ನು ಬಂಧಿಸಿರುವ ಕ್ರಮ ಸರಿಯಾಗಿದೆ ಎಂದು ಅರ್ಜಿದಾರನ ಬಂಧನವನ್ನು ಸಮರ್ಥಿಸಿಕೊಂಡಿದ್ದರು.

Related Articles

Comments (0)

Leave a Comment