ಮಗುವಿನ ಕಲ್ಯಾಣವೊಂದನ್ನೇ ಮುಂದಿಟ್ಟು ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಆದೇಶಿಸಲಾಗದು; ಹೈಕೋರ್ಟ್
- by Prashanth Basavapatna
- November 14, 2026
- 15 Views
ಬೆಂಗಳೂರು: ಮಗುವಿನ ಕಲ್ಯಾಣವೇ ಪರಮ ಆದ್ಯತೆ ಎಂಬ ಕಾರಣವೊಂದನ್ನೇ ಮುಂದಿಟ್ಟುಕೊಂಡು ವ್ಯಕ್ತಿಯ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಆದೇಶಿಸಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಡಿಎನ್‌ಎ ಪರೀಕ್ಷೆ ನಡೆಸಲು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಪಡಿಸಿದೆ.
ಮಗುವಿನ ತಂದೆ ಯಾರೆಂದು ನಿರ್ಧರಿಸಲು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆ ನಡೆಸಲು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು (ಮಗುವಿನ ವಿವಾದಿತ ತಂದೆ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಪ್ರಕರಣವನ್ನು ಮರುಪರಿಶೀಲನೆಗಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.
ಹೈಕೋರ್ಟ್ ಆದೇಶವೇನು?
ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆ ಅಗತ್ಯವೇ ಎಂಬುದನ್ನು ತೀರ್ಮಾನಿಸುವ ಮೊದಲು, ಲಭ್ಯವಿರುವ ಇತರ ಸಾಕ್ಷ್ಯಗಳ ಆಧಾರದ ಮೇಲೆ ವಿವಾದವನ್ನು ಪರಿಹರಿಸಲು ಸಾಧ್ಯವೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದಿರುವ ಹೈಕೋರ್ಟ್, ಅಪ್ರಾಪ್ತ ಮಗುವಿನ ನಿರ್ವಹಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಮಗು ಹಾಗೂ ಅರ್ಜಿದಾರರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆ ನಡೆಸಲು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.
ಮಗುವಿನ ಕಲ್ಯಾಣವೇ ಪರಮ ಆದ್ಯತೆ ಎಂದು ಹೇಳುವುದರಿಂದ ಪ್ರಸ್ತಾವಿತ ಪರೀಕ್ಷೆ ಅಗತ್ಯ ಮತ್ತು ಪ್ರಮಾಣಬದ್ಧವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ದೊರೆಯುವುದಿಲ್ಲ. ವ್ಯಕ್ತಿಯು ಮಗುವಿನ ತಾಯಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದನ್ನು ಒಪ್ಪಿಕೊಂಡಿರುವುದು ಪಿತೃತ್ವದ ನಿರ್ಣಾಯಕ ಪುರಾವೆಯಾಗುವುದಿಲ್ಲ. ಇಬ್ಬರ ನಡುವಿನ ಸಂಬಂಧವು, ಮಹಿಳೆಗೆ ಜನಿಸಿದ ಮಗುವಿನ ತಂದೆ ಇಂಥ ವ್ಯಕ್ತಿಯೇ ಎಂಬುದನ್ನು ಸ್ವತಃ ಸಾಬೀತುಪಡಿಸುವುದಿಲ್ಲ. ಆದ್ದರಿಂದ, ನ್ಯಾಯಾಲಯವು ಕಾನೂನುಬದ್ಧವಾಗಿ ಸ್ವೀಕಾರಾರ್ಹವಾದ ಸಾಕ್ಷ್ಯಗಳ ಆಧಾರದ ಮೇಲೆ ವಿವಾದಿತ ಸಂಬಂಧವನ್ನು ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಪೂರಕ ಸಾಕ್ಷ್ಯಾಧಾರವಿಲ್ಲದಿದ್ದರೆ ಮಾತ್ರ ಡಿಎನ್‌ಎ ಪರೀಕ್ಷೆ:
ಮಗುವಿನ ಜನನದ ಸಂದರ್ಭ, ತಾಯಿಯೊಂದಿಗಿನ ಸಂಬಂಧದ ಅವಧಿ, ಮಗುವಿನ ಪಿತೃತ್ವವನ್ನು ಒಪ್ಪಿಕೊಂಡಿರುವ ಬಗ್ಗೆ ಇರುವ ದಾಖಲೆಗಳು ಹಾಗೂ ಇತರ ಸಂಬಂಧಿತ ಸಾಕ್ಷ್ಯಗಳನ್ನು ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಲಭ್ಯವಿರುವ ಸಾಕ್ಷ್ಯಗಳು ಪಿತೃತ್ವದ ವಿವಾದವನ್ನು ಪರಿಹರಿಸಲು ಸಾಲದಿದ್ದಲ್ಲಿ ಮಾತ್ರ ಡಿಎನ್‌ಎ ಪರೀಕ್ಷೆಯ ಅಗತ್ಯತೆಯನ್ನು ಪರಿಗಣಿಸಬೇಕು ಎಂದು ಹೇಳಿದೆ.
ಡಿಎನ್‌ಎ ಪರೀಕ್ಷೆಗೆ ವ್ಯಕ್ತಿಯ ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯ ಹಕ್ಕಿನ ಮೇಲೆ ಪರಿಣಾಮ ಬೀರುವುದರಿಂದ, ಪರೀಕ್ಷೆಗೆ ಆದೇಶಿಸುವ ಮೊದಲು ನ್ಯಾಯಾಲಯ ಎರಡೂ ಕಡೆಯ ಹಿತಾಸಕ್ತಿಗಳನ್ನು ಸಮತೋಲನಗೊಳಿಸಬೇಕು. ನಿರ್ವಹಣೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ನಿರ್ಧರಿಸುವುದು ಮುಖ್ಯ ಎಂಬುದನ್ನು ಮಗುವಿನ ನಿರ್ವಹಣೆಯ ಅಗತ್ಯ ತೋರಿಸುತ್ತದೆ. ಆದರೆ, ವೈಜ್ಞಾನಿಕ ಪರೀಕ್ಷೆಯ ಮೂಲಕವೇ ಆ ಅರ್ಜಿಯನ್ನು ನಿರ್ಧರಿಸಬೇಕು ಎಂದರ್ಥವಲ್ಲ ಎಂದು ನ್ಯಾಯಪೀಠ ಹೇಳಿದೆ.
ಕೌಟುಂಬಿಕ ನ್ಯಾಯಾಲಯವು ಮಗುವಿನ ಕಲ್ಯಾಣ, ನಿರ್ವಹಣೆಯ ಅಗತ್ಯ ಮತ್ತು ವ್ಯಕ್ತಿಯ ದೈಹಿಕ ಸಂಬಂಧದ ಒಪ್ಪಿಗೆಯನ್ನು ಪ್ರಮುಖವಾಗಿ ಪರಿಗಣಿಸಿದೆ. ಆದರೆ, ಡಿಎನ್‌ಎ ಪರೀಕ್ಷೆ ಅಗತ್ಯವೇ ಎಂಬುದನ್ನು ನಿರ್ಧರಿಸಲು ಇತರ ಸಾಕ್ಷ್ಯಗಳನ್ನು ಪರಿಶೀಲಿಸುವ ವಿಚಾರವನ್ನು ಕೈಬಿಟ್ಟಿದೆ. ಇವಾನ್ ರತಿನಮ್ ಹಾಗೂ ಮಿಲಾನ್ ಜೋಸೆಫ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರೂಪಿಸಿರುವ ತತ್ವಗಳ ಪ್ರಕಾರ, ಡಿಎನ್‌ಎ ಪರೀಕ್ಷೆಗೆ ಆದೇಶಿಸುವಾಗ ಸಾಕ್ಷ್ಯಗಳ ಅಗತ್ಯತೆ ಮತ್ತು ಪ್ರಮಾಣಬದ್ಧತೆಯನ್ನು ಪರಿಶೀಲಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಡಿಎನ್‌ಎ ಪರೀಕ್ಷೆ ಅಗತ್ಯವೆಂದು ಕಂಡುಬಂದಲ್ಲಿ, ಇತರ ಸಾಕ್ಷ್ಯಗಳ ಮೂಲಕ ವಿವಾದವನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಮತ್ತು ವ್ಯಕ್ತಿಯ ಗೌಪ್ಯತೆಯ ಮೇಲೆ ಉಂಟಾಗುವ ಪರಿಣಾಮವು ಪ್ರಕರಣದ ಉದ್ದೇಶಕ್ಕೆ ಪ್ರಮಾಣಬದ್ಧವಾಗಿದೆ ಎಂಬುದನ್ನು ವಿವರಿಸುವ ಕಾರಣಗಳನ್ನು ದಾಖಲಿಸಬೇಕು ಎಂದಿರುವ ಹೈಕೋರ್ಟ್, ಅರ್ಜಿಯನ್ನು ತ್ವರಿತವಾಗಿ ನಿರ್ಧರಿಸುವಂತೆಯೂ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದೆ.
ಪ್ರಕರಣವೇನು?
ಅರ್ಜಿದಾರರು ಮಗುವೊಂದರ ಜೈವಿಕ ತಂದೆ ಎಂಬುದನ್ನು ನಿರಾಕರಿಸಿದ್ದರು. ಅಪ್ರಾಪ್ತ ಮಗುವಿನ ನಿರ್ವಹಣೆ ಕೋರಿ ಅರ್ಜಿದಾರರ ವಿರುದ್ಧ ಮಗುವಿನ ತಾಯಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ, ಮಗುವಿನ ಪಿತೃತ್ವವನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರಿ ತಾಯಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಮಗುವಿನ ಮತ್ತು ಅರ್ಜಿದಾರರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು 2026ರ ಮಾರ್ಚ್ 18ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)