ಸಮವಸ್ತ್ರಧಾರಿಗಳ ಸೇವೆಯಲ್ಲಿ ಉನ್ನತ ನೈತಿಕತೆ ಅಗತ್ಯ; ಹೈಕೋರ್ಟ್‌ ಅಭಿಮತ

ಬೆಂಗಳೂರು: ಸಮವಸ್ತ್ರಧಾರಿಗಳ ಸೇವೆಯಲ್ಲಿ ಹೆಚ್ಚಿನ ನೈತಿಕ ನಡವಳಿಕೆ ಅಗತ್ಯವಾಗಿದ್ದು, ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್‌ ಸಿಬ್ಬಂದಿಯಿಂದ ಅಶಿಸ್ತಿನ ವರ್ತನೆ ನಿರೀಕ್ಷಿಸಲಾಗದು ಎಂದಿರುವ ಹೈಕೋರ್ಟ್, ಎರಡು ಕ್ರಿಮಿನಲ್‌ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದರೂ, ಪೊಲೀಸ್ ಪೇದೆಯೊಬ್ಬರ ಒಂದು ವಾರ್ಷಿಕ ವೇತನ ಬಡ್ತಿ ತಡೆಹಿಡಿದ ಇಲಾಖಾ ಆದೇಶ ರದ್ದುಪಡಿಸಲು ನಿರಾಕರಿಸಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ಪೊಲೀಸ್‌ ಠಾಣೆಯ ಸಿವಿಲ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಆರ್‌.ಕೆ. ಬಿರಾದಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಹಾಗೂ ನ್ಯಾಯಮೂರ್ತಿ ಸುಬ್ರಹ್ಮಣ್ಯ ರಂಗರಾವ್‌ ಅವರಿದ್ದ ವಿಭಾಗೀಯ ನ್ಯಾಯಪೀಠ (ಕಲಬುರಗಿ) ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ಅರ್ಜಿದಾರರಿಗೆ ದೊರೆತಿರುವುದು ಸಂಶಯದ ಲಾಭದ ಆಧಾರದ ಖುಲಾಸೆ. ಒಂದು ಪ್ರಕರಣದಲ್ಲಿ ಮೃತರ ಪತ್ನಿ ಮತ್ತು ಪುತ್ರ ಸಾವಿಗೆ ಅಪಘಾತ ಕಾರಣ ಎಂದು ಹೇಳಿದ್ದರಿಂದ ಆರೋಪಿಗಳ ಪಾತ್ರದ ಬಗ್ಗೆ ಸಂಶಯ ಉಂಟಾಗಿತ್ತು. ಮತ್ತೊಂದು ಪ್ರಕರಣದಲ್ಲಿ ದೂರುದಾರರು ಹಾಗೂ ಸಂತ್ರಸ್ತರು ಪ್ರತಿಕೂಲ ಸಾಕ್ಷಿಗಳಾಗಿ, ಅಭಿಯೋಜನೆಯ ವಾದ ಬೆಂಬಲಿಸಿರಲಿಲ್ಲ ಎಂದು ವಿಚಾರಣಾ ಕೋರ್ಟ್‌ಗಳ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೊರೆತ ಖುಲಾಸೆಯನ್ನೇ ಇಲಾಖಾ ಕ್ರಮ ರದ್ದತಿಗೆ ಆಧಾರವಾಗಿಸಿಕೊಳ್ಳಲಾಗದು ಎಂದು ಹೇಳಿದೆ.

ಕ್ರಿಮಿನಲ್‌ ವಿಚಾರಣೆಯಲ್ಲಿ ಆರೋಪವು ಸಂಶಯಾತೀತವಾಗಿ ಸಾಬೀತಾಗಬೇಕು. ಆದರೆ, ಇಲಾಖಾ ವಿಚಾರಣೆಯಲ್ಲಿ ಸಂಭವನೀಯತೆಗಳ ಮೇಲುಗೈ ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಪ್ರಕರಣವನ್ನು ಯಾವುದೇ ಸಾಕ್ಷ್ಯವೇ ಇಲ್ಲದ ಪ್ರಕರಣವೆಂದು ಪರಿಗಣಿಸಲಾಗದು. ಪೊಲೀಸ್‌ ಪಡೆ ಶಿಸ್ತುಬದ್ಧ ವ್ಯವಸ್ಥೆಯಾಗಿದ್ದು, ಅದರ ಸದಸ್ಯರು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ಪೊಲೀಸ್‌ ಸಿಬ್ಬಂದಿಯೇ ಅಪರಾಧ ಚಟುವಟಿಕೆಯಲ್ಲಿ ತೊಡಗಿದರೆ ಅದು ಕಾನೂನು–ಸುವ್ಯವಸ್ಥೆ ನಿರ್ವಹಣೆಗೆ ವಿರುದ್ಧವಾಗುತ್ತದೆ. ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಜನರ ಮೊದಲ ಸಂಪರ್ಕವಾಗಿರುವ ಪೊಲೀಸರು ನೈತಿಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?
ಬಿರಾದಾರ್ ಅವರನ್ನು 2016 ಹಾಗೂ 2017ರ ಎರಡು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಹೆಸರಿಸಲಾಗಿತ್ತು. ಕೊಲೆ ಯತ್ನ, ಕೊಲೆ, ಗಲಭೆ, ಹಲ್ಲೆ ಸೇರಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌‌ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25(1ಎ) ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇವು ಕುಟುಂಬದ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲ; ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ವೈಷಮ್ಯಕ್ಕೆ ಸಂಬಂಧಿಸಿದ್ದವು. ಪೊಲೀಸ್‌ ಸೇವೆಗೆ ತಕ್ಕುದಲ್ಲದ ನಡವಳಿಕೆಯ ಆರೋಪದ ಮೇಲೆ 2018ರ ಫೆಬ್ರವರಿ 21ರಂದು ಇಲಾಖಾ ವಿಚಾರಣೆಯ ಆರೋಪಪಟ್ಟಿ ನೀಡಲಾಗಿತ್ತು.

ವಿಚಾರಣಾ ವರದಿಯ ಬಳಿಕ 2019ರ ಫೆಬ್ರವರಿ 6ರಂದು ಎರಡನೇ ಶೋಕಾಸ್ ನೋಟಿಸ್‌ ನೀಡಲಾಗಿತ್ತು. ನಂತರ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 2019ರ ಆಗಸ್ಟ್‌ 7ರಂದು ಅವರನ್ನು ಸೇವೆಯಿಂದ ವಜಾಗೊಳಿಸಿದ್ದರು. ವಜಾ ಆದೇಶದ ವಿರುದ್ಧ ಬಿರಾದಾರ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಪ್ರಾಧಿಕಾರವಾದ ಪೊಲೀಸ್‌ ಮಹಾನಿರೀಕ್ಷಕರು 2022ರ ನವೆಂಬರ್ 24ರಂದು ಶಿಕ್ಷೆ ಕಡಿಮೆ ಮಾಡಿ, ಒಂದು ವಾರ್ಷಿಕ ವೇತನ ಬಡ್ತಿ ತಡೆಹಿಡಿಯುವಂತೆ ಆದೇಶಿಸಿದ್ದರು. ಆ ಶಿಕ್ಷೆಯನ್ನೂ ಪ್ರಶ್ನಿಸಿ ಬಿರಾದಾರ ಕೆಎಟಿ ಮೊರೆ ಹೋಗಿದ್ದರು. ನ್ಯಾಯಮಂಡಳಿ 2023ರ ಜುಲೈ 17ರಂದು ಅವರ ಅರ್ಜಿ ವಜಾಗೊಳಿಸಿದ್ದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಎರಡೂ ಕ್ರಿಮಿನಲ್‌ ಪ್ರಕರಣಗಳಲ್ಲಿ ಖುಲಾಸೆಯಾಗಿರುವುದರಿಂದ ವಾರ್ಷಿಕ ವೇತನ ಬಡ್ತಿ ತಡೆಹಿಡಿಯಲು ಸಮರ್ಥನೀಯ ಕಾರಣವಿಲ್ಲ ಎಂದು ಬಿರಾದಾರ್ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಆರೋಪಗಳ ಗಂಭೀರತೆಯ ನಡುವೆಯೂ ಮೇಲ್ಮನವಿ ಪ್ರಾಧಿಕಾರ ಈಗಾಗಲೇ ಸೌಮ್ಯ ನಿಲುವು ತಳೆದು ವಜಾ ಶಿಕ್ಷೆ ಕಡಿಮೆ ಮಾಡಿದ್ದು, ಮತ್ತಷ್ಟು ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಸರ್ಕಾರ ವಾದಿಸಿತ್ತು.

Related Articles

Comments (0)

Leave a Comment