ಸಿದ್ದರಾಮಯ್ಯ ಗುರಿಯಾಗಿಸಿ ನಕಲಿ ಸ್ಟಿಂಗ್ ವಿಡಿಯೊ ಪ್ರಕರಣ; ಕೃಪಾ ಆಳ್ವಾ ಸೇರಿ ಮೂವರು ಆರೋಪಿಗಳಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು
- by Jagan Ramesh
- November 4, 2026
- 11 Views
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ರೂಪಿಸಲಾಗಿದ್ದ ನಕಲಿ ಸ್ಟಿಂಗ್ ವಿಡಿಯೊ ಪ್ರಸಾರ ಪ್ರಕರಣದಲ್ಲಿ ಅಮಾನತುಗೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವಾ, ಪವರ್ ಟಿವಿ ಕ್ಯಾಮರಾಮನ್ ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ನವೆಂಬರ್ 2ರಂದು ಈ ಆದೇಶ ಮಾಡಿದ್ದು, ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸುವ ಜತೆಗೆ ನ್ಯಾಯಸಮ್ಮತ ತನಿಖೆ ನಡೆಸಲು ಅಗತ್ಯವಾದ ಕಠಿಣ ಷರತ್ತುಗಳನ್ನು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ನ್ಯಾಯಾಲು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅದರಂತೆ, ಆರೋಪಿಗಳು ಬಂಧನಕ್ಕೊಳಗಾದಲ್ಲಿ ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರು ಜಾಮೀನುದಾರರನ್ನು ಒದಗಿಸುವ ಷರತ್ತಿನ ಮೇಲೆ ಮೂವರೂ ಆರೋಪಿಗಳಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಆರೋಪಿಗಳ ವಾದವೇನು?
ಕೃಪಾ ಆಳ್ವಾ ಅವರು ಅಕ್ಟೋಬರ್ 7, 10 ಮತ್ತು 18ರಂದು ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪೂರ್ವಭಾವಿ ನೋಟಿಸ್ಗಳನ್ನು ನೀಡಿರಲಿಲ್ಲ. ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ಆರೋಪಿಸಿರುವಂತೆ ಕೃಪಾ ಅವರು ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡಿಲ್ಲ. ಆದರೂ, ಅವರನ್ನು ಬಂಧಿಸಿ ವಶಕ್ಕೆ ಪಡೆಯುವ ಆತಂಕವಿದೆ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಪವರ್ ಟಿವಿ ಕ್ಯಾಮರಾಮನ್ ಕೆ.ವಿ. ಪ್ರಶಾಂತ್ ಕುಮಾರ್ ಪರ ವಕೀಲರು ವಾದ ಮಂಡಿಸಿ, ಪ್ರಶಾಂತ್ ಅವರು ತನಿಖೆಗೆ ಸಹಕರಿಸಿದ್ದು, ಪೊಲೀಸರು ಈಗಾಗಲೇ ಅವರ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತ ಅಪರಾಧಗಳಲ್ಲಿ ಪ್ರಶಾಂತ್ ಕುಮಾರ್ ಯಾವುದೇ ಪಾತ್ರ ವಹಿಸಿಲ್ಲ. ಅವರು ವಿವಾದಿತ ಯೂಟ್ಯೂಬ್ ಚಾನೆಲ್ನ ಮಾಲೀಕ, ಸೃಷ್ಟಿಕರ್ತ ಅಥವಾ ನಿರ್ವಾಹಕರೂ ಅಲ್ಲ ಎಂದು ವಾದಿಸಿದರು.
ಮತ್ತೊಬ್ಬ ಆರೋಪಿ ವಿನೋದ್ ಕುಮಾರ್ ಪರ ವಕೀಲರು, ವಿನೋದ್ ಅವರ ನಿವಾಸದಲ್ಲಿ ಶೋಧನಾ ವಾರಂಟ್ ಆಧರಿಸಿ ತನಿಖಾಧಿಕಾರಿಗಳು ಶೋಧ ನಡೆಸಿದ್ದು, ಅವರು ತನಿಖೆಗೆ ಸಹಕರಿಸಿದ್ದಾರೆ. ಆರೋಪಿತ ಮಾನನಷ್ಟ ಕೃತ್ಯದಲ್ಲಿ ವಿನೋದ್ ಕುಮಾರ್ ಯಾವುದೇ ಪಾತ್ರ ಹೊಂದಿಲ್ಲ. ಅವರು ಯೂಟ್ಯೂಬ್ ಚಾನೆಲ್ನ ಮಾಲೀಕ, ಸೃಷ್ಟಿಕರ್ತ ಅಥವಾ ನಿರ್ವಾಹಕರಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ:
2025ರ ಸೆಪ್ಟೆಂಬರ್ 26ರಂದು ಆನ್ಲೈನ್ನಲ್ಲಿ ಪ್ರಸಾರವಾಗಿದ್ದ ವಿಡಿಯೊ ಒಂದರಲ್ಲಿ, 2011ರಲ್ಲಿ ಸಿದ್ದರಾಮಯ್ಯ ಅವರಿಂದ ತಾನು ಸಂತ್ರಸ್ತೆಯಾಗಿದ್ದೇನೆ ಎಂದು ಹೇಳಿಕೊಂಡ ಮಹಿಳೆಯೊಂದಿಗೆ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಮತ್ತು ಕೃಪಾ ಆಳ್ವಾ ಸಂಭಾಷಣೆ ನಡೆಸುತ್ತಿರುವ ದೃಶ್ಯಗಳಿದ್ದವು ಎನ್ನಲಾಗಿದೆ. ಈ ವಿಡಿಯೊ ನಕಲಿಯಾಗಿದ್ದು, ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ಮೇಲ್ ಮಾಡುವ ಹಾಗೂ ಮಾನಹಾನಿ ಮಾಡುವ ಉದ್ದೇಶದಿಂದ ದುರುದ್ದೇಶಪೂರಿತ ಆರೋಪಗಳನ್ನು ಒಳಗೊಂಡ ವಿಡಿಯೊ ಅನ್ನು ಅಪರಿಚಿತರು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ಅಕ್ಟೋಬರ್ 6ರಂದು ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೊ ಬೆಳಕಿಗೆ ಬಂದ ಬಳಿಕ ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಕೃಪಾ ಆಳ್ವಾ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು.
ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 61 (ಕ್ರಿಮಿನಲ್ ಪಿತೂರಿ), ಸೆಕ್ಷನ್ 3(5) (ಸಾಮಾನ್ಯ ಉದ್ದೇಶದಡಿ ಜಂಟಿ ಹೊಣೆಗಾರಿಕೆ), ಸೆಕ್ಷನ್ 308(6) (ಸುಲಿಗೆ), ಸೆಕ್ಷನ್ 336(4) ಮತ್ತು 340(2) (ನಕಲಿ ದಾಖಲೆ ಸೃಷ್ಟಿ ಹಾಗೂ ನಕಲಿ ದಾಖಲೆ ಬಳಕೆಗೆ ಸಂಬಂಧಿಸಿದ ಅಪರಾಧಗಳು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಸಿ (ಗುರುತಿನ ಕಳವು) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.
ಇದೇ ಪ್ರಕರಣದಲ್ಲಿ ಅಕ್ಟೋಬರ್ 29ರಂದು ಜನತಾದಳ (ಜಾತ್ಯತೀತ) ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಮೂವರು ಕಾರ್ಯಕರ್ತರಿಗೆ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಇದಕ್ಕೂ ಮುನ್ನ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.
Related Articles
Thank you for your comment. It is awaiting moderation.


Comments (0)