ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ; ಎಸ್‌ಐಟಿಗೆ ಐಪಿಎಸ್ ಅಧಿಕಾರಿಗಳಾದ ಆರ್. ಹಿತೇಂದ್ರ, ಸೌಮೇಂದು ಮುಖರ್ಜಿ ನೇಮಕ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿನ ಅಕ್ರಮ ಆರೋಪಗಳ ತನಿಖೆ ನಡೆಸುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಿರಿಯ ಐಪಿಎಸ್‌ ಅಧಿಕಾರಿಗಳಾದ ಆರ್‌. ಹಿತೇಂದ್ರ ಮತ್ತು ಸೌಮೇಂದು ಮುಖರ್ಜಿ ಅವರನ್ನು ನೇಮಕ ಮಾಡಿ ಹೈಕೋರ್ಟ್‌ ಆದೇಶಿಸಿದೆ.

ಸ್ವತಂತ್ರ ಹಾಗೂ ವಿಶ್ವಾಸಾರ್ಹ ತನಿಖೆ ನಡೆಸುವಂತೆ ಎಸ್‌ಐಟಿಗೆ ನಿರ್ದೇಶಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಹಿಂದೆ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಸಿಐಡಿ ಅಧಿಕಾರಿಗಳನ್ನು ಎಸ್‌ಐಟಿಯಲ್ಲಿ ಮುಂದುವರಿಸಬಾರದು ಎಂದೂ ಸೂಚಿಸಿದೆ.

ಎಸ್‌ಐಟಿ ಸೂಚಿಸುವ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೇಮಿಸಬೇಕು, ತನಿಖೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಜತೆಗೆ, ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಎಸ್‌ಐಟಿ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವಂತೆಯೂ ಸೂಚಿಸಿದೆ.

ಹಿಂದಿನ ವಿಚಾರಣೆಯಲ್ಲಿ ಎಸ್‌ಐಟಿಗೆ ಅಧಿಕಾರಿಗಳ ನೇಮಕ ಸಂಬಂಧ ಸರ್ಕಾರ ಸೂಚಿಸಿದ್ದ ಹೆಸರುಗಳ ಕುರಿತು ಅರ್ಜಿದಾರರ ಪರ ವಕೀಲ ಗಿರೀಶ್‌ ಭಾರದ್ವಾಜ್‌ ಆಕ್ಷೇಪಣೆ ಸಲ್ಲಿಸಿದ್ದರು. ಈ ವೇಳೆ ರಾಜ್ಯದಲ್ಲಿ ಎಡಿಜಿಪಿ ದರ್ಜೆಯ ಎಷ್ಟು ಅಧಿಕಾರಿಗಳಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.

ರಾಜ್ಯದಲ್ಲಿ 16 ಎಡಿಜಿಪಿ ದರ್ಜೆಯ ಅಧಿಕಾರಿಗಳಿದ್ದು, ಸುಪ್ರೀಂಕೋರ್ಟ್‌ ಆದೇಶದಂತೆ ನಾಲ್ವರು ಅಧಿಕಾರಿಗಳ ಹೆಸರುಗಳನ್ನು ಸೂಚಿಸಲಾಗಿದೆ ಎಂದು ಅಡ್ವೊಕೆಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ತಿಳಿಸಿದ್ದರಲ್ಲದೆ, ಅವರಲ್ಲಿ ಇಬ್ಬರ ಬಗ್ಗೆ ಅರ್ಜಿದಾರರು ಸಹಮತ ಸೂಚಿಸಿದ್ದಾರೆ ಎಂದೂ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಜತೆಗೆ, ಎಸ್‌ಐಟಿಗೆ ಪೊಲೀಸ್‌ ಠಾಣೆ ಸ್ಥಾನಮಾನ ನೀಡಲಾಗಿದೆ ಎಂಬುದನ್ನೂ ಅಡ್ವೊಕೆಟ್‌ ಜನರಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಪ್ರಕರಣವೇನು?
ಕೆಪಿಎಸ್‌ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಮನವಿಯನ್ನು ನಿರಾಕರಿಸಿತ್ತಾದರೂ, ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೇತೃತ್ವದ ಐವರು ಸದಸ್ಯರ ಎಸ್‌ಐಟಿ ರಚನೆಗೆ ಸೆಪ್ಟೆಂಬರ್ 21ರಂದು ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಬಳಿಕ ಸುಪ್ರೀಂಕೋರ್ಟ್‌, ಎಸ್‌ಐಟಿ ಮುಖ್ಯಸ್ಥರಾದ ಅಲೋಕ್‌ ಕುಮಾರ್‌ ಮತ್ತು ಸದಸ್ಯರಾಗಿದ್ದ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕಿ ಐಜಿಪಿ ಡಾ. ದಿವ್ಯಾ ಗೋಪಿನಾಥನ್ ಅವರನ್ನು ಬದಲಿಸಲು ಸೂಚನೆ ನೀಡಿತ್ತು.

ಅದರಂತೆ ಸೋಮವಾರ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್‌, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರನ್ನು ಎಸ್‌ಐಟಿಯ ನೂತನ ಮುಖ್ಯಸ್ಥರಾಗಿ ನೇಮಕ ಮಾಡಿದೆ. ಜತೆಗೆ, ಡಾ. ದಿವ್ಯಾ ಗೋಪಿನಾಥನ್‌ ಅವರ ಜಾಗಕ್ಕೆ ಎಡಿಜಿಪಿ ಸೋಮೇಂದು ಮುಖರ್ಜಿ ಅವರನ್ನು ಸದಸ್ಯರನ್ನಾಗಿ ಮಾಡಿದೆ. ಉಳಿದಂತೆ ಉಪ ಪೊಲೀಸ್‌ ಆಯುಕ್ತ ಅನೂಪ್‌ ಶೆಟ್ಟಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ಮತ್ತು ಉಪ ಪೊಲೀಸ್‌ ಆಯುಕ್ತ ಶಮಾ ಮಿಶ್ರಾ ಅವರು ಎಸ್ಐಟಿ ಸದಸ್ಯರಾಗಿ ಮುಂದುವರಿಯಲಿದ್ದಾರೆ.

Related Articles

Comments (0)

Leave a Comment