ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆ ನಿಷೇಧ ಪ್ರಶ್ನಿಸಿ ರಿಟ್; ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್
- by Prashanth Basavapatna
- October 30, 2026
- 12 Views
ಬೆಂಗಳೂರು: ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆಯನ್ನು ನಿಷೇಧಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕಬ್ಬಿನ ರಸ ಬಳಸಿ ಎಥೆನಾಲ್ ಉತ್ಪಾದಿಸುವುದನ್ನು ಅಕ್ಟೋಬರ್ 22ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಬೆಳಗಾವಿ ಮೂಲದ ಎಥೆನಾಲ್ ಉತ್ಪಾದನಾ ಕಂಪನಿ ಆಸ್ಕಿನ್ಸ್ ಬಯೋಫ್ಯೂಯಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜೆ. ಅಸ್ಕಿ ಹಾಗೂ ಶ್ರೀ ಬ್ರಹ್ಮಾನಂದಸಾಗರ್ ಜಾಗರಿ ಇಂಡಸ್ಟ್ರೀಸ್‌ನ ಪಾಲುದಾರ ಮಹಾವೀರ್ ಜೆ. ಅಸ್ಕಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಅನಿರುದ್ಧ್ ಆರ್.ಜೆ. ನಾಯಕ್ ವಾದ ಮಂಡಿಸಿ, ಆಸ್ಕಿನ್ಸ್ ಬಯೋಫ್ಯೂಯಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಬ್ಬು ನಿಯಂತ್ರಣ ಆದೇಶ-1966 ವ್ಯಾಪ್ತಿಗೆ ಬರುವುದಿಲ್ಲ. ಈ ಕಂಪನಿ 2022ರಿಂದ ಕಬ್ಬಿನ ರಸ ಬಳಸಿ ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಅದಕ್ಕೆ ಬ್ರಹ್ಮಾನಂದಸಾಗರ್ ಜಾಗರಿ ಇಂಡಸ್ಟ್ರೀಸ್ ಕಬ್ಬಿನ ರಸ ಮತ್ತು ಪಾಕ ಪೂರೈಸುತ್ತಿವೆ. ರಾಜ್ಯ ಸರ್ಕಾರದ ಕಾನೂನುಬಾಹಿರ ಕ್ರಮದಿಂದಾಗಿ ಎಥೆನಾಲ್ ಉತ್ಪಾದನೆ ನಿಂತು ಹೋಗಿದೆ. ಹೈಕೋರ್ಟ್ ಆದೇಶದಂತೆ ಕೆಲ ತಿಂಗಳವರೆಗೆ ಎಥೆನಾಲ್ ಉತ್ಪಾದನೆ ನಡೆದಿತ್ತು. ಇದೀಗ ಕೇಂದ್ರ ಸರ್ಕಾರ ಎಥೆನಾಲ್ ಉತ್ಪಾದನೆಗೆ ಕಬ್ಬಿನ ರಸ ಬಳಕೆಯನ್ನು ನಿಷೇಧಿಸಿರುವುದರಿಂದ ಸಂಕಷ್ಟ ಎದುರಾಗಿದೆ. ಇದು ಆರ್ಥಿಕ ದುಷ್ಪರಿಣಾಮಗಳನ್ನು ಉಂಟು ಮಾಡಲಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಸುತ್ತೋಲೆಗೆ ತಡೆ ನೀಡಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್, ಕೇಂದ್ರ ಸರ್ಕಾರದ ಸುತ್ತೋಲೆಗೆ ತಡೆ ನೀಡುವುದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದರಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.
ಅಂತಿಮವಾಗಿ ನ್ಯಾಯಪೀಠ, ಸುತ್ತೋಲೆಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ಮುಂದಿನ ವಿಚಾರಣೆ ವೇಳೆ ಪರಿಗಣಿಸಲಾಗುವುದು ಎಂದು ತಿಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?
ದೇಶದಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು 2026-27ರ ಎಥೆನಾಲ್ ಪೂರೈಕೆ ವರ್ಷ (2026ರ ನವೆಂಬರ್ 1ರಿಂದ 2027ರ ಅಕ್ಟೋಬರ್ 31ರವರೆಗೆ) ಕಬ್ಬಿನ ರಸ ಮತ್ತು ಬಿ-ಹೆವಿ ಮೊಲಾಸಸ್ ಬಳಸಿ ಎಥೆನಾಲ್ ಉತ್ಪಾದಿಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಸಕ್ಕರೆ ಆಯುಕ್ತಾಲಯ 2026ರ ಅಕ್ಟೋಬರ್ 22ರಂದು ಎಲ್ಲ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳ (ಮದ್ಯ ತಯಾರಿಕಾ ಘಟಕಗಳು), ಅಬಕಾರಿ ಇಲಾಖೆಗೆ ಪ್ರಕಟಣೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.


Comments (0)