ಅಪರಾಧ ಕೃತ್ಯಕ್ಕೂ ಮುನ್ನ ಸಂಪಾದಿಸಿದ್ದ ಸ್ವತ್ತನ್ನು ಪಿಎಂಎಲ್ಎ ಅಡಿ ತಾತ್ಕಾಲಿಕ ಜಪ್ತಿಯಿಂದ ಹೊರಗಿಡಲಾಗದು; ಹೈಕೋರ್ಟ್
- by LegalSamachar
- November 5, 2026
- 6 Views
ಬೆಂಗಳೂರು: ಅಪರಾಧ ಕೃತ್ಯ ನಡೆಯುವುದಕ್ಕೂ ಹಲವು ವರ್ಷಗಳ ಮೊದಲೇ ಆಸ್ತಿ ಖರೀದಿಸಲಾಗಿದೆ ಎಂಬ ಕಾರಣಕ್ಕೆ ಆ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯ ತಾತ್ಕಾಲಿಕ ಜಪ್ತಿ ಪ್ರಕ್ರಿಯೆಯಿಂದ ಹೊರಗಿಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಆಪಾದಿತ ಕೃತ್ಯಕ್ಕೂ ಮುನ್ನ ಸಂಪಾದಿಸಿರುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದ ಕ್ರಮ ಪ್ರಶ್ನಿಸಿ ಮಂಗಳೂರಿನ ಉದ್ಯಮಿ ಶಂಕರ್ ಮಹಾದೇವನ್ ಅಯ್ಯರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ.
ಜತೆಗೆ, ಅಪರಾಧದಿಂದ ಗಳಿಸಿದ ಆದಾಯಕ್ಕೆ ಸಮಾನ ಮೌಲ್ಯದ ಆಸ್ತಿ ಜಪ್ತಿ ಮಾಡುವುದಕ್ಕೆ ಅವಕಾಶವಿದ್ದು, ಅದಕ್ಕೆ ಅಗತ್ಯವಾದ ಕಾನೂನು ಷರತ್ತುಗಳನ್ನು ಪಾಲಿಸಿರಬೇಕಷ್ಟೇ ಎಂದೂ ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದರೆ, ಪಿಎಂಎಲ್ಎ ಅಡಿ ಅರ್ಜಿದಾರರಿಗೆ ಲಭ್ಯವಿರುವ ಕಾನೂನು ಪರಿಹಾರಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಮುಕ್ತವಾಗಿರಿಸಲಾಗಿದೆ.
ಮೊದಲೇ ಖರೀದಿಸಿದ ಆಸ್ತಿಗಳನ್ನು ನಂತರದ ಅಪರಾಧದಿಂದ ನೇರವಾಗಿ ಗಳಿಸಿದವು ಎಂದು ಪರಿಗಣಿಸಲಾಗದು ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಆದರೆ, ಅವುಗಳನ್ನು ನೇರ ಅಪರಾಧದ ಆದಾಯವೆಂದು ಪರಿಗಣಿಸುವುದಕ್ಕೂ, ಸಮಾನ ಮೌಲ್ಯದ ಆಸ್ತಿಯಾಗಿ ಜಪ್ತಿ ಮಾಡುವುದಕ್ಕೂ ವ್ಯತ್ಯಾಸವಿದೆ. ಪಿಎಂಎಲ್ಎ ಸೆಕ್ಷನ್ 2(1)(ಯು) ಅನ್ನು ಸೆಕ್ಷನ್ 5ರೊಂದಿಗೆ ಓದಿದಾಗ, ಅಗತ್ಯ ಷರತ್ತುಗಳಿಗೆ ಒಳಪಟ್ಟು ಇಂತಹ ಜಪ್ತಿಗೆ ಅವಕಾಶವಿದೆ ಎಂದು ನ್ಯಾಯಪೀಠ ಹೇಳಿದೆ.
ಸಮಾನ ಮೌಲ್ಯದ ಆಸ್ತಿ ಜಪ್ತಿಯ ಅವಕಾಶವು ಮೂಲ ಅಪರಾಧದ ಆದಾಯವನ್ನು ವಿದೇಶಕ್ಕೆ ಸಾಗಿಸಿದ ಅಥವಾ ವಿದೇಶದಲ್ಲಿರಿಸಿದ ಪ್ರಕರಣಗಳಿಗೆ ಮಾತ್ರ ಸೀಮಿತ ಎಂಬ ಅರ್ಜಿದಾರರ ವಾದವನ್ನು ಒಪ್ಪದ ನ್ಯಾಯಾಲಯ, ವಿಜಯ್ ಮದನ್ಲಾಲ್ ಚೌಧರಿ ಪ್ರಕರಣದಲ್ಲಿನ ಸುಪ್ರೀಂಕೋರ್ಟ್ ವ್ಯಾಖ್ಯಾನವನ್ನು ಉಲ್ಲೇಖಿಸಿ ಈ ಆದೇಶ ನೀಡಿದೆ. ಈ ತೀರ್ಪಿನಿಂದ ಆರೋಪಿಯ ಯಾವುದೇ ಆಸ್ತಿಯನ್ನು ಷರತ್ತುಗಳಿಲ್ಲದೆ ಜಪ್ತಿ ಮಾಡಬಹುದು ಎಂದರ್ಥವಲ್ಲ ಎಂದು ನ್ಯಾಯಾಲಯ ಒತ್ತಿಹೇಳಿದೆ. ಮೂಲ ಅಪರಾಧದ ಆದಾಯ ಲಭ್ಯವಿಲ್ಲವೇ, ಅರ್ಜಿದಾರರು ಸ್ವೀಕರಿಸಿದ ಹಣ ಅಪರಾಧದ ಆದಾಯವೇ ಹಾಗೂ ಜಪ್ತಿಗೆ ಅಗತ್ಯ ಷರತ್ತುಗಳು ಈಡೇರಿವೆಯೇ ಎಂಬ ಪ್ರಶ್ನೆಗಳನ್ನು ಸಾಕ್ಷ್ಯಾಧಾರಗಳ ಆಧಾರದಲ್ಲಿ ಸಕ್ಷಮ ಪ್ರಾಧಿಕಾರ ಮತ್ತು ಕಾನೂನಿನ ಮೇಲ್ಮನವಿ ಪ್ರಕ್ರಿಯೆಯಲ್ಲಿ ಪರಿಶೀಲಿಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
ಸೆಕ್ಷನ್ 5(1)ರ ಅಡಿ ತಾತ್ಕಾಲಿಕ ಜಪ್ತಿಗೂ ಮುನ್ನ ವಿಚಾರಣೆಯ ಅವಕಾಶ ನೀಡಬೇಕೆಂಬ ಕಡ್ಡಾಯ ನಿಯಮವಿಲ್ಲ. ಆದರೆ, ನಂತರದ ಸೆಕ್ಷನ್ 8ರ ಪ್ರಕ್ರಿಯೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಸೇರಿದಂತೆ ಕಾನೂನುಬದ್ಧ ರಕ್ಷಣೆಗಳಿವೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಪ್ರಕರಣವೇನು?
2011-2012ರ ಅವಧಿಯ ಕಬ್ಬಿಣದ ಅದಿರು ರಫ್ತು ವ್ಯವಹಾರಕ್ಕೆ ಸಂಬಂಧಿಸಿದ ವಂಚನೆ ಆರೋಪ ಈ ಪ್ರಕರಣದ ಹಿನ್ನೆಲೆಯಾಗಿದೆ. ರಫ್ತಿಗೆ 40 ಸಾವಿರ ಮೆಟ್ರಿಕ್ ಟನ್ ಅದಿರು ಲಭ್ಯವಿದೆ ಎಂದು ಅರ್ಜಿದಾರರು ಎರಡು ಸುಳ್ಳು ದಾಸ್ತಾನು ಪ್ರಮಾಣಪತ್ರ ನೀಡಿದ್ದರು ಎಂಬುದು ತನಿಖಾ ಸಂಸ್ಥೆಯ ಆರೋಪ. ಈ ವ್ಯವಹಾರಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸರು 2017ರಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಸಿಐಡಿ 2021ರ ಡಿಸೆಂಬರ್ 30ರಂದು ಆರೋಪಪಟ್ಟಿ ಸಲ್ಲಿಸಿತ್ತು. ಅದನ್ನು ಆಧರಿಸಿ ಇ.ಡಿ 2022ರ ಮಾರ್ಚ್ 28ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.
ಇ.ಡಿ ಪ್ರಕಾರ, ಪ್ರಕರಣದಲ್ಲಿ ಸುಮಾರು 2.20 ಕೋಟಿ ಅಪರಾಧದ ಆದಾಯ ಉಂಟಾಗಿದ್ದು, ಹಣದ ವರ್ಗಾವಣೆ ಮತ್ತು ನಗದು ವಾಪಸ್ ಪಡೆಯುವ ಮೂಲ ಆದಾಯ ಲಭ್ಯವಿರಲಿಲ್ಲ. ಆದ್ದರಿಂದ, ಅರ್ಜಿದಾರರಿಗೆ ಸಂಬಂಧಿಸಿದ 17 ಲಕ್ಷಕ್ಕೆ ಸಮ ಮೌಲ್ಯದ ಆಸ್ತಿಗಳಾಗಿ ಅವರು 2004ರಲ್ಲಿ ಖರೀದಿಸಿದ್ದ ಅಪಾರ್ಟ್ಮೆಂಟ್ ಹಾಗೂ 2008ರಲ್ಲಿ ಖರೀದಿಸಿದ್ದ ದೇರೆಬೈಲಿನ ಕೃಷಿಯೇತರ ಜಮೀನನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)