ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಫಲಾನುಭವಿಗಳ ಹಕ್ಕಲ್ಲ; ಹೈಕೋರ್ಟ್ಗೆ ರಾಜ್ಯ ಸರ್ಕಾರ
- by LegalSamachar
- November 5, 2026
- 16 Views
ಬೆಂಗಳೂರು: ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳು ಮಾಸಿಕ 2 ಸಾವಿರ ರೂ. ಆರ್ಥಿಕ ನೆರವನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ, ಯೋಜನೆಯ ಅನುಷ್ಠಾನವು ಆಡಳಿತಾತ್ಮಕ ಅನಿವಾರ್ಯತೆಗಳು ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಒಳಪಟ್ಟಿರುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ 1.26 ಕೋಟಿ ಮಹಿಳಾ ಫಲಾನುಭವಿಗಳಿಗೆ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ತಲಾ 2 ಸಾವಿರ ರೂ. ಸಹಾಯಧನದ ಒಟ್ಟು 5 ಸಾವಿರ ಕೋಟಿ ರೂ. ಹಿಂಬಾಕಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಆರ್. ಗಂಗಾ ಹಾಗೂ ಜಿ.ಡಿ. ಪವಿತ್ರಾ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರಾನಾಥ್ ಪೂಜಾರಿ ಅವರು ಅರ್ಜಿಗೆ ಆಕ್ಷೇಪಣಾ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಯೋಜನೆಯ ಅನುಷ್ಠಾನವು ಆಡಳಿತಾತ್ಮಕ ಅನಿವಾರ್ಯತೆಗಳು ಮತ್ತು ರಾಜ್ಯದ ಆರ್ಥಿಕ ಸಂಕಷ್ಟಗಳಿಗೆ ಒಳಪಟ್ಟಿರುತ್ತದೆ. ಮಹಿಳೆಯರನ್ನು ಸಬಲಗೊಳಿಸುವ ಉದ್ದೇಶದಿಂದ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಆರ್ಥಿಕ ನೆರವು ನೀಡಲು ‘ಗೃಹಲಕ್ಷ್ಮಿ’ ಯೋಜನೆಯನ್ನು ಪರಿಚಯಿಸಲಾಗಿದೆಯಾದರೂ, ಅದರ ಅನುಷ್ಠಾನವು ಆಡಳಿತಾತ್ಮಕ ಅಗತ್ಯಗಳನ್ನು ಅವಲಂಬಿಸಿದೆ. ಕಲ್ಯಾಣ ಯೋಜನೆಯ ಅಸ್ತಿತ್ವವಷ್ಟೇ ಫಲಾನುಭವಿಗಳಿಗೆ ನ್ಯಾಯಾಂಗ ಮಧ್ಯಪ್ರವೇಶದ ಮೂಲಕ ಆರ್ಥಿಕ ನೆರವು ಪಡೆಯುವ ನಿರಾಕರಿಸಲಾಗದ ಹಕ್ಕನ್ನು ನೀಡುವುದಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.
ರಾಜ್ಯವು ನೈಜ ಆರ್ಥಿಕ ಸಂಕಷ್ಟಗಳಿಂದಾಗಿ ನೆರವು ಬಿಡುಗಡೆ ಮಾಡಲು ಸಾಧ್ಯವಾಗದಿರುವ ಸಂದರ್ಭದಲ್ಲಿ, ‘ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತ’ ಆಧರಿಸಿ ಆರ್ಥಿಕ ನೆರವು ಪಡೆಯುವ ಹಕ್ಕನ್ನು ನೀಡುವುದಿಲ್ಲ. ಅದರ ಆಧಾರದಲ್ಲಿ ಹಣ ಬಿಡುಗಡೆಗೆ ಒತ್ತಾಯಿಸುವಂತಿಲ್ಲ. ಆದ್ದರಿಂದ, ಫಲಾನುಭವಿಗಳು ಇದನ್ನು ತಮ್ಮ ಹಕ್ಕು ಎಂದು ಪರಿಗಣಿಸಿ ನ್ಯಾಯಾಂಗ ಮಧ್ಯಪ್ರವೇಶದ ಮೂಲಕ ಯೋಜನೆ ಜಾರಿಗೊಳಿಸುವಂತೆ ಕೋರುವಂತಿಲ್ಲ ಎಂದು ಸರ್ಕಾರ ಆಕ್ಷೇಪಣೆಯಲ್ಲಿ ತಿಳಿಸಿದೆ.
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಸಹಾಯಧನವನ್ನು ಆರ್ಥಿಕ ಸಂಕಷ್ಟದ ಕಾರಣದಿಂದ ಬಿಡುಗಡೆ ಮಾಡಿಲ್ಲ ಎಂಬ ಸರ್ಕಾರದ ಒಪ್ಪಿಗೆಯ ಹಿನ್ನೆಲೆಯಲ್ಲಿ ಈ ಆಕ್ಷೇಪಣೆ ಸಲ್ಲಿಸಲಾಗಿದೆ. ಈ ಎರಡು ತಿಂಗಳ ಸಹಾಯಧನ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ, ಅಗತ್ಯ ಅನುದಾನ ಬಿಡುಗಡೆಯಾಗಿರಲಿಲ್ಲ. ಆದ್ದರಿಂದ, ಕಾನೂನಿನ ದೃಷ್ಟಿಯಿಂದ ಅಥವಾ ವಾಸ್ತವಾಂಶಗಳ ಆಧಾರದ ಮೇಲೆ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಆಕ್ಷೇಪಣೆಯಲ್ಲಿ ತಿಳಿಸಿರುವ ಸರ್ಕಾರ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸುವಂತೆ ಕೋರಿದೆ.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರದ ಆಕ್ಷೇಪಣೆಗೆ ಪ್ರತ್ಯುತ್ತರ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ 2 ವಾರ ಕಾಲಾವಕಾಶ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)