ಎಸ್‌ಐಆರ್ ವೇಳೆ ಫಾರ್ಮ್-7 ದುರ್ಬಳಕೆ ಆರೋಪ; ಮತ್ತೆ 10 ಮಂದಿ ಬಿಎಲ್‌ಎಗಳ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಅರ್ಜಿ ನಮೂನೆ 7 ಅನ್ನು (ಫಾರ್ಮ್-7) ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ 10 ಮಂದಿ ಬೂತ್‌ಮಟ್ಟದ ಏಜೆಂಟ್‌ಗಳ (ಬಿಎಲ್‌ಎ) ವಿರುದ್ಧದ ಪ್ರತ್ಯೇಕ ಮೂರು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ಮಂಗಳವಾರ (ನವೆಂಬರ್ 17) ಮಧ್ಯಂತರ ತಡೆ ನೀಡಿದೆ.

ಇದರೊಂದಿಗೆ, ಈ ಹಿಂದೆ ಬಿಎಲ್‌ಎಗಳಾದ ಬೆಂಗಳೂರಿನ ಪ್ಯಾಲೇಸ್‌ ಗುಟ್ಟಹಳ್ಳಿಯ ಜಿ.ಎಸ್. ವಸಂತಲಕ್ಷ್ಮಿ ಹಾಗೂ ಯಶವಂತಪುರದ ದೀಪಕ್ ಸಿಂಗ್ ಆರ್. ವಿರುದ್ಧದ ಎರಡು ಪ್ರತ್ಯೇಕ ಎಫ್‌ಐಆರ್‌ಗಳ ತನಿಖೆಗೆ ತಡೆ ನೀಡಿರುವುದೂ ಸೇರಿ ಒಟ್ಟು ಐದು ಪ್ರಕರಣಗಳ ಪೊಲೀಸ್ ತನಿಖೆಗೆ ತಡೆ ಬಿದ್ದಂತಾಗಿದೆ.

ಬೆಂಗಳೂರಿನ ಜಯನಗರ ಪೊಲೀಸ್ ಠಾಣೆ, ಕೊಡಗಿನ ಶನಿವಾರ ಸಂತೆ ಪೊಲೀಸ್ ಠಾಣೆ ಹಾಗೂ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌‌ಗಳನ್ನು ರದ್ದುಪಡಿಸುವಂತೆ ಕೋರಿ ಒಟ್ಟು 10 ಮಂದಿ ಬೂತ್‌ಮಟ್ಟದ ಏಜೆಂಟ್‌ಗಳು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿ, ಅರ್ಜಿಗಳ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ.

ಬಿಜೆಪಿಯ ಬಿಎಲ್‌ಎಗಳಾದ ಬೆಂಗಳೂರಿನ ಸಾರಕ್ಕಿಯ ರಾಮಕೃಷ್ಣ, ಜಯನಗರ 4ನೇ ಬ್ಲಾಕ್‌ನ ಯೋಗೇಶ್‌ ಡಿ.ಆರ್‌, ಕೊಡಗಿನ ಸೋಮವಾರ ಪೇಟೆ ತಾಲೂಕಿನ ಕೊಡಲಿಪೇಟೆಯ ಯು.ಎಚ್‌. ಲೋಕೇಶ್‌, ನಾಗರಾಜ್‌ ಎ.ಸಿ, ಸವಿತಾ ಎನ್‌. ಮಳಲಿ, ಬಸವರಾಜು ಬಿ.ಎನ್‌. ಹಾಗೂ ಕನ್ನರಹಳ್ಳಿಯ ರಜನಿ, ಮೈಸೂರಿನ ಎನ್‌.ಆರ್‌. ಮೊಹಲ್ಲಾದ ಹರೀಶ್‌ ಕುಮಾರ್‌ ಸಿ, ವೀರನಗೆರೆಯ ಎಂ. ರಾಘವೇಂದ್ರ ಹಾಗೂ ನಜರಾಬಾದ್‌ನ ಡಾ. ಅನಿಲ್ ಥಾಮಸ್ ವಿರುದ್ಧ ಕ್ರಮವಾಗಿ ಜಯನಗರ, ಶನಿವಾರಸಂತೆ ಮತ್ತು ನರಸಿಂಹರಾಜ ಠಾಣೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಮೂರು ಎಫ್‌ಐಆರ್‌ಗಳಿಗೆ ನ್ಯಾಯಾಲಯ ತಡೆ ನೀಡಿದೆ.

ಜತೆಗೆ, ತಡೆಯಾಜ್ಞೆ ತೆರವು ಮಾಡುವಂತೆ ಕೋರುವ ಸ್ವಾತಂತ್ರ್ಯವನ್ನು ದೂರುದಾರರಿಗೆ ಕಲ್ಪಿಸಿರುವ ನ್ಯಾಯಪೀಠ, ಚುನಾವಣಾ ಆಯೋಗದಿಂದ ಸಂಬಂಧಪಟ್ಟ ದಾಖಲೆಗಳನ್ನು ಪಡೆದ ನಂತರ ರಾಜ್ಯ ಸರ್ಕಾರವೂ ತಡೆ ಮಾರ್ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಆದೇಶಿಸಿದೆ.

ಇದೇ ವೇಳೆ, ಬೆಂಗಳೂರಿನ ಪ್ಯಾಲೇಸ್‌ ಗುಟ್ಟಹಳ್ಳಿಯ ಜಿ.ಎಸ್. ವಸಂತಲಕ್ಷ್ಮಿ ಹಾಗೂ ಯಶವಂತಪುರದ ದೀಪಕ್ ಸಿಂಗ್ ಆರ್. ವಿರುದ್ಧದ ಪ್ರಕರಣಗಳಲ್ಲಿ ಅಕ್ಟೋಬರ್ 9ರಂದು ನೀಡಿದ್ದ ಮಧ್ಯಂತರ ತಡೆ ತೆರವುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನೂ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಮುಂದೂಡಿದೆ.

ಫಾರ್ಮ್-7ಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಮತದಾರರ ನೋಂದಣಿ ನಿಯಮಗಳು-1960ರ ಅಡಿಯಲ್ಲಿ ಅರ್ಜಿಗಳ ಸತ್ಯಾಸತ್ಯತೆ ಕುರಿತು ನಡೆಯಬೇಕಿರುವ ಶಾಸನಬದ್ಧ ವಿಚಾರಣೆ ಮೊದಲು ಪೂರ್ಣಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

ಮತದಾರರ ನೋಂದಣಿ ನಿಯಮಗಳು-1960ರ ನಿಯಮ 15ರಿಂದ 23ರವರೆಗೆ ಇರುವ ನಿಬಂಧನೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಅಳಿಸುವಿಕೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳ ಪರಿಶೀಲನೆ, ವಿಚಾರಣೆ, ಸಂಬಂಧಪಟ್ಟ ವ್ಯಕ್ತಿಗಳಿಗೆ ವಿಚಾರಣೆ ಅವಕಾಶ ಹಾಗೂ ಚುನಾವಣಾಧಿಕಾರಿಗಳ ನಿರ್ಧಾರ ಸೇರಿದಂತೆ ಸಮಗ್ರ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಮೇಲಿನ ನಿಬಂಧನೆಗಳನ್ನು ಗಮನಿಸಿದರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಅಳಿಸುವಿಕೆಗೆ ಸಂಬಂಧಿಸಿದಂತೆ ಸಮಗ್ರ ಶಾಸನಬದ್ಧ ವ್ಯವಸ್ಥೆಯನ್ನು ರೂಪಿಸಿರುವುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಜತೆಗೆ, ಜನಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 31 ಅನ್ನು ಉಲ್ಲೇಖಿಸಿದ ನ್ಯಾಯಪೀಠ, ಮತದಾರರ ಪಟ್ಟಿಯ ಸಿದ್ಧತೆ, ಪರಿಷ್ಕರಣೆ ಅಥವಾ ತಿದ್ದುಪಡಿಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಸುಳ್ಳು ಲಿಖಿತ ಘೋಷಣೆ ನೀಡಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಫಾರ್ಮ್-7ರ ಅಡಿಯಲ್ಲಿ ಸಲ್ಲಿಸಲಾದ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಸುಳ್ಳು ಮಾಹಿತಿ ನೀಡಿದಲ್ಲಿ ದಂಡನಾತ್ಮಕ ಕ್ರಮ ಕೈಗೊಳ್ಳಲು 1960ರ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.

ಸಹಿಗಳು ನಕಲಿಯೇ ಎನ್ನುವುದು ಸಾಬೀತಾಗಬೇಕು:
ಸಹಿಗಳಲ್ಲಿ ವ್ಯತ್ಯಾಸವಿರುವ ಒಂದೇ ಕಾರಣಕ್ಕೆ ಈ ಹಂತದಲ್ಲಿ ನಕಲಿ ಸಹಿ ಎಂದು ನಿರ್ಧರಿಸಲಾಗದು ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಫಾರ್ಮ್-7ರಲ್ಲಿ ಹೆಸರಿಸಿರುವ ವ್ಯಕ್ತಿಯೇ ಸಹಿ ಮಾಡಿದ್ದಾರೆಯೇ ಎಂಬುದನ್ನು ಚುನಾವಣಾಧಿಕಾರಿ ಮೊದಲು ಪರಿಶೀಲಿಸಬೇಕು. ಸಹಿ ಮಾಡಿರುವುದನ್ನು ವ್ಯಕ್ತಿ ಒಪ್ಪಿಕೊಂಡರೂ ಸಹಿಗಳಲ್ಲಿ ವ್ಯತ್ಯಾಸವಿದ್ದರೆ ಅದಕ್ಕೆ ವಿವರಣೆ ಕೇಳಬಹುದು. ಆದರೆ, ತಾನು ಸಹಿ ಮಾಡಿಲ್ಲ ಎಂದು ವ್ಯಕ್ತಿ ನಿರಾಕರಿಸಿದರೆ ಹೆಚ್ಚಿನ ಪರಿಶೀಲನೆ ಅಗತ್ಯವಾಗಬಹುದು. ಅರ್ಜಿಗಳಿಗೆ ಹೆಸರಿಸಿರುವ ವ್ಯಕ್ತಿಗಳೇ ಸಹಿ ಮಾಡಿರುವುದು ದೃಢಪಟ್ಟಲ್ಲಿ, ಆಕ್ಷೇಪಣೆಗಳ ಅರ್ಹತೆಯನ್ನು ಪರಿಶೀಲಿಸಿ, ಹೆಸರು ಅಳಿಸಲು ಉದ್ದೇಶಿಸಿರುವ ಮತದಾರರಿಗೆ ವಿಚಾರಣೆಯ ಅವಕಾಶ ನೀಡಿ ಸೂಕ್ತ ಆದೇಶ ಹೊರಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಚುನಾವಣಾಧಿಕಾರಿಯ ನಿರ್ಧಾರವು ಎಫ್‌ಐಆರ್ ರದ್ದುಪಡಿಸಲು ಸೂಕ್ತ ಪ್ರಕರಣವಿದೆಯೇ ಅಥವಾ ಯಾವುದೇ ಅಥವಾ ಎಲ್ಲ ಅಪರಾಧಗಳ ಕುರಿತು ತನಿಖೆಗೆ ನಿರ್ದೇಶಿಸಬೇಕೇ ಎಂಬುದನ್ನು ನಿರ್ಧರಿಸಲು ಅಗತ್ಯವಾದ ಆಧಾರಗಳನ್ನು ಒದಗಿಸಬಹುದು. ಆದ್ದರಿಂದ, ಶಾಸನಬದ್ಧ ವಿಚಾರಣೆ ಪೂರ್ಣಗೊಳ್ಳುವ ಮೊದಲು ಪೊಲೀಸ್ ತನಿಖೆ ಮುಂದುವರಿಸುವ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ವಸಂತಲಕ್ಷ್ಮಿ ಮತ್ತು ದೀಪಕ್ ಸಿಂಗ್ ಪ್ರಕರಣಗಳಲ್ಲಿ ತನಿಖೆಗೆ ನೀಡಿದ್ದ ತಡೆಯನ್ನು ವಿಸ್ತರಿಸಿತಲ್ಲದೆ, ತಡೆ ತೆರವು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸುವುದನ್ನೂ ಮುಂದೂಡಿತು.

ಆರೋಪವೇನು?
ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ ದೊಡ್ಡ ಪ್ರಮಾಣದಲ್ಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ ಬೂತ್‌ ಏಜೆಂಟ್‌ಗಳು ದೂರು ನೀಡಿದ್ದಾರೆ. ಕೆಲವು ದೂರುಗಳಲ್ಲಿ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಎಂಟು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ 778 ಮತದಾರರನ್ನು ಗುರಿಯಾಗಿಸಿಕೊಂಡು ಫಾರಂ 7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್‌ ಮತಗಟ್ಟೆ ಏಜೆಂಟ್‌ ಆರೋಪಿಸಿದ್ದಾರೆ.

ಜಯನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರೇ ದೂರು ನೀಡಿದ್ದಾರೆ. ಇಲ್ಲಿ ಒಟ್ಟು 5,698 ಫಾರಂ-7 ಸಲ್ಲಿಸಲಾಗಿದ್ದು, ಇವುಗಳಲ್ಲಿ 4,327 ಅರ್ಜಿಗಳು ಗುರಪ್ಪನಪಾಳ್ಯ ವಾರ್ಡ್‌ಗೆ ಸಂಬಂಧಿಸಿದ್ದವು ಎಂದು ಸೌಮ್ಯಾ ರೆಡ್ಡಿ ಆರೋಪಿಸಿದ್ದಾರೆ. ಯಶವಂತಪುರದಲ್ಲಿ 136, ಕೊಡಗಿನಲ್ಲಿ 64 ಮತದಾರರಿಗೆ ಸಂಬಂಧಿಸಿದ ಅರ್ಜಿಗಳು ಸೇರಿದಂತೆ ಮೈಸೂರು ವ್ಯಾಪ್ತಿಯಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ.

ಅರ್ಜಿಗಳಲ್ಲಿ ಸುಳ್ಳು ಮಾಹಿತಿ, ನಕಲಿ ಸಹಿ ಹಾಗೂ ಬೇರೆಯವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವ ಆರೋಪಗಳಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಬೇಕೆಂದು ದೂರುದಾರರು ಕೋರಿದ್ದಾರೆ.

ಬಿಜೆಪಿಯ ಬೂತ್‌ ಏಜೆಂಟ್‌ಗಳಾದ ವಸಂತ ಲಕ್ಷ್ಮೀ ಮತ್ತು ದೀಪಕ್‌ ಸಿಂಗ್‌ ವಿರುದ್ಧದ ತನಿಖೆಗೆ ನೀಡಿದ್ದ ತಡೆ ತೆರವು ಕೋರಿರುವ ಅರ್ಜಿ ವಿಚಾರಣೆಯ ವೇಳೆ ವಾದ ಮಂಡಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಅತ್ಯಂತ ಮೌಲ್ಯಯುತವಾಗಿದ್ದು, ನಕಲಿ ಅಥವಾ ಸುಳ್ಳು ಫಾರ್ಮ್-7 ಸಲ್ಲಿಕೆಗೆ ಅವಕಾಶ ನೀಡಬಾರದು ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ಹಿರಿಯ ವಕೀಲರಾದ ಎಂ. ಅರುಣ ಶ್ಯಾಮ್‌ ಹಾಗೂ ವಿವೇಕ್‌ ಸುಬ್ಬಾರೆಡ್ಡಿ ವಾದ ಮಂಡಿಸಿ, ಅರ್ಜಿದಾರರು ರಾಜಕೀಯ ಪಕ್ಷದ ಬೂತ್ ಮಟ್ಟದ ಏಜೆಂಟರು. ತಮ್ಮ ಪಕ್ಷಗಳ ಪರವಾಗಿ ಫಾರ್ಮ್-7 ಆಕ್ಷೇಪಣೆಗಳನ್ನು ಸಲ್ಲಿಸಲು ಅರ್ಹರಾಗಿದ್ದು, ಅವುಗಳ ಸತ್ಯಾಸತ್ಯತೆಯನ್ನು ಚುನಾವಣಾಧಿಕಾರಿಗಳು ನಿಗದಿತ ಶಾಸನಬದ್ಧ ಪ್ರಕ್ರಿಯೆಯಂತೆ ಪರಿಶೀಲಿಸಬೇಕು ಎಂದು ಪ್ರತಿಪಾದಿಸಿದ್ದರು.

Related Articles

Comments (0)

Leave a Comment