ಕಳಪೆ ಮಾತ್ರೆ ತಯಾರಿಕೆ ಆರೋಪ; ಔಷಧ ತಯಾರಿಕಾ ಕಂಪನಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಕಳಪೆ ದರ್ಜೆಯ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಔಷಧ ತಯಾರಿಕಾ ಸಂಸ್ಥೆ ಮತ್ತು ಅದರ ಪಾಲುದಾರರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರಿನ ಸಹಾಯಕ ಔಷಧ ನಿಯಂತ್ರಕರು ದಾಖಲಿಸಿರುವ ಖಾಸಗಿ ದೂರಿನ ಭಾಗವಾದ ಪ್ರಕರಣ ರದ್ದು ಕೋರಿ ‘ಲೈಫ್ ವಿಷನ್ ಹೆಲ್ತ್‌ಕೇರ್’ ಮತ್ತದರ ವ್ಯವಸ್ಥಾಪಕ ಪಾಲುದಾರ ನವೀನ್ ಕುಮಾರ್ ಬನ್ಸಾಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ವಜಾಗೊಳಿಸಿದೆ.

ಪ್ರಕರಣದ ಆರೋಪಗಳು ಸಾಬೀತಾದಲ್ಲಿ ಅವು ಸಾರ್ವಜನಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಹಂತದಲ್ಲಿ ಅವುಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆರೋಪಗಳ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ನಡೆಯಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಅರ್ಜಿದಾರರ ವಾದ:
ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ-1940ರ ಸೆಕ್ಷನ್ 23(4)(i) ಪ್ರಕಾರ, ವಶಪಡಿಸಿಕೊಂಡ ಔಷಧದ ಮಾದರಿಯನ್ನು ತಕ್ಷಣವೇ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಬೇಕಿತ್ತು. ಆದರೆ, ಮಾದರಿಯನ್ನು ವಶಪಡಿಸಿಕೊಂಡ 2 ದಿನಗಳ ನಂತರ ಕಳುಹಿಸಿರುವುದು ಕಾನೂನುಬಾಹಿರ ಎಂದು ವಾದಿಸಿದ್ದ ಅರ್ಜಿದಾರರು, ಈ ವಿಳಂಬದಿಂದ ಕೇಂದ್ರ ಔಷಧ ಪ್ರಯೋಗಾಲಯದಲ್ಲಿ ಮರುಪರೀಕ್ಷೆ ಕೋರುವ ತಮ್ಮ ಶಾಸನಬದ್ಧ ಹಕ್ಕಿಗೆ ಧಕ್ಕೆಯಾಗಿದೆ ಎಂದು ಪ್ರತಿಪಾದಿಸಿದ್ದರು.

ಹೈಕೋರ್ಟ್ ಆದೇಶವೇನು?
ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ಔಷಧಿಯ ಮಾದರಿಯನ್ನು 2020ರ ಫೆಬ್ರವರಿ 18ರಂದು ವಶಪಡಿಸಿಕೊಳ್ಳಲಾಗಿದ್ದು, ಫೆಬ್ರವರಿ 20ರಂದು ವಿಶ್ಲೇಷಣೆಗೆ ಕಳುಹಿಸಲಾಗಿದೆ. ‘ತಕ್ಷಣವೇ’ ಎಂಬ ಪದದ ಅರ್ಥ ಕಾಯ್ದೆಯಡಿ ಅಗತ್ಯವಿರುವ ಇತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಮಾದರಿಯನ್ನು ಕೂಡಲೇ ಕಳುಹಿಸಬೇಕು ಎಂದಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಹಾಲಿ ಪ್ರಕರಣದ ವಾಸ್ತವಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ವಶಪಡಿಸಿಕೊಂಡ ಔಷಧದ ಮಾದರಿಯನ್ನು 2 ದಿನಗಳೊಳಗೆ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಿರುವುದನ್ನು ಅನಗತ್ಯ ಅಥವಾ ವಿವರಣೆಯಿಲ್ಲದ ವಿಳಂಬ ಎಂದು ಪರಿಗಣಿಸಲಾಗದು ಎಂದು ಹೇಳಿದೆ.

ಇನ್ನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಎಂಬ ಹುದ್ದೆಯಲ್ಲಿರುವ ಕಾರಣಕ್ಕೆ ಮಾತ್ರ ತಮ್ಮನ್ನು ವಿಚಾರಣೆಗೆ ಒಳಪಡಿಸಲಾಗದು ಎಂಬ ನವೀನ್ ಕುಮಾರ್ ಬನ್ಸಾಲ್ ಅವರ ವಾದವನ್ನೂ ತಿರಸ್ಕರಿಸಿರುವ ನ್ಯಾಯಪೀಠ, ದೂರು ಮತ್ತು ದಾಖಲೆಗಳು ಕಂಪನಿಯ ದೈನಂದಿನ ವ್ಯವಹಾರಗಳಲ್ಲಿ ಅವರ ಸಕ್ರಿಯ ಪಾತ್ರವಿದ್ದುದನ್ನು ಪ್ರಾಥಮಿಕವಾಗಿ ಸೂಚಿಸುತ್ತವೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?
ಕಂಪನಿ 2019ರ ಸೆಪ್ಟೆಂಬರ್‌ನಲ್ಲಿ ತಯಾರಿಸಿದ್ದ ‘ಇಂಪ್ಕಲ್ ಮಾತ್ರೆ’ಯ (ಕ್ಯಾಲ್ಸಿಯಂ ಒರೊಟೇಟ್ ವಿಥ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ) ಗುಣಮಟ್ಟಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಎಲ್‌ಟಿಎ-2497 ಬ್ಯಾಚ್ ಸಂಖ್ಯೆಯ ಈ ಮಾತ್ರೆಗಳ ರಾಸಾಯನಿಕ ವಿಶ್ಲೇಷಣೆ ನಡೆಸಿದಾಗ, ವಿಶೇಷವಾಗಿ ವಿಟಮಿನ್ ಡಿ3 ಅಂಶಕ್ಕೆ ಸಂಬಂಧಿಸಿದಂತೆ ಅವು ನಿಗದಿತ ಗುಣಮಟ್ಟ ಹೊಂದಿಲ್ಲ ಎಂದು ವರದಿಯಾಗಿತ್ತು.

2020ರ ಆಗಸ್ಟ್ 28ರಂದು ಅಧಿಕಾರಿಗಳು ಈ ಪರೀಕ್ಷಾ ವರದಿಯ ಕುರಿತು ಕಂಪನಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಮರುಪರೀಕ್ಷೆ ನಡೆಸುವಂತೆ ಕಂಪನಿ ಮನವಿ ಮಾಡಿತ್ತು. ಆದರೆ, 2021ರ ಏಪ್ರಿಲ್ 15ರಂದು ಮರುಪರೀಕ್ಷೆಗೆ ಕೋರಿಕೆ ಸಲ್ಲಿಸುವಷ್ಟರಲ್ಲಿ ಮಾತ್ರೆಗಳ ಅವಧಿ ಮುಗಿದಿತ್ತು. ಅವುಗಳ ಬಳಕೆಯ ಅವಧಿ 2021ರ ಫೆಬ್ರವರಿಯಲ್ಲೇ ಮುಕ್ತಾಯಗೊಂಡಿತ್ತು. ಈ ಸಂಬಂಧ ಅರ್ಜಿದಾರರ ವಿರುದ್ಧ ಪ್ರಕರಣ‌ ದಾಖಲಾಗಿದೆ.

Related Articles

Comments (0)

Leave a Comment