ಚಿನ್ನಾಭರಣ ಕಳವು ಪ್ರಕರಣಗಳ ತನಿಖೆಗೆ ಎಸ್ಒಪಿ ರೂಪಿಸಲು ಡಿಜಿಪಿಗೆ ಹೈಕೋರ್ಟ್ ನಿರ್ದೇಶನ; ಚಿನ್ನದ ವ್ಯಾಪಾರಿಗಳ ವಿರುದ್ಧದ ಪ್ರಕರಣ ರದ್ದು
- by Prashanth Basavapatna
- November 17, 2026
- 6 Views
ಬೆಂಗಳೂರು: ಕಳವು ಮಾಡಿದ ಚಿನ್ನದ ಒಡವೆಗಳನ್ನು ಖರೀದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಹ ಆರೋಪಿಗಳು ನೀಡಿದ ಹೇಳಿಕೆಗಳಿಗೆ ಪೂರಕವಾದ ಸ್ವತಂತ್ರ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ, ಇಬ್ಬರು ಚಿನ್ನದ ವ್ಯಾಪಾರಿಗಳ ವಿರುದ್ಧದ ಎರಡು ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದೇ ವೇಳೆ, ಮನೆಗಳಿಂದ ಚಿನ್ನಾಭರಣ ಕಳವು ಪ್ರಕರಣಗಳ ತನಿಖೆಯನ್ನು ಸಮರ್ಪಕವಾಗಿ ನಡೆಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ರೂಪಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನಿರ್ದೇಶನ ನೀಡಿದೆ.
ಕದ್ದ ಒಡವೆಗಳನ್ನು ಖರೀದಿಸಿದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಬೆಂಗಳೂರಿನ ಚಿನ್ನದ ವ್ಯಾಪಾರಿಗಳಾದ ವಿನೋದ್ ಕುಮಾರ್ ಹಾಗೂ ಅವರ ಪುತ್ರ ವರುಣ್ ಜೈನ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮನೆಗಳಿಂದ ಚಿನ್ನಾಭರಣ ಕಳವು ಮಾಡುವುದು ಗಂಭೀರ ಅಪರಾಧವಾಗಿದ್ದು, ಇದರ ತನಿಖೆಯನ್ನು ಅತ್ಯಂತ ಜಾಗರೂಕತೆ ಮತ್ತು ಸಮಗ್ರವಾಗಿ ನಡೆಸಬೇಕು. ತನಿಖಾಧಿಕಾರಿಯ ಜವಾಬ್ದಾರಿ ಕೇವಲ ಆರೋಪಿಗಳನ್ನು ಬಂಧಿಸಿ ಹೇಳಿಕೆ ದಾಖಲಿಸುವುದಕ್ಕೆ ಸೀಮಿತವಾಗಬಾರದು ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ತನಿಖಾ ವೈಖರಿಗೆ ಕೋರ್ಟ್ ಕಿಡಿ:
ಒಬ್ಬ ಆರೋಪಿಯು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಮಾಡುವ ಆರೋಪಗಳನ್ನು ತನಿಖಾಧಿಕಾರಿಗಳು ಸ್ವತಂತ್ರವಾಗಿ ಪರಿಶೀಲಿಸಬೇಕು. ಕಳವಾದ ವಸ್ತುಗಳ ಜಾಡು ಪತ್ತೆಹಚ್ಚಿ, ಅವು ಯಾರ ಕೈಗೆ ತಲುಪಿವೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬೇಕು ಹಾಗೂ ಇತರ ಆರೋಪಿಗಳ ಪಾತ್ರಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು. ಆದರೆ, ಪ್ರಸ್ತುತ ಪ್ರಕರಣಗಳಲ್ಲಿ ಅರ್ಜಿದಾರರ ವಿರುದ್ಧದ ತನಿಖೆಯು ಕೇವಲ ಮೊದಲ ಮತ್ತು ಎರಡನೇ ಆರೋಪಿಗಳ ಹೇಳಿಕೆಗಳ ಮೇಲೆಯೇ ಅವಲಂಬಿತವಾಗಿದೆ. ಕಳವು ಮಾಡಿದ ಚಿನ್ನವನ್ನು ಈ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪವನ್ನು ಸ್ವತಂತ್ರವಾಗಿ ದೃಢಪಡಿಸುವ ಯಾವುದೇ ಪ್ರಯತ್ನ ನಡೆದಿರುವುದು ಕಂಡುಬರುತ್ತಿಲ್ಲ ಎಂದು ತನಿಖಾ ವೈಖರಿಯ ಬಗ್ಗೆ ನ್ಯಾಯಾಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಈ ತನಿಖಾ ಲೋಪಗಳ ಹಿನ್ನೆಲೆಯಲ್ಲಿ, ಎರಡೂ ಪ್ರಕರಣಗಳ ತನಿಖೆ ಯಾವ ರೀತಿಯಲ್ಲಿ ನಡೆದಿದೆ ಹಾಗೂ ಅಧಿಕಾರಿಗಳು ನಿಯಮಗಳನ್ನು ಪಾಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ಡಿಜಿಪಿಗೆ ಸೂಚಿಸಿರುವ ನ್ಯಾಯಪೀಠ, ಅಗತ್ಯವಿದ್ದರೆ ಮನೆಗಳ್ಳತನ ಪ್ರಕರಣಗಳ ತನಿಖೆಗೆ ಸೂಕ್ತ ಎಸ್ಒಪಿ ರೂಪಿಸಿ, ಅದನ್ನು ನ್ಯಾಯಾಲಯದ ದಾಖಲೆಗೆ ಸಲ್ಲಿಸಲು ಸರ್ಕಾರಿ ವಕೀಲರು ಡಿಜಿಪಿಯೊಂದಿಗೆ ಸಮನ್ವಯ ಸಾಧಿಸಬೇಕೆಂದು ನಿರ್ದೇಶಿಸಿದೆ.
ಪ್ರಕರಣವೇನು?
ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಮನೆಗಳ್ಳತನ ಪ್ರಕರಣಗಳಲ್ಲಿ ವಿನೋದ್ ಕುಮಾರ್ ಮತ್ತು ವರುಣ್ ಜೈನ್ ಅವರನ್ನು ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.
2019ರ ಮೇ 22ರಂದು ಅನೂಪ್ ಆನಂದ ಎಂಬವರ ಮನೆಯಿಂದ ಒಟ್ಟು 25 ಚಿನ್ನ-ಬೆಳ್ಳಿ ವಸ್ತುಗಳು ಕಳವಾದ ಬಗ್ಗೆ ಮೊದಲ ದೂರು ದಾಖಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ, 2020ರ ನವೆಂಬರ್ 17ರಿಂದ 24ರ ನಡುವೆ ಸುರೇಶ್ ಬಾಬು ಎಂಬವರ ಮನೆಗೆ ಬೀಗ ಹಾಕಿದ್ದಾಗ 5 ಚಿನ್ನದ ವಸ್ತುಗಳು ಕಳವಾಗಿದ್ದವು. ಈ ಎರಡೂ ಪ್ರಕರಣಗಳ ತನಿಖೆ ನಡೆಸಿದ್ದ ಪೊಲೀಸರು, 2021ರ ಫೆಬ್ರವರಿ 12ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊದಲ ಮತ್ತು ಎರಡನೇ ಆರೋಪಿಗಳು ಕಳವು ಮಾಡಿದ ಚಿನ್ನಾಭರಣಗಳನ್ನು ಅರ್ಜಿದಾರ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡಿರುವುದಾಗಿ ನೀಡಿದ್ದ ಹೇಳಿಕೆಯನ್ನಷ್ಟೇ ಆಧರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)