ತನಿಖಾಧಿಕಾರಿಯಿಂದ ಕೇಸ್ ಡೈರಿ ತರಿಸಿಕೊಳ್ಳಲು ಆರೋಪಿಗೆ ಸ್ವತಂತ್ರ ಹಕ್ಕಿಲ್ಲ; ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಕ್ರಿಮಿನಲ್ ಪ್ರಕರಣದ ಆರೋಪಿಗೆ ತನಿಖಾಧಿಕಾರಿಯಿಂದ ಪೊಲೀಸ್‌ ಕೇಸ್‌ ಡೈರಿ ತರಿಸಿಕೊಳ್ಳಲು ಸ್ವತಂತ್ರ ಹಕ್ಕಿಲ್ಲ. ಬದಲಿಗೆ, ನ್ಯಾಯಾಲಯಕ್ಕೆ ತನ್ನ ಪರಿಶೀಲನೆಗೆ ಅಗತ್ಯವೆನಿಸಿದರೆ ಮಾತ್ರ ಅದನ್ನು ತರಿಸಿಕೊಳ್ಳಬಹುದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಕಂದಾಯ ನಿರೀಕ್ಷಕ ರೆಡ್ಡಿ ಶಿವಾನಂದ ಎಂಬುವರು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 91ರ ಅಡಿಯಲ್ಲಿ ಕೇಸ್‌ ಡೈರಿ ಸಲ್ಲಿಕೆಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಪರಿಷ್ಕರಣಾ ಅರ್ಜಿ ಆಲಿಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯನ್ಯಾಯಪೀಠ ಈ ಆದೇಶ ಮಾಡಿದೆ.

ನಾಗಲಮಡಿಕೆ ನಾಡಕಚೇರಿಯ ಉಪತಹಶೀಲ್ದಾರ್‌ ನ್ಯಾಯಾಲಯದಲ್ಲಿದ್ದ ಕಂದಾಯ ವಿವಾದಕ್ಕೆ ಸಂಬಂಧಿಸಿದ ದಾಖಲೆಗಳು, ತಿರುಮಣಿ ಗ್ರಾಮದ ಸರ್ವೆ ಸಂಖ್ಯೆ 103ರ 2020ರಿಂದ 23ನೇ ಸಾಲಿನ ಪಹಣಿಗಳು ಹಾಗೂ ಅದೇ ಜಮೀನಿನ ಎಂ.ಆರ್‌. ಸಂಖ್ಯೆ ಎಚ್‌ 15ರ ದಾಖಲೆಯನ್ನು ತರಿಸಿಕೊಳ್ಳಲು ಅರ್ಜಿದಾರರು ಕೋರಿದ್ದರು. ಇವೆಲ್ಲವೂ ಸಾರ್ವಜನಿಕ ದಾಖಲೆಗಳಾಗಿದ್ದು, ಅವುಗಳ ಪ್ರಮಾಣೀಕೃತ ಪ್ರತಿಗಳನ್ನು ಅರ್ಜಿದಾರರೇ ಪಡೆದುಕೊಳ್ಳಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.

ಜತೆಗೆ, ಆ ದಾಖಲೆಗಳನ್ನು ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವುದರಿಂದ ಪ್ರತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ದಾಖಲೆಗಳನ್ನು ವಶಪಡಿಸಿಕೊಂಡಿದ್ದರೆ ಆರೋಪ ಪಟ್ಟಿಯೊಂದಿಗೆ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಲೋಕಾಯುಕ್ತದ ಹೊಣೆಗಾರಿಕೆಯಾಗಿದೆ. ಸಲ್ಲಿಸದಿದ್ದರೆ ಅಭಿಯೋಜನೆಯ ವಿರುದ್ಧ ಪ್ರತಿಕೂಲ ನಿರ್ಣಯಕ್ಕೆ ಬರಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ತರಿಸುವ ಪ್ರತ್ಯೇಕ ನಿರ್ದೇಶನ ಅಗತ್ಯವಿಲ್ಲ ಎಂದು ಆದೇಶಿಸಿದೆ.

ಆರೋಪಿಯ ಕೋರಿಕೆಯ ಮೇರೆಗೆ ಕೇಸ್‌ ಡೈರಿ ಸಲ್ಲಿಸಲು ನಿರ್ದೇಶಿಸಲಾಗದು. ನ್ಯಾಯಾಲಯಕ್ಕೆ ಪರಿಶೀಲನೆಗಾಗಿ ಅಗತ್ಯವಿದ್ದರೆ ಡೈರಿ ತರಿಸಿಕೊಳ್ಳಬಹುದು. ಅದನ್ನು ತನಿಖಾಧಿಕಾರಿಯಿಂದ ತರಿಸಿಕೊಳ್ಳುವ ಸ್ವತಂತ್ರ ಹಕ್ಕು ಆರೋಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಸೆಕ್ಷನ್‌ 91ರ ಅಡಿಯಲ್ಲಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಊರ್ಜಿತವಲ್ಲವೆಂದು ಅಭಿಪ್ರಾಯಪಟ್ಟು, ಕ್ರಿಮಿನಲ್‌ ಪರಿಷ್ಕರಣಾ ಅರ್ಜಿಯನ್ನೂ ವಜಾಗೊಳಿಸಿತು.

ಪ್ರಕರಣವೇನು?
ತುಮಕೂರಿನ ಭ್ರಷ್ಟಾಚಾರ ನಿಗ್ರಹ ದಳದ ಠಾಣೆಯಲ್ಲಿ 2021ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಆರೋಪಿ ಶಿವಾನಂದ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 7(ಬಿ) ಅಡಿಯಲ್ಲಿ ಆರೋಪವಿತ್ತು. ಈ ಪ್ರಕರಣ ಈಗ ತುಮಕೂರು ಲೋಕಾಯುಕ್ತ ಪೊಲೀಸರಿಗೆ ಸಂಬಂಧಿಸಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಸಿಆರ್‌ಪಿಸಿ ಸೆಕ್ಷನ್‌ 227ರ ಅಡಿಯಲ್ಲಿ ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಹಾಗೂ ಸೆಕ್ಷನ್‌ 91ರ ಅಡಿಯಲ್ಲಿ ಕೇಸ್ ದಾಖಲೆಗಳನ್ನು ತರಿಸಿಕೊಳ್ಳಲು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ತುಮಕೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಹಾಗೂ ಭ್ರಷ್ಟಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ 2024ರ ಮಾರ್ಚ್ 1ರಂದು ತಿರಸ್ಕರಿಸಿತ್ತು. ಆ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment