ಪರ್ಯಾಯ ಇಂಧನ ಸಂಶೋಧನೆ ಜನರಿಗೆ ತಲುಪಲಿ: ಡಾ. ವಿ.ಕೆ. ಸರಸ್ವತ್

ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ‘ಐಸಿ ಎಂಜಿನ್, ಪ್ರೊಪಲ್ಷನ್ ಮತ್ತು ಕಂಬಶನ್ 2.0’ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ; ಕೇಂದ್ರ ಸಚಿವರಾದ ಕುಮಾರಸ್ವಾಮಿ, ರಾಮಮೋಹನ್ ನಾಯ್ಡು ವಿಡಿಯೋ ಸಂದೇಶ

ಬೆಂಗಳೂರು: ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನಗಳ ಕುರಿತ ಸಂಶೋಧನೆಗಳು ಪ್ರಯೋಗಾಲಯಗಳಿಗೆ ಸೀಮಿತವಾಗದೆ, ಪ್ರಾಯೋಗಿಕವಾಗಿ ಅನುಷ್ಠಾನಗೊಂಡು ಜನಸಾಮಾನ್ಯರು ಹಾಗೂ ಕೈಗಾರಿಕೆಗಳಿಗೆ ಪ್ರಯೋಜನವಾಗಬೇಕು ಎಂದು ನೀತಿ ಆಯೋಗದ ಮಾಜಿ ಸದಸ್ಯ ಡಾ. ವಿ.ಕೆ. ಸರಸ್ವತ್ ಹೇಳಿದರು.

ಅಲಯನ್ಸ್ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನಲ್ಲಿ ನವೆಂಬರ್ 27ರಿಂದ 29ರವರೆಗೆ ನಡೆಯಲಿರುವ ‘ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಆನ್ ಐಸಿ ಎಂಜಿನ್, ಪ್ರೊಪಲ್ಷನ್ ಅಂಡ್ ಕಂಬಶನ್ 2.0’ (ICICEPC 2.0) ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರು ವಿಡಿಯೋ ಸಂದೇಶಗಳ ಮೂಲಕ ಶುಭಾಶಯ ಕೋರಿದರು.

ಭಾರತವು ವೈಜ್ಞಾನಿಕ ಸಾಮರ್ಥ್ಯ ಮತ್ತು ಸಂಶೋಧನಾ ಶಕ್ತಿಯನ್ನು ಹೊಂದಿದೆ. ಮೆಥನಾಲ್ ಹಾಗೂ ಹೈಡ್ರೋಜನ್‌ನಂತಹ ಪರ್ಯಾಯ ಇಂಧನಗಳು ಭವಿಷ್ಯದ ಇಂಧನ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಕೃತಕ ಬುದ್ಧಿಮತ್ತೆಯ ಬೆಳವಣಿಗೆಯಿಂದ ಸಂಶೋಧನೆಯ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ ಎಂದು ಸರಸ್ವತ್ ತಿಳಿಸಿದರು.

ಐಐಎಸ್‌ಸಿ ಪ್ರಾಧ್ಯಾಪಕ ಎಚ್.ಎಸ್. ಮುಕುಂದ್ ಮಾತನಾಡಿ, ಇಂಧನ ಆಮದು ಅವಲಂಬನೆ ಕಡಿಮೆ ಮಾಡಲು ದೇಶೀಯ ಪರ್ಯಾಯ ಇಂಧನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು. ಮೆಥನಾಲ್ ಮತ್ತು ಹೈಡ್ರೋಜನ್‌ ಬಳಕೆಯನ್ನು ಸೌರಶಕ್ತಿಯೊಂದಿಗೆ ಸಮನ್ವಯಗೊಳಿಸುವುದರಿಂದ ಇಂಧನ ಭದ್ರತೆ ಬಲಪಡಿಸಬಹುದು ಎಂದು ಹೇಳಿದರು.

ವಿಶ್ವವಿದ್ಯಾಲಯಗಳು ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಕೇಂದ್ರಗಳಾಗಬೇಕು ಎಂದು ಅಲಯನ್ಸ್ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಅಭಯ್ ಜಿ. ಚೆಬ್ಬಿ ಅಭಿಪ್ರಾಯಪಟ್ಟರು. ಸಂಶೋಧನೆಗಳನ್ನು ಮಾರುಕಟ್ಟೆಗೆ ತಲುಪುವ ತಂತ್ರಜ್ಞಾನಗಳಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ದಿ ಕಂಬಶನ್ ಇನ್‌ಸ್ಟಿಟ್ಯೂಟ್ ಕಾರ್ಯದರ್ಶಿ ಪಿ.ಕೆ. ಪಾಂಡೆ ಹೇಳಿದರು.

ಸಮ್ಮೇಳನದ ಅಂಗವಾಗಿ ದೇಶೀಯವಾಗಿ ತಯಾರಿಸಲಾದ ಮೆಥನಾಲ್ ಇಂಧನ ಚಾಲಿತ ಅಶೋಕ್ ಲೇಲ್ಯಾಂಡ್ ಟ್ರಕ್ ಪ್ರದರ್ಶಿಸಲಾಯಿತು. ವಿವಿಧ ದೇಶಗಳ ತಜ್ಞರು ಎಂಜಿನ್ ತಂತ್ರಜ್ಞಾನ, ಪ್ರೊಪಲ್ಷನ್ ವ್ಯವಸ್ಥೆ, ದಹನ ವಿಜ್ಞಾನ ಮತ್ತು ಪರ್ಯಾಯ ಇಂಧನಗಳ ಕುರಿತು ಚರ್ಚಿಸಲಿದ್ದಾರೆ.

Related Articles

Comments (0)