ಯೋಗೀಶ ಗೌಡರ್ ಕೊಲೆ ಪ್ರಕರಣ; ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಜನಪ್ರತಿನಿಧಿಗಳ ಕೋರ್ಟ್

ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ದೋಷಿಗಳಾಗದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿ 17 ಮಂದಿಯ ಶಿಕ್ಷೆ ಪ್ರಮಾಣವನ್ನು ಶುಕ್ರವಾರ (ಏಪ್ರಿಲ್ 17) ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ‌ ನ್ಯಾಯಾಲಯ ತಿಳಿಸಿದೆ.

ಯೋಗೀಶ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯನ್ನು ದೋಷಿಗಳೆಂದು ತೀರ್ಮಾನಿಸಿ‌ ಬುಧವಾರ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಶಿಕ್ಷೆಯ ಪ್ರಮಾಣ ನಿಗದಿಪಡಿಸಲು ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರು.

ಗುರುವಾರ ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ‌. ರಾಜು ಅವರು, ಮೃತ ಯೋಗೀಶ ಗೌಡರ್ ಕಣ್ಣಿಗೆ ಖಾರದಪುಡಿ ಎರಚಿ, ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ವಿರಳಾತಿ ವಿರಳ ಪ್ರಕರಣವಾಗಿದ್ದು, ಸಿಬಿಐ ತನಿಖೆ ಆರಂಭಿಸಿದ ಬಳಿಕ ಪಿತೂರಿ ಬಯಲಾಗಿದೆ. ಪೊಲೀಸ್‌ ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ನ್ಯಾಯಾಂಗಕ್ಕೆ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸಬೇಕು. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋರುವುದಿಲ್ಲ. ಬದಲಿಗೆ ಕ್ಷಮಾದಾನವಿಲ್ಲದ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.

ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಎಂ.ಎಸ್‌. ಶ್ಯಾಮ್‌ ಸುಂದರ್‌ ವಾದ ಮಂಡಿಸಿ, ಮರಣದಂಡನೆಗೆ ಪರ್ಯಾಯವಾಗಿ ಯಾವುದೇ ಕ್ಷಮಾದಾನಕ್ಕೆ (Remission) ಅವಕಾಶವಿಲ್ಲದ ಆಜೀವ ಸೆರೆವಾಸದ ಶಿಕ್ಷೆ (ಸ್ವಾಭಾವಿಕವಾಗಿ ಮರಣ ಹೊಂದುವವರೆಗೆ) ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ಮಾತ್ರ ಇದೆ. ಈ ಅಧಿಕಾರ ಸೆಷನ್ಸ್ ನ್ಯಾಯಾಲಯಗಳಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು‌ ನೀಡಿದೆ. ಇದೇ ತೀರ್ಪಿನ ಆಧಾರದಲ್ಲಿ ಹೈಕೋರ್ಟ್ ಸಹ ಕೊಲೆ ಅಪರಾಧಿಯೊಬ್ಬನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವನಪರ್ಯಂತ ಜೈಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದೆ ಎಂದು ಕೋರ್ಟ್ ಗಮನಕ್ಕೆ ತಂದರು.

ಮುಂದುವರಿದು, ವಿನಯ ಕುಲಕರ್ಣಿ ಜನರ ವಿಶ್ವಾಸಗಳಿಸಿ ಗೆದ್ದಿದ್ದಾರೆ. ಮೂವರು ಮಕ್ಕಳಿದ್ದಾರೆ, 3,500ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ. ರಾಜಕೀಯ ಕಾರಣಕ್ಕಾಗಿ ಅವರನ್ನು ಕೃತ್ಯದಲ್ಲಿ ಸಿಲುಕಿಸಲಾಗಿದೆ. ಅವರಿಗೆ ಸಾಧ್ಯವಾದಷ್ಟೂ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.

ನ್ಯಾಯಾಲದಯ ಸೂಚನೆಯಂತೆ ಪೀಠದ ಮುಂದೆ ಹಾಜರಾದ ವಿನಯ ಕುಲಕರ್ಣಿ, 27 ವರ್ಷದಿಂದ ರಾಜಕೀಯದಲ್ಲಿದ್ದೇನೆ. ನನ್ನ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ಪ್ರತೀಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ. ಮೂವರು ಮಕ್ಕಳಿದ್ದು, ಅವರು ಮದುವೆಗೆ ಬಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸಂಸತ್‌ ಚುನಾವನೆಯಲ್ಲಿ ನಿಂತು ಸೋತಿದ್ದೇನೆ. ಒಮ್ಮೆ ಸಚಿವನಾಗಿದ್ದೇನೆ. ನನಗೆ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಪ್ರಕರಣದ ಎಲ್ಲ ಅಪರಾಧಿಗಳು ನ್ಯಾಯಾಲಯದ ಮುಂದೆ ತಮ್ಮ ಪರಿಸ್ಥಿತಿಗಳನ್ನು ವಿವರಿಸಿ, ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು. ಎಲ್ಲ ಅಪರಾಧಿಗಳ ಪರ ವಕೀಲರ ವಾದ ಹಾಗೂ ಅಪರಾಧಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಲಯ, ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತು.

Related Articles

Comments (0)

Leave a Comment