ಸಿದ್ದಗಂಗಾ ಮಠಕ್ಕೆ ಬೆಂಗಳೂರಿನಲ್ಲಿ 14.25 ಎಕರೆ ಜಮೀನು ಮಂಜೂರಾತಿ ಎತ್ತಿ ಹಿಡಿದ ಹೈಕೋರ್ಟ್
- by Prashanth Basavapatna
- June 12, 2026
- 3 Views
ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ದಾಸೋಹ ಪ್ರಸಾದ ವಿತರಣಾ ಕೇಂದ್ರಕ್ಕೆ ಬೆಂಗಳೂರು ಉತ್ತರ ತಾಲೂಕಿನ ಕದರನಹಳ್ಳಿ ಗ್ರಾಮದಲ್ಲಿ 14 ಎಕರೆ 25 ಗುಂಟೆ ಜಮೀನು ಮಂಜೂರು ಮಾಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಜಮೀನು ಮಂಜೂರಾತಿ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ಹಾಗೂ ರಾಜ್ಯ ಕಂದಾಯ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ (ಜೂನ್ 11) ಪುರಸ್ಕರಿಸಿದೆ.
ಮಂಜೂರಾತಿ ರದ್ದುಪಡಿಸಿ 2025ರ ಜುಲೈ 15ರಂದು ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ವಿಭಾಗೀಯ ನ್ಯಾಯಪೀಠ, ಪ್ರಕರಣದಲ್ಲಿ ಮಠದ ಪರವಾಗಿ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ 2018ರ ಏಪ್ರಿಲ್ 27ರಂದು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಪ್ರಕರಣದಲ್ಲಿ ಸರ್ಕಾರದ ಅಮೂಲ್ಯ ಆಸ್ತಿಯನ್ನು ನುಂಗಲು ಕೆಲ ಕಾಣದ ಕೈಗಳು ತೆರೆಮರೆಯಲ್ಲಿ ಕೆಲಸ ಮಾಡಿರುವುದು ಕಂಡು ಬರುತ್ತಿದೆ. ಮೇಲ್ಮನವಿಯಲ್ಲಿನ ಪ್ರತಿವಾದಿಗಳು (ಮೂಲ ರಿಟ್ ಅರ್ಜಿದಾರರು) ಸಾಗುವಳಿ ಚೀಟಿಯ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಮತ್ತು ನಕಲಿ ಹಂಚಿಕೆ ದಾಖಲೆ ಹೊಂದಿರುವುದು ವೇದ್ಯವಾಗಿದೆ. ನ್ಯಾಯಾಲಯವನ್ನು ವಂಚಿಸುವ ಇಂಥವರನ್ನು ಸುಲಭಕ್ಕೆ ಕೈಬಿಡಲು ಆಗುವುದಿಲ್ಲ. ಅದಾಗ್ಯೂ, ಪ್ರತಿವಾದಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಅವರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಯಾವುದೇ ದಂಡ ಅಥವಾ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣವೇನು?
ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ದಾಸೋಹ ಪ್ರಸಾದ ವಿತರಣಾ ಕೇಂದ್ರ ನಿರ್ಮಿಸುವ ಉದ್ದೇಶಕ್ಕಾಗಿ ಸೂಕ್ತ ಜಮೀನು ಮಂಜೂರು ಮಾಡುವಂತೆ 2007ರ ಏಪ್ರಿಲ್ ಮತ್ತು 2008ರ ಜೂನ್ನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಮನವಿ ಪರಿಗಣಿಸಿದ್ದ ರಾಜ್ಯ ಕಂದಾಯ ಇಲಾಖೆ 2010ರಲ್ಲಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಕದರನಹಳ್ಳಿಯ ಸರ್ವೇ ನಂಬರ್ 41ರಲ್ಲಿನ 14 ಎಕರೆ 25 ಗುಂಟೆ ಗೋಮಾಳ ಜಮೀನನ್ನು ಮಠಕ್ಕೆ ಮಂಜೂರು ಮಾಡಿ ಆದೇಶಿಸಿತ್ತು.
ಇದನ್ನು ಆಕ್ಷೇಪಿಸಿದ್ದ ಕದರನಹಳ್ಳಿಯ ಕೆ.ಎಸ್. ಮಂಜೇಶ್ ಸೇರಿ ಐವರು, ನಾವು ಆದಿ ಕರ್ನಾಟಕ ಪಂಗಡಕ್ಕೆ ಸೇರಿದವರು. ಮಠಕ್ಕೆ ಹಂಚಿಕೆ ಮಾಡಿರುವ ಜಮೀನಿಗೆ ಸಾಗುವಳಿ ಚೀಟಿ ಹೊಂದಿದ್ದೇವೆ. ಆದ್ದರಿಂದ, ಮಠಕ್ಕೆ ಜಮೀನು ಮಂಜೂರು ಮಾಡಿರುವ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ತಕರಾರು ಎತ್ತಿದ್ದರು.
ಈ ಪ್ರಕರಣವು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಇತ್ಯರ್ಥಗೊಂಡಿತ್ತು ಹಾಗೂ ನ್ಯಾಯಮಂಡಳಿ ಮಠದ ಪರವಾಗಿ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಮಂಜೇಶ್ ಮತ್ತಿತರರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ ಜಮೀನು ಮಂಜೂರಾತಿಗೆ ಸಂಬಂಧಿಸಿದ ಸರ್ಕಾರದ ಆದೇಶ ಹಾಗೂ ನ್ಯಾಯಮಂಡಳಿಯ ಆದೇಶಗಳನ್ನು ರದ್ದುಪಡಿಸಿತ್ತಲ್ಲದೆ, ವಿವಾದಿತ ಜಮೀನಿನ ಕಂದಾಯ ದಾಖಲೆಗಳಲ್ಲಿ ಮಂಜೇಶ್ ಸೇರಿ ಐವರು ಅರ್ಜಿದಾರರ ಹೆಸರುಗಳನ್ನು ತಕ್ಷಣವೇ ನಮೂದಿಸಬೇಕು. ಪ್ರತಿವಾದಿ ಮಠಕ್ಕೆ ಸೂಕ್ತವಾದ ಪರ್ಯಾಯ ಜಮೀನನ್ನು ಮಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.
Related Articles
Thank you for your comment. It is awaiting moderation.



Comments (0)