ಉದ್ದೇಶಿತ ಸುರಂಗ ಯೋಜನೆಯಿಂದ ಹೆಬ್ಬಾಳ ಕೆರೆ ನೀರಿನ ಹರಿವಿಗೆ ಅಡ್ಡಿಯಾಗಲಿದೆಯೇ?; ಸರ್ಕಾರದಿಂದ ವಿವರಣೆ ಕೇಳಿದ ಹೈಕೋರ್ಟ್

ಬೆಂಗಳೂರು: ನಗರದ ಹೆಬ್ಬಾಳದ ಬಳಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಕಿರು ಸುರಂಗ ನಿರ್ಮಾಣ ಯೋಜನೆಯಿಂದ ಹೆಬ್ಬಾಳ ಕೆರೆಯ ನೀರಿನ ಒಳ ಹಾಗೂ ಹೊರ ಹರಿವಿಗೆ ಅಡ್ಡಿಯಾಗಲಿದೆಯೇ? ಆ ಬಗ್ಗೆ ಅಧ್ಯಯನ ಮಾಡಲಾಗಿದೆಯೇ? ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಸುರಂಗ ಯೋಜನೆಯಿಂದ ಹೆಬ್ಬಾಳ ಕೆರೆಗೆ ಧಕ್ಕೆಯಾಗಲಿದೆ ಎಂದು ಆಕ್ಷೇಪಿಸಿ ಬಸವನಗುಡಿಯ ಆರ್‌.ಕೆ. ಗುರುಪ್ರಸಾದ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಬಿಡಿಎ, ಬಿಎಂಎಲ್‌ಟಿಎ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರ ಮತ್ತು ಯೋಜನೆ ಜಾರಿಗೊಳಿಸುತ್ತಿರುವ ರಿತ್ವಿಕ್‌ ಪ್ರಾಜೆಕ್ಟ್ ಪ್ರೈವೆಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿತು.

ಜತೆಗೆ, ಉದ್ದೇಶಿತ ಯೋಜನೆಯಿಂದ ಹೆಬ್ಬಾಳ ಕೆರೆಯ ನೀರಿನ ಹರಿವಿಗೆ ಅಡ್ಡಿಯಾಗಲಿದೆ ಎಂದು ಅರ್ಜಿದಾರರು ಆರೋಪಿಸಿರುವಂತೆ ನೀರಿನ ಹರಿವಿಗೆ ಏನಾದರೂ ಅಡ್ಡಿಯಾಗಲಿದೆಯೇ, ಇಲ್ಲವೇ? ಒಂದು ವೇಳೆ ಆ ಕುರಿತು ಅಧ್ಯಯನವೇನಾದರೂ ನಡೆಸಲಾಗಿದೆಯೇ, ನಡೆಸಿದ್ದರೆ ಆ ಕುರಿತು ಸಮಗ್ರ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿತು.

ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೆರೆಯ ಒಳ ಹಾಗೂ ಹೊರ ಹರಿವಿಗೆ ಅಡಚಣೆಯಾಗಲಿದೆ. ಯೋಜನೆಗಾಗಿ 889 ಮರಗಳು ಕತ್ತರಿಸಬೇಕಾಗುತ್ತದೆ. ಇದು ಪರಿಸರ ಹಾಗೂ ಕೆರೆಯಲ್ಲಿನ ಜೀವ ವೈವಿಧ್ಯಮದ ಮೇಲೆ ದುಷ್ಪರಿಣಾಮ ಬೀರಲಿದೆ. ಜತೆಗೆ, ಸುರಂಗ ನಿರ್ಮಾಣ ಯೋಜನೆ ಆರಂಭಕ್ಕೂ ಮುನ್ನ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗಿಲ್ಲ. ಉದ್ದೇಶಿತ ಯೋಜನೆಯಿಂದ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯುವುದಿಲ್ಲ. ಆದ್ದರಿಂದ, ಇಡೀ ಯೋಜನೆ ರದ್ದುಗೊಳಿಸಲು ಆದೇಶಿಸಬೇಕು ಎಂದು ಕೋರಿದರು.

Related Articles

Comments (0)

Leave a Comment