ಶವ ಪರೀಕ್ಷೆ ವರದಿಯಲ್ಲಿ ಮದ್ಯದ ವಾಸನೆ ಇತ್ತೆಂದು ಉಲ್ಲೇಖಿಸಿದ ಮಾತ್ರಕ್ಕೆ ಮೃತ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಎನ್ನಲಾಗದು – ಹೈಕೋರ್ಟ್
- by LegalSamachar
- September 17, 2026
- 8 Views
ಬೆಂಗಳೂರು: ಮೃತ ಕಾರ್ಮಿಕನ ಶವಪರೀಕ್ಷೆ ವರದಿಯಲ್ಲಿ ಹೊಟ್ಟೆಯೊಳಗಿನ ಅಂಶಗಳಿಂದ ಮದ್ಯದ ವಾಸನೆ ಬಂದಿತ್ತು ಎಂಬ ಕಾರಣಕ್ಕೆ ಅಪಘಾತ ಸಂಭವಿಸಿದ ವೇಳೆ ಆತ ಮದ್ಯದ ಅಮಲಿನಲ್ಲಿದ್ದನೆಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಲಾರಿ ಚಾಲಕನ ಕಾನೂನುಬದ್ಧ ವಾರಸುದಾರರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ (ಎಂಎಸಿಟಿ) ಆದೇಶವನ್ನು ರದ್ದುಪಡಿಸಿದೆ.
ಎಂಎಸಿಟಿ ಆದೇಶ ಪ್ರಶ್ನಿಸಿ ಮೃತ ಲಾರಿ ಚಾಲಕ ಅಜ್ಮೀರ್ ಅಲಿಯಾಸ್ ಅಜಂ ನ ಪತ್ನಿ ಹಾಗೂ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮದ್ಯ ಸೇವಿಸಿರುವುದು ಹಾಗೂ ಮದ್ಯದ ಅಮಲಿನಲ್ಲಿರುವುದು ಸಂಪೂರ್ಣ ಭಿನ್ನವಾದ ವಿಚಾರಗಳು ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಲು ನ್ಯಾಯಮಂಡಳಿಗೆ ಹಿಂದಿರುಗಿಸಿದ್ದು, ವಾದಿ-ಪ್ರತಿವಾದಿ ಇಬ್ಬರಿಗೂ 2026ರ ಅಕ್ಟೋಬರ್ 27ರಂದು ನ್ಯಾಯಮಂಡಳಿ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಅಪಘಾತದ ವೇಳೆ ಚಾಲಕ ಮದ್ಯದ ಅಮಲಿನಲ್ಲಿದ್ದನೆಂಬ ನಿರ್ಧಾರವನ್ನು ನ್ಯಾಯಮಂಡಳಿ ಕೇವಲ ಶವಪರೀಕ್ಷೆ ವರದಿಯ ಆಧಾರದ ಮೇಲೆ ಕೈಗೊಂಡಿದೆ. ಆದರೆ, ಅಪಘಾತಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯಕ್ಷ ಸಾಕ್ಷಿಯನ್ನೂ ವಿಚಾರಣೆಗೊಳಪಡಿಸಿಲ್ಲ. ಅರ್ಧ ಜೀರ್ಣಗೊಂಡ ಆಹಾರವು ಹುದುಗುವಿಕೆಯ ಪರಿಣಾಮವಾಗಿ ಮದ್ಯದ ವಾಸನೆ ನೀಡುವುದು ಅಸಾಮಾನ್ಯವಲ್ಲ. ಈ ಸಾಧ್ಯತೆಯನ್ನು ಸಾಕ್ಷ್ಯದಲ್ಲಿ ತಳ್ಳಿಹಾಕಿಲ್ಲ. ಕೇವಲ ಮದ್ಯದ ವಾಸನೆ ಆಧರಿಸಿ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿದ್ದನೆಂದು ಊಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?
ಅಜ್ಮೀರ್ ಅಲಿಯಾಸ್ ಅಜಂ ಎಂಬಾತ ಬೆಂಗಳೂರಿನ ಸಂಜಯಗಾಂಧಿ ಎಂಬುವರ ಬಳಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. 2007ರಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಲಾರಿಯಲ್ಲಿ ತೆರಳುವಾಗ ಕೆಂಚನಹಳ್ಳಿ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಅಜಂ ಮೃತಪಟ್ಟಿದ್ದ.
ಬೆಂಗಳೂರಿನ ಎಂಎಸಿಟಿ ಮುಂದೆ ಮೃತನ ಪತ್ನಿ ಹಾಗೂ ಮಕ್ಕಳು 2014ರಲ್ಲಿ ಉದ್ಯೋಗಿಗಳ ಪರಿಹಾರ ಕಾಯ್ದೆಯ ಸೆಕ್ಷನ್ 22ರ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ, ಶವಪರೀಕ್ಷೆ ವರದಿಯಲ್ಲಿ ಕರುಳಿನಲ್ಲಿದ್ದ ಅಂಶಗಳಿಂದ ಮದ್ಯದ ವಾಸನೆ ಬರುತ್ತಿತ್ತು ಎಂಬುದನ್ನು ಆಧರಿಸಿ, ಅಪಘಾತದ ವೇಳೆ ಚಾಲಕ ಮದ್ಯದ ಅಮಲಿನಲ್ಲಿದ್ದನೆಂದು ನಿರ್ಧರಿಸಿದ್ದ ನ್ಯಾಯಮಂಡಳಿ, ಉದ್ಯೋಗಿಗಳ ಪರಿಹಾರ ಕಾಯ್ದೆಯ ಸೆಕ್ಷನ್ 3(1)(ಬಿ)(ಐ) ಅನ್ವಯ, ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗದಾತರು ಪರಿಹಾರ ನೀಡುವ ಹೊಣೆಗಾರಿಕೆಯಿಂದ ಮುಕ್ತರಾಗುತ್ತಾರೆ ಎಂದು ಅಭಿಪ್ರಾಯಪಟ್ಟು ಪರಿಹಾರ ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಮೇಲ್ಮನವಿದಾರರ ಪರ ವಕೀಲರು, ಕೇವಲ ಮದ್ಯದ ವಾಸನೆ ಇತ್ತು ಎಂಬ ಕಾರಣಕ್ಕೆ ವಾಹನ ಚಲಾಯಿಸುವಾಗ ಚಾಲಕ ಮದ್ಯದ ಅಮಲಿನಲ್ಲಿದ್ದನೆಂದು ಅಥವಾ ಅಪಘಾತವು ಆತನ ನಿರ್ಲಕ್ಷ್ಯದಿಂದ ಸಂಭವಿಸಿತು ಎಂದು ನಿರ್ಧರಿಸಲಾಗದು. ವೈದ್ಯರು ಶವಪರೀಕ್ಷೆ ವರದಿಯಲ್ಲಿ ಕರುಳಿನಲ್ಲಿದ್ದ ಅಂಶಗಳಿಂದ ಮದ್ಯದ ವಾಸನೆ ಬರುತ್ತಿತ್ತು ಎಂದು ಮಾತ್ರ ಉಲ್ಲೇಖಿಸಿದ್ದು, ಚಾಲಕ ಅಪಘಾತದ ಸಮಯದಲ್ಲಿ ಮದ್ಯದ ಪ್ರಭಾವದಲ್ಲಿದ್ದನೆಂಬುದನ್ನು ಸಾಬೀತುಪಡಿಸುವ ಯಾವುದೇ ಪೂರಕ ದಾಖಲೆ ಅಥವಾ ಸಾಕ್ಷ್ಯ ಒದಗಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ವಿಮಾ ಸಂಸ್ಥೆಯ ಪರ ವಕೀಲರು, ಶವ ಪರೀಕ್ಷೆ ವರದಿಯಲ್ಲಿ ಮದ್ಯದ ಅಂಶ ಕಂಡುಬಂದಿರುವುದರಿಂದ ನ್ಯಾಯಮಂಡಳಿಯ ತೀರ್ಪು ಸರಿಯಾಗಿದೆ ಎಂದು ಪ್ರತಿಪಾದಿಸಿದ್ದರು.
Related Articles
Thank you for your comment. It is awaiting moderation.


Comments (0)