ಬಿಸಿಯೂಟದ ಸಾಂಬಾರ್ ಪಾತ್ರೆಗೆ ಬಿದ್ದು ವಿದ್ಯಾರ್ಥಿನಿಗೆ ಗಾಯ; ಮುಖ್ಯ ಶಿಕ್ಷಕಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by LegalSamachar
- September 17, 2026
- 7 Views
ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಸಾಂಬಾರ್ ತಯಾರಿಸುವ ಪಾತ್ರೆಯಲ್ಲಿ ಬಿದ್ದು ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಶಿರಾ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ಕೋರ್ಟ್ ವಿಚಾರಣೆ ರದ್ದು ಕೋರಿ ಮುಖ್ಯ ಶಿಕ್ಷಕಿ ಶೋಭಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಜಾಗೊಳಿಸಿ ಆದೇಶಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ 2023ರ ಜುಲೈ 6ರಂದು ರಂಗಯ್ಯ ಎಂಬುವರು ದೂರು ನೀಡಿ, ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023ರ ಜೂನ್ 15ರಂದು ಮಕ್ಕಳನ್ನು ಬಿಸಿಯೂಟ ತಯಾರಿಸಲು ಬಿಡಲಾಗಿದೆ. ಈ ವೇಳೆ ಬಿಸಿಯೂಟದ ಸಾಂಬಾರ್ ಪಾತ್ರೆ ತೆರೆಯಲಾಗಿತ್ತು. 2ನೇ ತರಗತಿ ವಿದ್ಯಾರ್ಥಿನಿಯಾದ ನನ್ನ ಮಗಳು ರಿತ್ವಿಕಾ ಬಿಸಿಯೂಟ ತೆಗೆದುಕೊಳ್ಳಲು ಹೋದಾಗ ಸಾಂಬಾರಿನ ಪಾತ್ರೆಗೆ ಬಿದ್ದಿದ್ದಾಳೆ. ಇದರಿಂದ, ಆಕೆಯ ತೊಡೆಯ ಭಾಗದಿಂದ ಅರ್ಧ ಬೆನ್ನಿನವರೆಗೆ ಎರಡೂ ಕಡೆ ಸುಟ್ಟ ಗಾಯಗಳಾಗಿದೆ. ಈ ಅವಘಡಕ್ಕೆ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಜಯಮ್ಮ, ನಾಗಮಣಿ, ಮಂಜಮ್ಮ ಮತ್ತು ಮುಖ್ಯ ಶಿಕ್ಷಕಿ ಶೋಭಾ ತೋರಿರುವ ಬೇಜವಾಬ್ದಾರಿಯೇ ಕಾರಣ. ಆದ್ದರಿಂದ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.
ಈ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 285 (ಬೆಂಕಿ ಅಥವಾ ದಹಿಸುವ ವಸ್ತುವಿಗೆ ಸಂಬಂಧಿಸಿದಂತೆ ತೋರುವ ನಿರ್ಲಕ್ಷ್ಯದ ನಡವಳಿಕೆ) ಹಾಗೂ ಸೆಕ್ಷನ್ 337 (ನಿರ್ಲಕ್ಷ್ಯ ವಹಿಸಿ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡಿ ಗಾಯಗೊಳಿಸಿದ) ಅಪರಾಧದಡಿ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಶಿರಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣಾ ಹಂತದಲ್ಲಿದ್ದು, ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ್ದ ಮುಖ್ಯ ಶಿಕ್ಷಕಿಯ ಪರ ವಕೀಲರು, ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 285 ಮತ್ತು 337 ಅಡಿಯ ನಿರ್ಲಕ್ಷ್ಯತನ ತೋರಿ ಅಪಾಯ ಉಂಟು ಮಾಡಿದ ಅಪರಾಧವು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ. ಆದ್ದರಿಂದ, ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು.
ಈ ವಾದ ಆಕ್ಷೇಪಿಸಿದ್ದ ದೂರುದಾರರ (ಗಾಯಗೊಂಡ ವಿದ್ಯಾರ್ಥಿನಿಯ ತಂದೆ) ಪರ ವಕೀಲರು, ಅರ್ಜಿದಾರರಿಗೆ ನಿರ್ಲಕ್ಷ್ಯದ ಅಪರಾಧ ಅನ್ವಯಿಸಲಿದೆ. ಶಾಲೆಯಲ್ಲಿ ಅಡುಗೆ ತಯಾರಕರನ್ನು ನೇಮಿಸುವ ಮತ್ತು ಅವರ ಮೇಲ್ವಿಚಾರಣೆ ನೋಡಿಕೊಳ್ಳುವ ಹೊಣೆ ಮುಖ್ಯ ಶಿಕ್ಷಕರದ್ದಾಗಿದೆ. ಬಿಸಿಯೂಟ ತಯಾರಿಕೆ ಮತ್ತು ಮಕ್ಕಳಿಗೆ ಊಟ ಬಡಿಸುವುದಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದನ್ನು ಪಾಲಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ಆದ್ದರಿಂದ, ಎಫ್‌ಐಆರ್ ರದ್ದುಪಡಿಸಬಾರದು ಎಂದು ಕೋರಿದ್ದರು.
Related Articles
Thank you for your comment. It is awaiting moderation.


Comments (0)