ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಎರಡು ಚರಣ ಗಾಯನ ಕಡ್ಡಾಯ; ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್
- by Jagan Ramesh
- September 15, 2026
- 12 Views
ಬೆಂಗಳೂರು: ರಾಷ್ಟ್ರಪತಿ, ಉಪ-ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರದ ಇತರ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
‘ವಂದೇ ಮಾತರಂ’ನ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಕಡ್ಡಾಯಗೊಳಿಸಿ ಸೆಪ್ಟೆಂಬರ್ 8ರಂದು ರಾಜ್ಯ ಸರ್ಕಾರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಪಿಐಎಲ್ ಸಲ್ಲಿಸಿದ್ದು, ಅರ್ಜಿಯಲ್ಲಿ ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಗೃಹ ಸಚಿವಾಲಯವನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿದಾರರ ಆಕ್ಷೇಪವೇನು?
ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮ ಹೊರತುಪಡಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಕಡ್ಡಾಯಗೊಳಿಸಿ ಸೆಪ್ಟೆಂಬರ್ 8ರಂದು ಸರ್ಕಾರ ಆದೇಶಿಸಿದೆ. ಸರ್ಕಾರದ ಈ ಆದೇಶವು 2026 ಆಗಸ್ಟ್ 6ರಂದು ರಾಷ್ಟ್ರಪತಿಗಳ ಅಂಕಿತ ಪಡೆದ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಕಾಯ್ದೆ-2026ಕ್ಕೆ ವಿರುದ್ಧವಾಗಿದೆ. ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಕಾಯ್ದೆ ರೂಪಿಸಿ ವಂದೇ ಮಾತರಂ ಗೀತೆಯನ್ನು ಅದಕ್ಕೆ ಸೇರಿಸಲಾಗಿದ್ದು, ಅದಕ್ಕೂ ರಾಷ್ಟ್ರಗೀತೆಯ ಸ್ಥಾನಮಾನ ಕಲ್ಪಿಸಲಾಗಿದೆ. ‘ವಂದೇ ಮಾತರಂ’ ಸಂಪೂರ್ಣ ಗೀತೆಯನ್ನು ರಕ್ಷಿಸುವ ಸಂಸತ್ನ ಈ ಉದ್ದೇಶವನ್ನು ರಾಜ್ಯ ಸರ್ಕಾರದ ಆದೇಶ ಕ್ಷುಲ್ಲಕಗೊಳಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಯಾವುದೇ ಕಾನೂನು ಸಲಹೆ ಅಥವಾ ಆಡಳಿತಾತ್ಮಕ ಇಲಾಖೆಯ ಸಂಪುಟದ ಪ್ರಸ್ತಾವ ಇಲ್ಲದೇ ಅನೌಪಚಾರಿಕ ಚರ್ಚೆಯ ಬಳಿಕ ಈ ಆದೇಶ ಮಾಡಲಾಗಿದೆ. ಸಂವಿಧಾನದ ಪರಿಚ್ಛೇದ 19(1)(ಎ) ಅಡಿಯಲ್ಲಿ ಕಲ್ಪಿಸಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವಂಥ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ರಾಷ್ಟ್ರೀಯ ಲಾಂಛನಗಳಾದ ರಾಷ್ಟ್ರಗೀತೆಯನ್ನು ಸಂಸತ್ ಮಾತ್ರ ಕಾಯ್ದೆಯ ಮೂಲಕ ರೂಪಿಸಬಹುದಾಗಿದೆ. ಸಂವಿಧಾನದ ಪರಿಚ್ಛೇದ 256ರ ಪ್ರಕಾರ ಸಂಸತ್ ರೂಪಿಸಿದ ಕಾಯ್ದೆಗಳನ್ನು ರಾಜ್ಯಗಳು ಪಾಲಿಸಬೇಕು. ಆದರೆ, ಸರ್ಕಾರದ ಆದೇಶವು ಅದಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
Related Articles
Thank you for your comment. It is awaiting moderation.


Comments (0)