ಮಾಲೀಕರೇ ನಿರ್ವಹಿಸುವ ಡೀಸೆಲ್ ಜನರೇಟರ್ಗೆ ಪಾಲಿಕೆಯಿಂದ ವಾರ್ಷಿಕ ಟ್ರೇಡ್ ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ – ಹೈಕೋರ್ಟ್
- by LegalSamachar
- September 16, 2026
- 8 Views
ಬೆಂಗಳೂರು: ಶಾಪಿಂಗ್ ಮಾಲ್ ಮಾಲೀಕರೇ ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಡೀಸೆಲ್ ಜನರೇಟರ್ ಸೆಟ್ಗೆ ಬಿಬಿಎಂಪಿ (ಹಾಲಿ ಜಿಬಿಎ) ವತಿಯಿಂದ ವಾರ್ಷಿಕ ಟ್ರೇಡ್ ಲೈಸೆನ್ಸ್ ಪಡೆಯುವ ಅಥವಾ ನವೀಕರಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಿರ್ವಹಿಸುತ್ತಿರುವ ಐಲ್ಯಾಂಡ್ ಸ್ಟಾರ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ನ್ಯಾಯಪೀಠ, ಜನರೇಟರ್ ಸೆಟ್ಗೆ ಅಗತ್ಯವಾದ ತಪಾಸಣೆ ಹಾಗೂ ಪ್ರಮಾಣೀಕರಣವನ್ನು ವಿದ್ಯುತ್ ನಿರೀಕ್ಷಕರು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ನಡೆಸುತ್ತಿರುವಾಗ, ಪಾಲಿಕೆಯು ವಾರ್ಷಿಕ ಟ್ರೇಡ್ ಲೈಸೆನ್ಸ್ ಪಡೆಯುವಂತೆ ಒತ್ತಾಯಿಸಿ ಭಾರಿ ನವೀಕರಣ ಶುಲ್ಕ ವಿಧಿಸುವುದು ಸಮರ್ಥನೀಯವಲ್ಲ ಎಂದು ಹೇಳಿದೆ.
ಏಕಸದಸ್ಯ ನ್ಯಾಯಪೀಠದ ಅಭಿಪ್ರಾಯ ಒಪ್ಪದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಪಿಂಗ್ ಮಾಲ್ ನಡೆಸುತ್ತಿರುವ ಕಾರಣಕ್ಕೆ ಮಾತ್ರ ಅದರ ಮಾಲೀಕರು ಟ್ರೇಡ್ ಲೈಸೆನ್ಸ್ ಪಡೆಯಬೇಕಾಗಿಲ್ಲ. ಆದರೆ, ಮಾಲ್ನೊಳಗೆ ಕಾರ್ಯನಿರ್ವಹಿಸುವ ಪ್ರತ್ಯೇಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ತಮ್ಮದೇ ಟ್ರೇಡ್ ಲೈಸೆನ್ಸ್ ಪಡೆಯಬೇಕು ಎಂದು ಸ್ಪಷ್ಟಪಡಿಸಿದೆ. ಜತೆಗೆ, ಮಾಲ್, ವಾಣಿಜ್ಯ ಸಂಕೀರ್ಣ ಅಥವಾ ವ್ಯವಹಾರ ಸಂಸ್ಥೆಗಳ ಮಾಲೀಕರು ಬಿಬಿಎಂಪಿ ಕಾಯ್ದೆಯ ಸಂಬಂಧಿತ ನಿಯಮಗಳ ಪ್ರಕಾರ ವಾರ್ಷಿಕ ಆಸ್ತಿ ತೆರಿಗೆ ಪಾವತಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಜನರೇಟರ್ ಸೆಟ್ನ ಕಾರ್ಯಕ್ಷಮತೆ ಅಥವಾ ಸುರಕ್ಷತೆಯನ್ನು ಬಿಬಿಎಂಪಿ ತಪಾಸಣೆ ಮಾಡುತ್ತಿಲ್ಲ. ನಿಗದಿತ ಶುಲ್ಕ ಸಂಗ್ರಹಿಸಿ ಪರವಾನಗಿ ನೀಡುವ ಕಾಗದಪತ್ರದ ಕೆಲಸವನ್ನು ಹೊರತುಪಡಿಸಿ ಬಿಬಿಎಂಪಿ ಯಾವುದೇ ಸೇವೆ ಒದಗಿಸುತ್ತಿಲ್ಲ. ಅಗತ್ಯವಾದ ಎಲ್ಲ ತಪಾಸಣೆ ಮತ್ತು ಪ್ರಮಾಣೀಕರಣವನ್ನು ವಿದ್ಯುತ್ ನಿರೀಕ್ಷಕರು ಹಾಗೂ ಕೆಎಸ್ಪಿಸಿಬಿ ನಡೆಸುತ್ತಿವೆ. ಆದ್ದರಿಂದ, ಮಾಲ್ ಮಾಲೀಕರೇ ಹೊಂದಿರುವ ಜನರೇಟರ್ಗೆ ಪ್ರತಿ ವರ್ಷ ಗಣನೀಯ ಶುಲ್ಕ ಪಾವತಿಸಿ ಟ್ರೇಡ್ ಲೈಸೆನ್ಸ್ ಪಡೆಯಬೇಕು ಮತ್ತು ನವೀಕರಿಸಬೇಕು ಎಂಬ ಬಿಬಿಎಂಪಿಯ ಒತ್ತಾಯವನ್ನು ಒಪ್ಪಲಾಗದು ಎಂದು ನ್ಯಾಯಪೀಠ ಆದೇಶಿಸಿದೆ.
ಇದೇ ವೇಳೆ, ಮಾಲ್ ಮಾಲೀಕರಲ್ಲದೆ, ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆ ಡೀಸೆಲ್ ಜನರೇಟರ್ ಅಳವಡಿಸಿ ನಿರ್ವಹಿಸುತ್ತಿದ್ದರೆ ಈ ತೀರ್ಪು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಅಂತಹ ಸಂದರ್ಭದಲ್ಲಿ ಜನರೇಟರ್ ನಿರ್ವಹಣೆಯು ಪ್ರತ್ಯೇಕ ವ್ಯಾಪಾರ ಅಥವಾ ವ್ಯವಹಾರವಾಗಲಿದ್ದು, ಅದಕ್ಕೆ ಟ್ರೇಡ್ ಲೈಸೆನ್ಸ್ ಪಡೆಯಬೇಕಾಗುತ್ತದೆ ಎಂದು ಆದೇಶಿಸಿದೆ.
ಪ್ರಕರಣವೇನು?
ಬೆಂಗಳೂರಿನ ದೇವಸಂದ್ರ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ನಲ್ಲಿ ಕಂಪನಿಯು ಡೀಸೆಲ್ ಜನರೇಟರ್ ಅಳವಡಿಸಿತ್ತು. ಅದಕ್ಕಾಗಿ 2011ರಲ್ಲಿ ಬಿಬಿಎಂಪಿಗೆ 10 ಲಕ್ಷ ರೂ. ಪಾವತಿಸಿ ಪರವಾನಗಿ ಪಡೆದಿತ್ತು. 2013ರಲ್ಲಿ ಸ್ಪಷ್ಟನೆ ಕೋರುತ್ತಲೇ ನವೀಕರಣ ಶುಲ್ಕ ಮತ್ತು ದಂಡದ ರೂಪದಲ್ಲಿ 12.5 ಲಕ್ಷ ರೂ. ಪಾವತಿಸಿತ್ತು. 2015ರಲ್ಲಿ ಬಿಬಿಎಂಪಿ ಮತ್ತೊಮ್ಮೆ ಪರವಾನಗಿ ನವೀಕರಣ ಶುಲ್ಕ ಪಾವತಿಸುವಂತೆ ಬೇಡಿಕೆ ಇಟ್ಟಿತ್ತು.
ಇದನ್ನು ಪ್ರಶ್ನಿಸಿ ಮಾಲ್ ಅಭಿವೃದ್ಧಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಏಕಸದಸ್ಯ ನ್ಯಾಯಪೀಠ 2022ರಲ್ಲಿ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯ ಸೆಕ್ಷನ್ 354ರ ಅಡಿ ಬಿಬಿಎಂಪಿ ಶುಲ್ಕ ವಿಧಿಸಬಹುದೆಂದು ಅಭಿಪ್ರಾಯಪಟ್ಟು ಕಂಪನಿಯ ಅರ್ಜಿ ವಜಾಗೊಳಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಕಂಪನಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
Related Articles
Thank you for your comment. It is awaiting moderation.


Comments (0)