ಆಸ್ತಿ ಮಾರಾಟ ವಿಚಾರಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿ ಪತ್ನಿ ಹತ್ಯೆ; ಮರಣದಂಡನೆಗೆ ಗುರಿಯಾಗಿರುವ ಪತಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ಆಸ್ತಿ ಮಾರಾಟದ ದಾಖಲೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದ ಪತ್ನಿಯನ್ನು ಮಚ್ಚಿನಿಂದ 21 ಬಾರಿ ಕೊಚ್ಚಿ ಕೊಂದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಮಹೇಶ್ ಎಂಬಾತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೈಕೋರ್ಟ್‌ ನಿರಾಕರಿಸಿದೆ.

ಶಿಕ್ಷೆ ಅಮಾನತಿನಲ್ಲಿರಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಕೊಲೆಯಾದ ಮಹಿಳೆಯ ಪತಿ ಮಹೇಶ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಮತ್ತು ನ್ಯಾಯಮೂರ್ತಿ ಬಿ. ಪ್ರಮೋದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

ವಿಚಾರಣಾ ನ್ಯಾಯಾಲಯ ದಾಖಲಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ, ಮರಣೋತ್ತರ ಪರೀಕ್ಷಾ ವರದಿ ಹಾಗೂ ಇತರ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಪೀಠ, ಈ ಹಂತದಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಮೇಲ್ಮನವಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಯಾವುದೇ ಆಧಾರ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅಪರಾಧಿಗೆ ಯಾವುದೇ ಪರಿಹಾರ ಕಲ್ಪಿಸಲು ‌ನಿರಾಕರಿಸಿದೆ.

ಆದರೆ, ಮರಣದಂಡನೆ ಪ್ರಶ್ನಿಸಿ ಮಹೇಶ್ ಸಲ್ಲಿಸಿರುವ ಮುಖ್ಯ ಮೇಲ್ಮನವಿಯ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ನಿಗದಿಪಡಿಸಿರುವ ನ್ಯಾಯಾಲಯ, ಮಹೇಶ್‌ನ ಪೂರ್ವಾಪರಗಳ ಪರಿಶೀಲನೆ ಹಾಗೂ ಕಾರಾಗೃಹದಲ್ಲಿನ ಆತನ ನಡವಳಿಕೆ ಕುರಿತು ಪ್ರೊಬೇಷನ್‌ ಅಧಿಕಾರಿಯಿಂದ ವರದಿ ಪಡೆಯುವಂತೆಯೂ ನ್ಯಾಯಪೀಠ ಮೌಖಿಕವಾಗಿ ಪ್ರಾಸಿಕ್ಯೂಷನ್‌ಗೆ ಸೂಚನೆ ನೀಡಿದೆ.

ಪ್ರಕರಣವೇನು?
2024ರ ಏಪ್ರಿಲ್‌ 14ರಂದು ಕೆಲಸಕ್ಕೆ ತೆರಳುತ್ತಿದ್ದ ಶಿಲ್ಪಾ ಪ್ರಯಾಣಿಸಿದ್ದ ಬಸ್‌ನಲ್ಲಿಯೇ ಮಹೇಶ್‌ ಮಚ್ಚಿನೊಂದಿಗೆ ಹಿಂಬಾಲಿಸಿದ್ದ. ಅವರು ಬಸ್‌ನಿಂದ ಇಳಿದ ನಂತರ ಕೈಗಳನ್ನು ಹಿಡಿದು ಕುತ್ತಿಗೆ ಹಾಗೂ ದೇಹದ ಇತರ ಭಾಗಗಳ ಮೇಲೆ 21 ಬಾರಿ ಹಲ್ಲೆನಡೆಸಿದ್ದ ಎಂಬುದು ಪ್ರಾಸಿಕ್ಯೂಷನ್‌ ಆರೋಪವಾಗಿದೆ.

ತೀವ್ರವಾಗಿ ಗಾಯಗೊಂಡ ಶಿಲ್ಪಾ ಬಳಿಕ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಶಿಲ್ಪಾ ಅವರ ದೇಹದ ವಿವಿಧ ಭಾಗಗಳಲ್ಲಿ 21 ಗಾಯಗಳು ಪತ್ತೆಯಾಗಿದ್ದವು. ಘಟನೆಯ ಸಿಸಿ ಕ್ಯಾಮರಾ ದೃಶ್ಯಗಳು ಹಾಗೂ ಇತರ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಮಹೇಶ್‌ ಪೂರ್ವಯೋಜಿತವಾಗಿ ಕೊಲೆ ಮಾಡಿದ್ದಾನೆಂದು ತೀರ್ಮಾನಿಸಿದ್ದ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್ ನ್ಯಾಯಾಲಯ 2025ರ ಆಗಸ್ಟ್‌ನಲ್ಲಿ ಮಹೇಶ್‌ಗೆ ಐಪಿಸಿ ಸೆಕ್ಷ ನ್‌ 302ರಡಿ ಮರಣದಂಡನೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿತ್ತು. ಸೆಕ್ಷನ್‌ 498ಎ ಅಡಿ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡವನ್ನೂ ವಿಧಿಸಿತ್ತು. ಅಪರಾಧ ನಡೆದ ಸುಮಾರು 15 ತಿಂಗಳಲ್ಲೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿರುವ ಮರಣದಂಡನೆ ರದ್ದು ಕೋರಿ ಅಪರಾಧಿ ಮಹೇಶ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಮೇಲ್ಮನವಿ ವಿಚಾರಣೆ ವೇಳೆ ಮಹೇಶ್ ಪರ ವಕೀಲರು, ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಹಾಗೂ ಆರೋಪಿ ಮಚ್ಚನ್ನು ಎಸೆಯುವುದನ್ನು ಯಾರೂ ನೋಡಿಲ್ಲ. ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಅಪರಾಧ ನಿರ್ಣಯ ಮಾಡಲಾಗಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಕೋರಿದ್ದರು.

ಪ್ರಾಸಿಕ್ಯೂಷನ್‌ ಪರ ವಕೀಲರು, ಮಹೇಶ್‌ ಜೂಜಿನ ಚಟಕ್ಕೆ ಬಿದ್ದಿದ್ದ. ಕುಟುಂಬದ ಸಂಪೂರ್ಣ ಹೊಣೆಗಾರಿಕೆಯನ್ನು ಪತ್ನಿ ಶಿಲ್ಪಾ ನಿರ್ವಹಿಸುತ್ತಿದ್ದರು. ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದರನಿಗೆ ಸಂಬಂಧಿಸಿದಂತೆ ಶಿಲ್ಪಾ ಅವರಿಗೆ ದೊರೆತ ಪರಿಹಾರದ ಹಣವನ್ನು ನೀಡುವಂತೆಯೂ ಮಹೇಶ್‌ ಒತ್ತಡ ಹೇರುತ್ತಿದ್ದನು. ಸಾಲ ತೀರಿಸಲು ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ಮುಂದಾಗಿದ್ದ ಮಹೇಶ್‌, ಮಾರಾಟದ ದಾಖಲೆಗಳಿಗೆ ಸಹಿ ಹಾಕುವಂತೆ ಪತ್ನಿಯನ್ನು ಒತ್ತಾಯಿಸಿದ್ದನು. ಅದಕ್ಕೆ ಶಿಲ್ಪಾ ನಿರಾಕರಿಸಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದು, ಕೌಟುಂಬಿಕ ಕಲಹದಿಂದ ಶಿಲ್ಪಾ ಪೋಷಕರ ಮನೆಯಲ್ಲಿ ನೆಲೆಸಿ ಮೈಸೂರಿನ ಸಮೀಪದ ಗಾರ್ಮೆಂಟ್ಸ್ ಒಂದರಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

Related Articles

Comments (0)

Leave a Comment