ನಟ ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಆಕ್ಷೇಪಾರ್ಹ ಪೋಸ್ಟ್; ಆರೋಪಿ ವಿದ್ಯಾರ್ಥಿಗೆ ಹೈಕೋರ್ಟ್ ಚಾಟಿ
- by LegalSamachar
- September 18, 2026
- 9 Views
ಬೆಂಗಳೂರು: ನಟ ಪುನೀತ್ ರಾಜಕುಮಾರ್ ಸಾವಿನ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬೆಂಗಳೂರಿನ ಯುವಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಆರೋಪಿಯು ವಿದ್ಯಾರ್ಥಿ ಎಂಬುದನ್ನು ಪರಿಗಣಿಸಿ ಆತನ ವಿರುದ್ಧದ ಕಾನೂನು ಪ್ರಕ್ರಿಯೆ ರದ್ದುಪಡಿಸಿದೆ.
ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ನಂತರದ ಕಾನೂನು ಪ್ರಕ್ರಿಯೆ ರದ್ದು ಕೋರಿ ರಿತ್ವಿಕ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪುರಸ್ಕರಿಸಿದೆ.
ಹೈಕೋರ್ಟ್ ಹೇಳಿದ್ದೇನು?
ಅರ್ಜಿದಾರನ ಹೇಳಿಕೆ ಪರಿಗಣಿಸುವುದಲ್ಲ, ಸಂದರ್ಭ ಮತ್ತು ಯಾವ ಅರ್ಥದಲ್ಲಿ ಆತ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ ಎಂಬುದನ್ನು ಪರಿಗಣಿಸಬೇಕಿದೆ. ಗೌರವಾನ್ವಿತ ನಟ ಪುನೀತ್ ರಾಜಕುಮಾರ್ ಅವರು ನಿಧನರಾದ ಬಳಿಕ ಈ ಪೋಸ್ಟ್ ಹಾಕಿರುವುದು ದುಃಖಕರ ವಿಚಾರ. ಆ ಸಂದರ್ಭದಲ್ಲಿ ಇಂಥ ಪೋಸ್ಟ್ ಹಾಕುವುದರ ಬಗ್ಗೆ ಅರ್ಜಿದಾರನಿಗೆ ತಿಳಿದಿರಬೇಕಿತ್ತು. ಪುನೀತ್ ಅವರು ಯುವಕರು ಮದ್ಯ ಸೇವನೆ ಮಾಡುವುದನ್ನು ವಿರೋಧಿಸುತ್ತಿದ್ದರು. ಮದ್ಯದ ಬಾಟಲಿಯ ಮೇಲಿನ ಬಳಕೆ ಮಾಡಿರುವ ಪದವು ಐಟಿ ಕಾಯ್ದೆ ಸೆಕ್ಷನ್ 67ರ ವ್ಯಾಪ್ತಿಗೆ ಬರಲಿದೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರ ರಿತ್ವಿಕ್ ಭಾರತೀಯ ನಿವಾಸಿಯಲ್ಲ, ಇತ್ತೀಚೆಗೆ ಆತ ಭಾರತಕ್ಕೆ ಬಂದಿದ್ದಾನೆ. ಆತ ಅರ್ಥಶಾಸ್ತ್ರ ವಿಷಯದಲ್ಲಿ ಉತ್ತಮ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾನೆ ಎಂಬುದನ್ನು ಪರಿಗಣಿಸಿ, ಆತನ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸುವುದು ಆತನ ಭವಿಷ್ಯಕ್ಕೆ ಹಾನಿ ಮಾಡಲಿದೆ. ಅರ್ಜಿದಾರನಿಗೆ ವಿನಾಯಿತಿ ತೋರಿಸಬೇಕಿದೆ ಎಂಬುದನ್ನು ಪರಿಗಣಿಸಿ ಆತನಿಗೆ ಎಚ್ಚರಿಕೆ ನೀಡಿ, ಅರ್ಜಿದಾರನಿಗೆ ಸಲಹೆ ನೀಡಲು ವಕೀಲರಿಗೆ ನಿರ್ದೇಶಿಸಿ, ಅರ್ಜಿಯನ್ನು ಪುರಸ್ಕರಿಸಲಾಗಿದೆ. ಆತನ ವಿರುದ್ಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 153ಎ ಅಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ನಂತರದ ಕಾನೂನು ಪ್ರಕ್ರಿಯೆ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ನ್ಯಾಯಪೀಠ, ಇಂಥ ಸಂದೇಶವನ್ನು ಏಕೆ ಹಾಕಿದಿರಿ? ಸಾಮಾಜಿಕ ಮಾಧ್ಯಮ ಬಳಸಬಹುದು ಎಂದು ಇಂಥ ಪೋಸ್ಟ್ ಹಾಕಿದ್ದೀರಾ? ಪುನೀತ್ ಅವರ ನಿಧನದ ಸುದ್ದಿ ತಿಳಿದು ಇಂಥ ಪೋಸ್ಟ್ ಹಾಕಬಹುದೇ? ವಿಚಾರಣೆ ನಡೆಯಲಿ, ಅಲ್ಲಿ ನಿರ್ಧಾರವಾಗಲಿ ಬಿಡಿ. ಯಾವ ಪದ ಬಳಸಲಾಗಿದೆ ಎಂಬುದು ಗೊತ್ತೇ? ಪುನೀತ್ ಅವರು ರಾಜಕುಮಾರ್ ಅವರ ಪುತ್ರ. ಅವರು ನಿಧನರಾಗಿದ್ದಾರೆ. ಅವರಿಗೆ ಈ ಪದ ಬಳಕೆ ಮಾಡಲಾಗಿದೆ. ಅದರರ್ಥವೇನು? ಇದನ್ನು ನಾವು ಏರುಧ್ವನಿಯಲ್ಲಿ ಹೇಳುತ್ತಿಲ್ಲ ಅಷ್ಟೆ. ಇದು ಸಾಮಾನ್ಯ ಪೋಸ್ಟ್ ಅಲ್ಲ ಎಂದು ಹೇಳಿತು.
ಅರ್ಜಿದಾರನ ಪರ ವಕೀಲೆ ಪದ್ಮಾವತಿ ಅವರು, ರಿತ್ವಿಕ್ ಲಂಡನ್ನಲ್ಲಿ ಹುಟ್ಟಿ ಬೆಳೆದಿದ್ದು, ಅವರಿಗೆ ಪೋಸ್ಟ್ನ ಪರಿಣಾಮ ಗೊತ್ತಿರಲಿಲ್ಲ. ಬಳಿಕ ಪ್ರಮಾದವನ್ನು ಒಪ್ಪಿಕೊಂಡು ವಿಷಾದಿಸಿದ್ದಾರೆ. ಎರಡು ವರ್ಷಗಳ ಹಿಂದೆ ಈತ ಭಾರತಕ್ಕೆ ಮರಳಿದ್ದಾನೆ. ಪೋಸ್ಟ್ ಅನ್ನು ಅರ್ಜಿದಾರನ ಸ್ನೇಹಿತ ಹಾಕಿದ್ದಾನೆ. ಅಶೋಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಆತ ಪದವಿ ಓದುತ್ತಿದ್ದಾನೆ. ಇದು ಇನ್ಸ್ಟಾಗ್ರಾಂನಲ್ಲಿ ಹಾಕುವ ಸಂದೇಶವಾಗಿರಲಿಲ್ಲ. ಅರ್ಜಿದಾರ ಒಳ್ಳೆಯ ವಿದ್ಯಾರ್ಥಿಯಾಗಿದ್ದು, ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸುವುದು ಆತನ ಭವಿಷ್ಯದ ಜೀವನಕ್ಕೆ ಗಂಭೀರ ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ, ಆತನ ವಿರುದ್ಧದ ಕಾನೂನು ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿದರು.
ಪ್ರಕರಣವೇನು?
ಬೆಂಗಳೂರಿನ 22 ವರ್ಷದ ರಿತ್ವಿಕ್ ಶರ್ಮಾ 2021ರ ನವೆಂಬರ್ 1ರಂದು ಕಿಂಗ್ಫಿಷರ್ ಬಿಯರ್ ಬಾಟಲಿಯ ಮೇಲೆ “ರಾಜಕುಮಾರ್ CUNT ನಮ್ಮನ್ನು ತಡೆಯಲಾಗಲಿಲ್ಲ” ಎಂದು ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದನು. ಈ ಪೋಸ್ಟ್ ಅನ್ನು ಪುನೀತ್ ನಿಧನರಾದ ಬಳಿಕ ಹಾಕಲಾಗಿದೆ. ಇದು ಸಾಮಾಜಿಕ ಶಾಂತಿಗೆ ಭಂಗ ತರುವ ಕೃತ್ಯ ಎಂದು ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದುಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
Related Articles
Thank you for your comment. It is awaiting moderation.


Comments (0)