ಅಪ್ರಾಪ್ತ ಅನಾಥೆಗೆ ಆಶ್ರಯ ನೀಡಿದ್ದ ಮಾಹಿತಿ ಮುಚ್ಚಿಟ್ಟ ಆರೋಪ; ಪ್ರಕರಣ ರದ್ದು ಕೋರಿ ಮುರುಘಾ ಶರಣರಿಂದ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ನಡೆಸುತ್ತಿರುವ “ಮಡಿಲು ವಿಶೇಷ ದತ್ತು ಕೇಂದ್ರ”ದಲ್ಲಿ ಅಪ್ರಾಪ್ತ ಅನಾಥೆಗೆ ಆಶ್ರಯ ಕಲ್ಪಿಸಿದ್ದ ಬಗ್ಗೆ ಮಾಹಿತಿ ನೀಡದ ಆರೋಪದಲ್ಲಿ ಬಾಲ ನ್ಯಾಯ ಕಾಯ್ದೆಯಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಡಾ. ಶಿವಮೂರ್ತಿ ಮರುಘಾ ಶರಣರು ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಡಾ. ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೋಲೀಸರು ಹಾಗೂ ದೂರುದಾರರಾದ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧಿಕಾರಿ ಲೋಕೇಶ್ವರಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಸಿಡಬ್ಲ್ಯು‌ಸಿ ಅಧಿಕಾರಿ ಲೋಕೇಶ್ವರಪ್ಪ ಅವರು 2022ರ ಆಗಸ್ಟ್ 27ರಂದು ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ, ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ನಡೆಸುತ್ತಿರುವ ಮಡಿಲು ವಿಶೇಷ ದತ್ತು ಕೇಂದ್ರದಲ್ಲಿ ಅಪ್ರಾಪ್ತ ಅನಾಥೆಗೆ ಆಶ್ರಯ ಕಲ್ಪಿಸಲಾಗಿದೆ, ಮತ್ತೊಬ್ಬ ಬಾಲಕಿಯನ್ನು ಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಇಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿಲ್ಲ. ಅದು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 33 ಮತ್ತು 34ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.

ಈ ದೂರಿನ ಅನ್ವಯ 2022ರ ಅಕ್ಟೋಬರ್ 18ರಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪೊಲೀಸರು, ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಅನುಮತಿ ಕೋರಿದ್ದರು.‌ ಅದರಂತೆ ನ್ಯಾಯಾಲಯ ಅನುಮತಿ ನೀಡಿತ್ತು. ತನಿಖೆ ಮುಂದುವರಿಸಿದ ಪೊಲೀಸರು, ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 33 ಮತ್ತು 34ರ ಅಡಿ ಅರ್ಜಿದಾರರು ಹಾಗೂ ಇತರ ಏಳು ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅದನ್ನು ಅಂಗೀಕರಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ 2024ರ ಜುಲೈ 15ರಂದು ಅರ್ಜಿದಾರರಿಗೆ ಸಮನ್ಸ್ ಜಾರಿ ಮಾಡಿತ್ತು.

ಇದರಿಂದ, ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ‌ ಮರುಘಾ ಶರಣರು, ಪ್ರಕರಣದಲ್ಲಿ ನಾವು ಅಮಾಯಕರಾಗಿದ್ದೇವೆ. ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದ್ದು, ಅಕ್ರಮ ಬಂಧನ, ಶೋಷಣೆ ಮತ್ತು ತಪ್ಪಾದ ಗಳಿಕೆ ಆರೋಪಗಳಿಗೆ ಪೂರಕ ಸಾಕ್ಷ್ಯಾಧಾರಗಳಿಲ್ಲ ಎಂದು ಆಕ್ಷೇಪಿಸಿದ್ದಾರೆ.

Related Articles

Comments (0)

Leave a Comment