ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಕ್ರಮ ಬಂಧನ; ಸಂತ್ರಸ್ತರಿಗೆ ₹9 ಲಕ್ಷ ಪರಿಹಾರ ಪಾವತಿಸಲು ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ
- by LegalSamachar
- August 4, 2026
- 5 Views
ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನುರಹಿತ ಬಂಧನ ವಾರಂಟ್ (ಎನ್‌ಬಿಡಬ್ಲ್ಯು) ಜಾರಿ ಮಾಡದಿದ್ದರೂ 2014ರಲ್ಲಿ ಇಂಗ್ಲೆಂಡ್‌ನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರನ್ನು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಬಂಧಿಸಿದ್ದಲ್ಲದೆ, ಹೃದ್ರೋಗದಿಂದ ಬಳಲುತ್ತಿದ್ದ ಆತನ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕಿರುಕುಳ ನೀಡಿದ್ದ ಪ್ರಕರಣದಲ್ಲಿ 9 ಲಕ್ಷ ರೂ. ಪರಿಹಾರ ಪಾವತಿಸಲು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಡೆಸಿದ್ದ ಬಂಧನವನ್ನು ಅಕ್ರಮವೆಂದು ಘೋಷಿಸಬೇಕು ಹಾಗೂ ಪರಿಹಾರ ಪಾವತಿಸಲು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ವಿದ್ಯಾರಣ್ಯಪುರ ನಿವಾಸಿಗಳಾದ ಪಿ. ಜವರಶೆಟ್ಟಿ ಮತ್ತವರ ಪುತ್ರ ಸದ್ಯ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಜೆ. ನವೀನ್ ಕುಮಾರ್ 2015ರಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪಿ. ಜವರಶೆಟ್ಟಿ ಅವರಿಗೆ 5 ಲಕ್ಷ ರೂ. ಹಾಗೂ ಜೆ. ನವೀನ್ ಕುಮಾರ್‌ಗೆ 4 ಲಕ್ಷ ರೂ. ಪರಿಹಾರ ಪಾವತಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ. ಜತೆಗೆ, ಪರಿಹಾರದ ಹಣವನ್ನು 2014ರಲ್ಲಿ ಅಕ್ರಮ ಬಂಧನ ನಡೆಸಿದ್ದ ಅಂದಿನ ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅವರಿಂದ ವಸೂಲಿ ಮಾಡಬೇಕು. ಕಾನೂನುಬಾಹಿರವಾಗಿ ನಡೆದುಕೊಡ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಪೀಠ ಆದೇಶಿಸಿದೆ.
ಇದೇ ವೇಳೆ, ನವೀನ್ ಕುಮಾರ್ ಅವರ ಬಂಧನ ಹಾಗೂ ಅವರ ವಿರುದ್ಧ 2014ರಲ್ಲಿ ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದ ಪೊಲೀಸರ ಕ್ರಮವನ್ನು ಅಕ್ರಮವೆಂದು ನ್ಯಾಯಪೀಠ ಘೋಷಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ನವೀನ್ ಕುಮಾರ್ ಅವರ ಆರೋಪಗಳ ಪ್ರಕಾರ, 2011ರಲ್ಲಿ ಮದುವೆಯಾಗಿದ್ದ ಅವರು, ಮದುವೆ ನಂತರ ಪತ್ನಿಯೊಂದಿಗೆ ಇಂಗ್ಲೆಂಡ್‌ಗೆ ತೆರಳಿ ಉದ್ಯೋಗ ನಿರ್ವಹಿಸುತ್ತಿದ್ದರು. ಈ ವೇಳೆ, 2.5 ಕೋಟಿ ರೂ. ನೀಡಿ ಮನೆ ಖರೀದಿಸಿದ್ದಲ್ಲದೆ, ಪತ್ನಿಯೊಂದಿಗೆ ವ್ಯಾಪಾರ ಮಾಡಿದ್ದರು. ವ್ಯಾಪಾರ ವಹಿವಾಟಿಗಾಗಿ ಸಂಪಾದಿಸಿದ ಹಣವನ್ನು ಪತ್ನಿಗೆ ವರ್ಗಾಯಿಸಿದ್ದರು. ಐಷಾರಾಮಿ ಜೀವನ ಮತ್ತು ವ್ಯಾಪಾರ ವಹಿವಾಟಿನಲ್ಲಿ ಹಣ ನೋಡಿದ ಪತ್ನಿಗೆ ಅವರ ಸಂಬಂಧಿಕರು ತಲೆ ಕೆಡೆಸಿದ್ದರು. ಪತ್ನಿ ಇಂಗ್ಲೆಂಡ್‌ನಿಂದ 2014ರಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದರು ಎನ್ನಲಾಗಿದೆ.
ಇಂಗ್ಲೆಂಡ್‌ನಿಂದ ಬಂದ ನಂತರ ನವೀನ್ ಪೋಷಕರ ಜತೆ ಸುಖಾ ಸುಮ್ಮನೆ ಗಲಾಟೆ ಮಾಡಿಕೊಂಡಿದ್ದ ಪತ್ನಿ, ನವೀನ್ ಮತ್ತವರ ಪೋಷಕರು, ಸಹೋದರ ಮತ್ತು ಸಹೋದರಿ ವಿರುದ್ಧ 5 ಲಕ್ಷ ರೂ. ವರದಕ್ಷಿಣೆ ಕಿರುಕುಳ ನೀಡಿದ, ಜೀವ ಬೆದರಿಕೆ ಹಾಕಿದ ಆರೋಪದಲ್ಲಿ 2014ರ ಮಾರ್ಚ್ 10ರಂದು ವಿದ್ಯಾರಣ್ಯಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ನವೀನ್‌ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ 2014ರ ಜುಲೈ 18ರಂದು ಅಂತಿಮ ವರದಿ ಸಲ್ಲಿಸಿ ನವೀನ್ ಹಾಗೂ ಅವರ ತಾಯಿಯನ್ನು ಆರೋಪಿಯನ್ನಾಗಿಸಿದ್ದರು ಎಂದು ಹೇಳಲಾಗಿದೆ.
ಈ ಮಧ್ಯೆ ನವೀನ್ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರೂ, ಇಂಗ್ಲೆಂಡ್‌ನಿಂದ ನಗರಕ್ಕೆ ಬಂದ ಕೂಡಲೇ 2014ರ ಆಗಸ್ಟ್ 16ರಂದು ವಿದ್ಯಾರಣ್ಯಾಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಂಧಿಸಿದ್ದರು. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಯಾವುದೇ ಎನ್‌ಬಿಡಬ್ಲ್ಯು ಹೊರಡಿಸಿರಲಿಲ್ಲ. 2014ರ ಜುಲೈ 19ರಂದು ವಿದ್ಯಾರಣ್ಯಾಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ನವೀನ್ ಮನೆಗೆ ಮಫ್ತಿಯಲ್ಲಿ ತೆರಳಿ ಬಲವಂತವಾಗಿ ಅವರ ತಂದೆಯನ್ನು ಖಾಸಗಿ ಕಾರಿನಲ್ಲಿ ಕೂರಿಸಿಕೊಂಡು ಮಲ್ಲೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು ಎಂದು ನವೀನ್ ಆರೋಪಿಸಿದ್ದರು.
ಹೃದ್ರೋಗದಿಂದ ಬಳಲುತ್ತಿದ್ದ ತಂದೆ ಅದಾಗಲೇ 2 ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪೊಲೀಸರ ನಡೆಯಿಂದ ಆಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದರು. ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ದರಿಂದ, ತಮ್ಮ ಬಂಧನವನ್ನು ಅಕ್ರಮವೆಂದು ಘೋಷಿಸಬೇಕು ಮತ್ತು ತಮಗೆ ಪರಿಹಾರ ನೀಡಲು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ನವೀನ್ ಮತ್ತವರ ತಂದೆ 2015ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)