ಜಾತಿ ನಿಂದನೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಆರೋಪಮುಕ್ತ; ಜನಪ್ರತಿನಿಧಿಗಳ ಕೋರ್ಟ್ ಆದೇಶ

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಜಾತಿ ಉಲ್ಲೇಖಿಸಿ ನಿಂದಿಸಿದ ಹಾಗೂ ಜೀವಬೆದರಿಕೆಯೊಡ್ಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣದಿಂದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಆರೋಪಮುಕ್ತಗೊಳಿಸಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಮಾಜಿ ಕಾರ್ಪೊರೇಟರ್ ವೇಲುನಾಯ್ಕರ್‌ ನೀಡಿದ್ದ ದೂರು ಆಧರಿಸಿ ವೈಯಾಲಿಕಾವಲ್‌ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣದಿಂದ ಬಿಡುಗಡೆ ಕೋರಿ ಮುನಿರತ್ನ ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಇತ್ತೀಚೆಗೆ ಪುರಸ್ಕರಿಸಿದ್ದಾರೆ.

ಕೋರ್ಟ್ ಆದೇಶವೇನು?
ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಬೇಕಾದರೆ ಜಾತಿ ನಿಂದನೆಯು ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು. ಆದರೆ, ಅರ್ಜಿದಾರರು ಎಸಗಿದ್ದಾರೆ ಎನ್ನಲಾದ ಕೃತ್ಯ ಸಾರ್ವಜನಿಕ ಸ್ಥಳದಲ್ಲಿ ನಡೆದಿಲ್ಲ. ಘಟನೆ ನಡೆದ ಹಲವು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ. ಅರ್ಜಿದಾರರ ವಿರುದ್ಧದ ಆರೋಪಗಳು ಅನುಮಾನಕ್ಕೆ ಕಾರಣವಾಗುತ್ತಿದೆ. ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿ ಮತ್ತು ಸಾಕ್ಷ್ಯಾಧಾರಗಳಿಂದ ಆರೋಪವನ್ನು ಸಾಬೀತುಪಡಿಸಲಾಗುವುದಿಲ್ಲ. ಆದ್ದರಿಂದ, ಮುನಿರತ್ನ ಅವರನ್ನು ಆರೋಪ ಮುಕ್ತಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರವ ನ್ಯಾಯಾಲಯ, ಮುನಿರತ್ನ ಅವರಿಂದ ಜಾತಿ ನಿಂದನೆ ನಡೆದ ಸಂದರ್ಭದಲ್ಲಿ ದೂರುದಾರ ವೇಲು ನಾಯ್ಕರ್ ಸ್ಥಳದಲ್ಲೇ ಹಾಜರಿರಲಿಲ್ಲ. ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಅಪರಾಧ ಸಾಬೀತಾಗಬೇಕಾದರೆ ಜಾತಿ ನಿಂದನೆ ಸಾರ್ವಜನಿಕರು ನೋಡುವಂತಹ ಸ್ಥಳದಲ್ಲಿ ನಡೆಯಬೇಕು ಹಾಗೂ ಅವಮಾನಕ್ಕೊಳಗಾದ ವ್ಯಕ್ತಿಯೂ ಅಲ್ಲಿ ಹಾಜರಿರಬೇಕು ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಆ ಎರಡೂ ಅಂಶಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅದೇ ರೀತಿ, ಐಪಿಸಿ ಸೆಕ್ಷನ್‌ 504 ಮತ್ತು 506ರ ಅಡಿ ದಾಖಲಿಸಲಾಗಿದ್ದ ಉದ್ದೇಶಪೂರ್ವಕ ಅವಮಾನ ಹಾಗೂ ಜೀವ ಬೆದರಿಕೆ ಆರೋಪಗಳಿಗೂ ಪೂರಕ ಅಂಶಗಳು ದಾಖಲೆಗಳಲ್ಲಿ ಕಾಣುತ್ತಿಲ್ಲ. ದೂರುದಾರರಿಗೆ ಘಟನೆಯ ಮಾಹಿತಿ ಸುಮಾರು ನಾಲ್ಕು ತಿಂಗಳ ಬಳಿಕ ತಿಳಿದಿರುವುದರಿಂದ ಭಯ ಅಥವಾ ಆತಂಕ ಉಂಟುಮಾಡುವ ಉದ್ದೇಶ ಸಾಬೀತಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುನಿರತ್ನ ವಿರುದ್ಧದ ಆರೋಪವೇನು?
ಪ್ರಕರಣದ ದೂರಿನ ಪ್ರಕಾರ, ಮುನಿರತ್ನ ಅವರ ಕ್ಷೇತ್ರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದರಲ್ಲದೆ, ಪ್ರತಿ ತಿಂಗಳು ಲಂಚ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ನಡುವೆ ದೂರುದಾರ ವೇಲು ನಾಯ್ಕರ್‌ ಅವರು ಅಲ್ಲಿನ ಗುತ್ತಿಗೆದಾರ ಚೆಲುವರಾಜು ಅವರಿಗೆ ಲಂಚ ನೀಡದಂತೆ ಒತ್ತಡ ಹಾಕಿದ್ದರು. ಇದರಿಂದ, ವೇಲುನಾಯ್ಕರ್‌ ವಿರುದ್ಧ ಮುನಿರತ್ನ ಕೋಪಗೊಂಡಿದ್ದರು. ಈ ನಡುವೆ ಗುತ್ತಿಗೆದಾರರೊಂದಿಗೆ ನಡೆದ ಸಭೆಯ ಬಳಿಕ ವೇಲುನಾಯ್ಕರ್‌ ಅವರ ಜಾತಿಯ ಹೆಸರು ಬಳಸಿ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದರು ಎಂದು ಆರೋಪಿಸಿ ಮನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ತನಿಖೆ ನಡೆಸಿ ಮುನಿರತ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಅದರಲ್ಲಿ, 2024 ಮೇ 18ರಂದು ಮುನಿರತ್ನ ಮನೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಗುತ್ತಿಗೆದಾರರ ಸಭೆ ನಡೆದಿದ್ದು, ಆ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್‌ ವೇಲು ನಾಯ್ಕರ್‌ಗೆ ಜಾತಿ ನಿಂದನೆ ಮಾಡಲಾಗಿದೆ ಹಾಗೂ ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಈ ಅಂಶ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದು, 2024ರ ಸೆಪ್ಟಂಬರ್‌ 13ರಂದು ದೂರುದಾರರಿಗೆ ಈ ವಿಚಾರ ತಿಳಿದು ದೂರು ದಾಖಲಿಸಲಾಗಿದೆ ಎಂದು ಆರೋಪ ವಿವರಿಸಲಾಗಿತ್ತು. ಈ ಪ್ರಕರಣದಿಂದ ಆರೋಪ ಮುಕ್ತಗೊಳಿಸಲು ಕೋರಿ ಮುನಿರತ್ನ ಕೋರ್ಟ್ ಮೊರೆ ಹೋಗಿದ್ದರು.

Related Articles

Comments (0)

Leave a Comment