- ಟ್ರಯಲ್ ಕೋರ್ಟ್
- Like this post: 7
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ದರ್ಶನ್ ಖುದ್ದು ಹಾಜರಿಯ ಅಗತ್ಯವಿಲ್ಲ; ಎಸ್‌ಪಿಪಿ ಪ್ರತಿಪಾದನೆ
- by LegalSamachar
- August 12, 2026
- 9 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಯೊಬ್ಬರ ಪಾಟಿ ಸವಾಲು ಗುರಿಪಡಿಸುವ ವೇಳೆ ಪ್ರಮುಖ ಆರೋಪಿಯಾದ ನಟ ದರ್ಶನ್ ನ್ಯಾಯಾಲಯದಲ್ಲಿ ವಿಚಾರಣೆಗೆ ಖುದ್ದು ಹಾಜರಾಗುವ ಅಗತ್ಯವಿಲ್ಲವಾಗಿದ್ದು, ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರೆ ಸಾಕು ಎಂದು ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪಿ. ಪ್ರಸನ್ನ ಕುಮಾರ್ ಪ್ರತಿಪಾದಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಯನ್ನು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಮುಂದುವರಿಸಿತು.
ಪ್ರಕರಣದ 19ನೇ ಪ್ರಾಸಿಕ್ಯೂಷನ್ ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸುವಾಗ ನಟ ದರ್ಶನ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಆದೇಶಿಸಬೇಕು ಎಂದು ಕೋರಿ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಪ್ರಕರಣದಲ್ಲಿ ದೋಷಾರೋಪ ಹೊರಿಸುವ ವೇಳೆಯಲ್ಲಿ ದರ್ಶನ್ ಸೇರಿ ಇತರ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದ ಸಮಯದಲ್ಲಿ ಕೋರ್ಟ್ ಹಾಲ್ ಜನ ಸಂದಣಿಯಿಂದ ತುಂಬಿತ್ತು. ನ್ಯಾಯಾಧೀಶರು ಹೇಳುವ ಮಾತು ಆರೋಪಿಗಳಿಗೆ ಕೇಳುತ್ತಲೇ ಇರಲಿಲ್ಲ. ದೋಷಾರೋಪ ಹೊರಿಸುವ ಪ್ರಕ್ರಿಯೆಗಾಗಿಯೇ ಅರ್ಧದಿನ ಕಳೆದು ಹೋಗಿತ್ತು. ದರ್ಶನ್ ನ್ಯಾಯಾಲಯಕ್ಕೆ ಹಾಜರಾದರೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಬೇಕಾಗುತ್ತದೆ. ಸದ್ಯ ಕೆಲ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮಿ ಹಬ್ಬ, ಈದ್-ಮಿಲಾದ್ ಹಬ್ಬಗಳಿವೆ. ಆ ವೇಳೆ ಸೂಕ್ತ ಬಂದೋಬಸ್ತ್ ಮಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಮುಂದುವರಿದು, ತಂತ್ರಜ್ಞಾನದ ಮೂಲಕ ಜಗತ್ತಿನ ಯಾವುದೇ ಭಾಗದ ಚಟುವಟಿಕೆ ವೀಕ್ಷಿಸಬಹುದಾಗಿದೆ. ದರ್ಶನ್ ಕೋರ್ಟ್ ಹಾಲ್‌ನಲ್ಲಿ ಖುದ್ದು ಹಾಜರಾಗಿ ಪಾಟಿ ಸವಾಲು ಪ್ರಕ್ರಿಯೆಯನ್ನು ಕೇಳಿಕೊಳ್ಳುವುದಕ್ಕಿಂದ ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣಾ ಪ್ರಕ್ರಿಯೆ ಕೇಳಿಸಿಕೊಳ್ಳುವುದು ಉತ್ತಮ. ವಿಸಿ ಮೂಲಕವೂ ಸಾಕ್ಷಿಗಳು ದಾಖಲಿಸುವ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತದೆ. ತಂತ್ರಜ್ಞಾನ ಬೆಳೆದಿದ್ದರೂ ಆರೋಪಿಗಳ ವಕೀಲರು ಈಗಲೂ ಶಿಲಾಯುಗದ ಪ್ರಕ್ರಿಯೆಗೆ ಮನವಿ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಲು ವಕೀಲರು, ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಸೂಕ್ತ ಅವಕಾಶ ಕಲ್ಪಿಸಲಾಗಿದೆ. ಮೇಲಾಗಿ ಪ್ರತ್ಯೇಕವಾಗಿ ಮಾತುಕತೆಗೆ ಅವಕಾಶ ಸಹ ಕಲ್ಪಿಸಲಾಗಿದೆ. ದರ್ಶನ್ ಭೇಟಿ ಮಾಡಲು ಯಾವುದೇ ನಿರ್ಬಂಧ ಹಾಕಿಲ್ಲ. ಜೈಲಿನಿಂದಲೇ ಹಲವು ಬಾರಿ ಕುಟುಂಬದ ಸದಸ್ಯರೊಂದಿಗೆ ದೂರುವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ ಎಂದೂ ನ್ಯಾಯಾಲಯದ ಗಮನಕ್ಕೆ ತಂದರು.
ಎಸ್‌ಪಿಪಿ ಅವರ ವಾದಕ್ಕೆ ಪ್ರತಿವಾದ ಮತ್ತು ದರ್ಶನ್ ಕೋರ್ಟ್‌ಗೆ ಹಾಜರಾಗುವ ಅಗತ್ಯತೆ ಬಗ್ಗೆ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)